ಹುಬ್ಬಳ್ಳಿ,ಏ.19- ವಿದ್ಯಾರ್ಥಿನಿ ನೇಹಾ ಕುಟುಂಬದಲ್ಲಿ ಮುಗಿಲು ಮುಟ್ಟಿದ ಆಕ್ರಂದನ… ಹುಬ್ಬಳ್ಳಿಯಲ್ಲಿ ಮಡುವುಗಟ್ಟಿದ ಆಕ್ರೋಶ… ಪೊಷಕರ ಅಳಲು… ನಿನ್ನೆ ಕೊಲೆಯಾದ ವಿದ್ಯಾರ್ಥಿನಿ ನೇಹಾ ಮೃತದೇಹವನ್ನು ಪೊಷಕರಿಗೆ ಹಸ್ತಾಂತರಿಸುತ್ತಿದ್ದಂತೆ ಸಂಬಂಕರ ರೋಧನ ಹೇಳತೀರದಾಗಿತ್ತು.
ಪ್ರೀತಿಸಲು ನಿರಾಕರಿಸಿದ ಒಂದು ಕಾರಣಕ್ಕೆ ಕಾಲೇಜು ಆವರಣದಲ್ಲಿ ಚಾಕುವಿನಿಂದ ಇರಿದು ದುಷ್ಕರ್ಮಿಯೊಬ್ಬ ವಿದ್ಯಾರ್ಥಿನಿ ನೇಹಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಜೀವನದಲ್ಲಿ ಹತ್ತು ಹಲವು ಕನಸುಗಳನ್ನು ಕಟ್ಟಿಕೊಂಡ ಕಾರ್ಪೊರೇಟರ್ ಮಗಳು ನೇಹಾ ಎಂಸಿಎ ಪರೀಕ್ಷೆ ಬರೆದು ಹೊರಬರುತ್ತಿದ್ದಂತೆ ಸವದತ್ತಿ ತಾಲ್ಲೂಕಿನ ಮುನಳ್ಳಿ ಮೂಲದ ಪಯಾಜ್ ಎಂಬ ದುಷ್ಕರ್ಮಿ ಚಾಕುವಿನಿಂದ ಇರಿದಿರಿದು ಭೀಕರವಾಗಿ ಕೊಲೆ ಮಾಡಿದ್ದ. ನೆಲದಲ್ಲಿ ಬಿದ್ದು ಒರಳಾಡಿ ಒರಳಾಡಿ ಯುವತಿ ಪ್ರಾಣ ಬಿಟ್ಟಿದ್ದಳು.
ಪಾಗಲ್ ಪ್ರೇಮಿ ಭೀಕರವಾಗಿ ಯುವತಿಯನ್ನು ಕೊಲೆ ಮಾಡಿದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡು ಹುಬ್ಬಳ್ಳಿಯಾದ್ಯಂತ ಪ್ರತಿಭಟನೆ, ಆಕ್ರೋಶ ಕಿಚ್ಚು ಭುಗಿಲೆದ್ದಿತ್ತು.ಈ ಪ್ರಕರಣವನ್ನು ಖಂಡಿಸಿ ಹಿಂದೂಪರ ಸಂಘಟನೆಗಳು, ಶ್ರೀರಾಮಸೇನೆ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆನಡೆಸಿ ಪ್ರಕರಣವನ್ನು ತೀವ್ರವಾಗಿ ಖಂಡಿಸಿವೆ.
ಇದಲ್ಲದೆ, ಕೊಲೆ ಮಾಡಿದ ದುಷ್ಕರ್ಮಿಯ ಊರಾದ ಸವದತ್ತಿಯ ಮುನಳ್ಳಿಯಲ್ಲೂ ಕೂಡ ಬಂದ್, ಪ್ರತಿಭಟನೆ ಮಾಡಲಾಯಿತು. ಈ ಪ್ರಕರಣವನ್ನು ಖಂಡಿಸಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಆರೋಪಿಯನ್ನು ಗಲ್ಲಿಗೇರಿಸುವಂತೆ ಹಿಂದೂ ಸಂಘಟನೆಗಳು, ಹಲವು ನಾಗರಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು ಒತ್ತಾಯಿಸಿವೆ.
ನೇಹಾ ಕೊಲೆ ಖಂಡಿಸಿ ಹುಬ್ಬಳ್ಳಿಯ ಬಿವಿಬಿ ಕಾಲೇಜು ಮುಂಭಾಗ ಎಬಿವಿಪಿ ಕಾರ್ಯಕರ್ತರು ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಕ್ಕಾರ ಕೂಗಿಆರೋಪಿ ಪಯಾಜ್ನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದರು. ಮತ್ತೊಂದೆಡೆ ಎನ್ಎಸ್ಯುಐ ಕಾರ್ಯಕರ್ತರು ಕೂಡ ಕಿಮ್ಸ್ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದರು.
ಹಿಂದೂ ಸಂಘಟನೆಯ ಕಾರ್ಯಕರ್ತರು ವಿದ್ಯಾನಗರ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಆರೋಪಿ ಮನೆಗೆ ಬೆಂಕಿ ಹಚ್ಚಿ ಸುಡಬೇಕೆಂದು ಆಕ್ರೋಶ ಹೊರಹಾಕಿದ್ದಾರೆ.ಅಲ್ಲದೆ, ಆರೋಪಿ ಪರ ಯಾರೂ ವಕಾಲತ್ತು ವಹಿಸಬಾರದು, ಯಾರೂ ಜಾಮೀನಿಗೆ ಅರ್ಜಿ ಸಲ್ಲಿಸಬಾರದು, ಅವರನ್ನು ಎನ್ಕೌಂಟರ್ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಅರಾಜಕತೆಯೇ ಆಡಳಿತದ ಧ್ಯೇಯ. ಕಾನೂನು ಸುವ್ಯವಸ್ಥೆ ಮಂಗಮಾಯ. ಇದು ಕಾಂಗ್ರೆಸ್ ಸರ್ಕಾರದ ಆಡಳಿತದ ಮಂತ್ರ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.ಸಿದ್ದರಾಮಯ್ಯನವರ ಓಲೈಕೆಯ ಪ್ರತಿಫಲವಾಗಿ ಹುಬ್ಬಳ್ಳಿಯ ಕಾಲೇಜಿನಲ್ಲಿ ಹಾಡಹಗಲೇ ವಿದ್ಯಾರ್ಥಿನಿಯ ಬರ್ಬರ ಕೊಲೆಯಾಗಿದೆ. ನಿಮ್ಮ ತುಷ್ಠೀಕರಣಕ್ಕೆ ಇನ್ನೆಷ್ಟು ಅಮಾಯಕರ ಬಲಿಯಾಗಬೇಕು ಎಂದು ಪ್ರಶ್ನಿಸಿದೆ.