ಬೆಂಗಳೂರು,ನ.11- ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿರುವ ನಮ್ಮ ಮೆಟ್ರೋ ಪಿಂಕ್ ಲೈನ್ನ ಕಾಲೇನ ಅಗ್ರಹಾರ-ತಾವರೆಕೆರೆ ನಡುವಿನ 7.5 ಕಿ.ಮೀ ಉದ್ದದ ಮೇಲ್ಸೇತುವೆ ಮಾರ್ಗ ಲೋಕಾರ್ಪಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ನ.13ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಕಾಲೇನ ಅಗ್ರಹಾರದಿಂದ ತಾವರೆಕೆರೆವರೆಗೆ ನಿರ್ಮಾಣಗೊಂಡಿರುವ ಈ ಮಾರ್ಗದಲ್ಲಿ ಕಾಲೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ.ನಗರ 4ನೇ ಹಂತ, ಜಯದೇವ ಆಸ್ಪತ್ರೆ ಹಾಗೂ ತಾವರೆಕೆರೆ ಸೇರಿದಂತೆ ಪ್ರಮುಖ ನಿಲ್ದಾಣಗಳಿವೆ. ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಪಿಂಕ್ ಲೈನ್ ಮತ್ತು ಯೆಲ್ಲೋ ಲೈನ್ ನಡುವೆ ಸಂಪರ್ಕ ಕಲ್ಪಿಸಲಾಗಿದ್ದು, ದಕ್ಷಿಣ ಬೆಂಗಳೂರಿನ ಪ್ರಯಾಣಿಕರಿಗೆ ಇದು ಪ್ರಮುಖ ಇಂಟರ್ಚೇಂಜ್ ಆಗಲಿದೆ.
ಉದ್ಘಾಟನೆಯ ಬಳಿಕ ಬೆಂಗಳೂರಿನ ಕಾರ್ಯಾಚರಣೆಯಲ್ಲಿರುವ ಮೆಟ್ರೋ ಜಾಲದ ಒಟ್ಟು ಉದ್ದ 96.1 ಕಿ.ಮೀ.ಯಿಂದ 103.6 ಕಿ.ಮೀ.ಗೆ ಏರಿಕೆಯಾಗಲಿದೆ. ಇದರೊಂದಿಗೆ ಬೆಂಗಳೂರು ದೇಶದಲ್ಲಿ ದೆಹಲಿಯ ನಂತರ ಎರಡನೇ ಅತಿ ದೊಡ್ಡ ಕಾರ್ಯಾಚರಣೆಯ ಮೆಟ್ರೋ ಜಾಲ ಹೊಂದಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಕಾರ್ಯಕ್ರಮದ ಅಂಗವಾಗಿ ಪ್ರಧಾನಿ ಮೋದಿ ಅವರು ತಾವರೆಕೆರೆ ನಿಲ್ದಾಣದಿಂದ ಐಐಎಂಬಿ-ಬಿಳೇಕಹಳ್ಳಿ ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿ ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಪಿಂಕ್ಲೈನ್ ಒಟ್ಟು 21.25 ಕಿ.ಮೀ. ಉದ್ದದ ಕಾಲೇನ ಅಗ್ರಹಾರ-ನಾಗವಾರ ಮಾರ್ಗವಾಗಿದೆ. ಇದರಲ್ಲಿ 7.5 ಕಿ.ಮೀ. ಮೇಲ್ಸೇತುವೆ ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದ್ದು, ಉಳಿದ ಭಾಗದಲ್ಲಿ ಭೂಗತ ಮಾರ್ಗದ ಕಾಮಗಾರಿ ಮುಂದುವರಿದಿದೆ. ಪೂರ್ಣ ಮಾರ್ಗ ಕಾರ್ಯಾರಂಭಗೊಂಡ ಬಳಿಕ ದಕ್ಷಿಣ ಬೆಂಗಳೂರಿನಿಂದ ಉತ್ತರ ಬೆಂಗಳೂರಿನ ನಾಗವಾರ ಮತ್ತು ಪ್ರಮುಖ ವಾಣಿಜ್ಯ ಪ್ರದೇಶಗಳಿಗೆ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ.
ಪಿಂಕ್ ಲೈನ್ ಕಾರ್ಯಾರಂಭದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರದ ಒತ್ತಡ ಕಡಿಮೆ ಮಾಡುವುದರ ಜೊತೆಗೆ, ಐಐಎಂಬಿ, ಜಯದೇವ ಆಸ್ಪತ್ರೆ, ಜೆ.ಪಿ.ನಗರ, ಹುಳಿಮಾವು ಸೇರಿದಂತೆ ದಕ್ಷಿಣ ಬೆಂಗಳೂರಿನ ಪ್ರಮುಖ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸಂಪರ್ಕ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.
