ಲೇಹ್, ನ.13- (ಪಿಟಿಐ): ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಗಳಿಗಾಗಿ ಯೋಜಿಸಲಾದ ಪ್ರತಿಭಟನೆಗೆ ನಿರ್ಬಂಧಗಳನ್ನು ಹೇರಿರುವ ನಡುವೆಯೇ, ಲಡಾಖ್ನಲ್ಲಿರುವ ತಮ್ಮ ನಿವಾಸದ ಹೊರಗೆ ಸುಮಾರು 25 ಪೊಲೀಸ್ ಮತ್ತು ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ತಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಆರೋಪಿಸಿದ್ದಾರೆ.
ಲೇಹ್ ಅಪೆಕ್ಸ್ ಬಾಡಿಯ ಪ್ರಮುಖ ಸದಸ್ಯರಾಗಿರುವ ವಾಂಗ್ಚುಕ್, ಔಪಚಾರಿಕವಾಗಿ ಬಂಧಿಸದೆಯೇ ಒಬ್ಬ ವ್ಯಕ್ತಿಯನ್ನು ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ತಡೆಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ತಮ್ಮ ಸಂಚಾರದ ಮೇಲಿನ ಈ ನಿರ್ಬಂಧಗಳನ್ನು ಮ್ಯಾಜಿಸ್ಟ್ರೇಟ್, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸೇರಿದಂತೆ ಸೂಕ್ತ ಕಾನೂನು ವೇದಿಕೆಗಳಲ್ಲಿ ಪ್ರಶ್ನಿಸುವುದಾಗಿ ಅವರು ತಿಳಿಸಿದ್ದಾರೆ.
ಬುಧವಾರ ರಾತ್ರಿಯಿಂದಲೇ ತಮ್ಮ ಮನೆಯ ಹೊರಗೆ ಹಲವಾರು ಭದ್ರತಾ ಸಿಬ್ಬಂದಿ, ವಾಹನಗಳು ಮತ್ತು ಡೇರೆಗಳನ್ನು ನಿಯೋಜಿಸಲಾಗಿದೆ ಎಂದು ಅವರು ಎಕ್ಸ್ನಲ್ಲಿ ತಿಳಿಸಿದ್ದಾರೆ.
ಹಗಲಿನಲ್ಲಿ ತಮ್ಮ ಮನೆಯ ಸುತ್ತಲೂ ಸಶಸ್ತ್ರ ಸಿಬ್ಬಂದಿಯನ್ನು ನಿಯೋಜಿಸಿ, ತಮ್ಮ ಓಡಾಟವನ್ನು ನಿರ್ಬಂಧಿಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ. ತಮ್ಮನ್ನು ಮನೆಯಲ್ಲೇ ಇರುವಂತೆ ಕೇವಲ ಸಲಹೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿರುವುದನ್ನು ಉಲ್ಲೇಖಿಸಿದ ವಾಂಗ್ಚುಕ್, ಇಷ್ಟೊಂದು ಭಾರಿ ಭದ್ರತಾ ನಿಯೋಜನೆ ಇರುವುದು ವಾಸ್ತವವಾಗಿ ಗೃಹಬಂಧನಕ್ಕೆ ಸಮಾನವಾಗಿದೆ ಎಂದು ಹೇಳುವ ಮೂಲಕ ಆ ವಾದವನ್ನು ಪ್ರಶ್ನಿಸಿದ್ದಾರೆ.