ನವೆಂಬರ್ 13ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಭದ್ರತಾ ವ್ಯವಸ್ಥೆ, ಸಂಚಾರ ನಿರ್ವಹಣೆ ಹಾಗೂ ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆಗಳಿಗೆ ಅಽಕಾರಿಗಳು ಅಂತಿಮ ರೂಪ ನೀಡುತ್ತಿದ್ದಾರೆ. ಈ ಉದ್ಘಾಟನೆಯೊಂದಿಗೆ ಬೆಂಗಳೂರಿನ ಮೆಟ್ರೋ ಜಾಲವು ಮೊದಲ ಬಾರಿಗೆ 100 ಕಿ.ಮೀ. ಗಡಿ ದಾಟುತ್ತಿರುವುದು ನಗರದ ಸಾರ್ವಜನಿಕ ಸಾರಿಗೆ ಇತಿಹಾಸದಲ್ಲಿ ಪ್ರಮುಖ ಮೈಲುಗಲ್ಲಾಗಲಿದೆ.
ವಂದೇ ಭಾರತ್ ರೈಲಿಗೂ ಚಾಲನೆ
ಬಹುನಿರೀಕ್ಷಿತ ಬೆಂಗಳೂರು-ಮಂಗಳೂರು-ಗೋವಾ ವಂದೇ ಭಾರತ್ ಎಕ್್ಸಪ್ರೆಸ್ ರೈಲು ಸೇವೆಗೆ ನವೆಂಬರ್ 13ರಂದು ಚಾಲನೆ ದೊರೆಯುವ ಸಾಧ್ಯತೆಯಿದೆ. ಬೆಂಗಳೂರಿನಿಂದ ಪ್ರಧಾನಿ ನರೇಂದ್ರಮೋದಿ ಹಾಗೂ ಮಂಗಳೂರು ಜಂಕ್ಷನ್ನಿಂದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಏಕಕಾಲದಲ್ಲಿ ರೈಲಿಗೆ ಚಾಲನೆ ನೀಡಲಿದ್ದಾರೆ ಎಂದು ನೈಋತ್ಯ ರೈಲ್ವೆ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ನಡೆಯಲಿರುವ ನಮ್ಮ ಮೆಟ್ರೋ ಪಿಂಕ್ ಲೈನ್ನ 7.5 ಕಿ.ಮೀ. ಮಾರ್ಗದ ಉದ್ಘಾಟನೆ ಕಾರ್ಯಕ್ರಮದ ಸಂದರ್ಭದಲ್ಲೇ ಪ್ರಧಾನಿ ಮೋದಿ ಅವರು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಹೊರಡುವ ವಂದೇ ಭಾರತ್ ರೈಲಿಗೆ ದೂರಸ್ಥ ವಿಧಾನದ ಮೂಲಕ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಅಶ್ವಿನಿ ವೈಷ್ಣವ್ ಅವರು ಮಂಗಳೂರು ಜಂಕ್ಷನ್ನಲ್ಲಿ ಮಧ್ಯಾಹ್ನ ಸುಮಾರು 2.30ಕ್ಕೆ ರೈಲಿಗೆ ಚಾಲನೆ ನೀಡುವ ಸಾಧ್ಯತೆಯಿದೆ.
ಈ ಹೊಸ ಸೇವೆಯು ಪ್ರಸ್ತುತ ಸಂಚರಿಸುತ್ತಿರುವ ಮಂಗಳೂರು ಸೆಂಟ್ರಲ್-ಮಡಗಾಂವ್-ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್್ಸಪ್ರೆಸ್ ಸೇವೆಯನ್ನು ವಿಸ್ತರಿಸಿ ಆರಂಭಿಸಲಾಗುತ್ತಿದೆ. ಸೆಪ್ಟೆಂಬರ್ 29ರಂದು ರೈಲ್ವೆ ಸಚಿವಾಲಯವು ಯಶವಂತಪುರ-ಮಂಗಳೂರು-ಮಡಗಾಂವ್-ಯಶವಂತಪುರ ಮಾರ್ಗದ ವಂದೇ ಭಾರತ್ ಸೇವೆಯನ್ನು ಘೋಷಿಸಿತ್ತು. ಇದಕ್ಕೆ ರೈಲು ಸಂಖ್ಯೆ 26655/656 ನಿಗದಿಪಡಿಸಲಾಗಿದೆ.
12 ಪ್ರಮುಖ ನಿಲ್ದಾಣಗಳು
ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್್ಸಪ್ರೆಸ್ಗೆ ಬೆಂಗಳೂರು ಮತ್ತು ಮಡಗಾಂವ್ ಹೊರತುಪಡಿಸಿ ಒಟ್ಟು 12 ನಿಲ್ದಾಣಗಳಿರಲಿವೆ. ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್, ಕಾರವಾರ ಮಾರ್ಗಗಳ ಮೂಲಕ ಬೆಂಗಳೂರು, ಹಾಸನ, ಕರಾವಳಿ ಕರ್ನಾಟಕ ಹಾಗೂ ಉತ್ತರ ಕನ್ನಡ ಭಾಗಗಳನ್ನು ಸಂಪರ್ಕಿಸುವ ವೇಗದ ರೈಲು ಸೇವೆಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ.
12 ಗಂಟೆ 20 ನಿಮಿಷಗಳ ಪ್ರಯಾಣ
ನಿಗದಿಪಡಿಸಿರುವ ವೇಳಾಪಟ್ಟಿಯ ಪ್ರಕಾರ, ಬುಧವಾರ ಹೊರತುಪಡಿಸಿ ಯಶವಂತಪುರದಿಂದ ರೈಲು ಬೆಳಿಗ್ಗೆ 7.35ಕ್ಕೆ ಹೊರಟು ರಾತ್ರಿ 8.55ಕ್ಕೆ ಮಡಗಾಂವ್ ತಲುಪಲಿದೆ. ಒಟ್ಟು ಪ್ರಯಾಣದ ಅವಽ ಸುಮಾರು 12 ಗಂಟೆ 20 ನಿಮಿಷಗಳು.ಮರುದಿನ ಮಡಗಾಂವ್ನಿಂದ ಬೆಳಿಗ್ಗೆ 8.20ಕ್ಕೆ ಹೊರಡುವ ರೈಲು ರಾತ್ರಿ 9.15ಕ್ಕೆ ಯಶವಂತಪುರ ತಲುಪಲಿದೆ. ಗುರುವಾರ ಹೊರತುಪಡಿಸಿ ಈ ಪ್ರಯಾಣಕ್ಕೆ ಸುಮಾರು 13 ಗಂಟೆಗಳ ಕಾಲ ಬೇಕಾಗಲಿದೆ. ರೈಲು ಸೇವೆಗಾಗಿ ಅಗತ್ಯವಿರುವ ಎರಡು ರೇಕ್ಗಳನ್ನು ಸಿದ್ಧಪಡಿಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಉದ್ಘಾಟನಾ ರೈಲುಗಳು ಏಕಕಾಲದಲ್ಲಿ ಸಂಚಾರ
ನವೆಂಬರ್ 13ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಂಗಳೂರು ಮತ್ತು ಮಂಗಳೂರಿನಿಂದ ವಿಶೇಷ ರೈಲುಗಳು ಏಕಕಾಲದಲ್ಲಿ ಸಂಚರಿಸುವ ನಿರೀಕ್ಷೆಯಿದೆ. ಉದ್ಘಾಟನೆಯ ಬಳಿಕ ಒಂದು ಅಥವಾ ಎರಡು ದಿನಗಳಲ್ಲಿ ನಿಯಮಿತ ವಂದೇ ಭಾರತ್ ಸೇವೆ ಆರಂಭವಾಗುವ ಸಾಧ್ಯತೆಯಿದ್ದು, ಈ ಸೇವೆ ಪ್ರಸ್ತುತ ಎಸ್ಎಂವಿಟಿಬಿ ಬದಲಿಗೆ ಯಶವಂತಪುರದಿಂದ ಕಾರ್ಯಾಚರಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು-ಮಂಗಳೂರು-ಗೋವಾ ಮಾರ್ಗದ ಈ ರೈಲು ಸೇವೆ ಕರ್ನಾಟಕದ ರಾಜಧಾನಿ ಬೆಂಗಳೂರು, ಕರಾವಳಿ ಕರ್ನಾಟಕ ಹಾಗೂ ಗೋವಾ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ವಿಶೇಷವಾಗಿ ಕರಾವಳಿ ಭಾಗದ ಪ್ರಯಾಣಿಕರು ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಈ ಸೇವೆ ಪ್ರವಾಸೋದ್ಯಮ, ವ್ಯಾಪಾರ ಮತ್ತು ಉದ್ಯೋಗ ಸಂಬಂಽತ ಸಂಚಾರಕ್ಕೂ ಅನುಕೂಲವಾಗಲಿದೆ.
