Homeರಾಜ್ಯಸೌಜನ್ಯ ಪ್ರಕರಣದ ಮರು ತನಿಖೆ : ಎಸ್‌‍ಐಟಿಯಿಂದ ಸಾಕ್ಷ್ಯಗಳ ಸಂಗ್ರಹ

ಸೌಜನ್ಯ ಪ್ರಕರಣದ ಮರು ತನಿಖೆ : ಎಸ್‌‍ಐಟಿಯಿಂದ ಸಾಕ್ಷ್ಯಗಳ ಸಂಗ್ರಹ

ಬೆಂಗಳೂರು,ನ.13-ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ವೈದ್ಯಕೀಯ ವರದಿ, ಮರಣೋತ್ತರ ಪರೀಕ್ಷೆ ಮತ್ತು ಹಿಂದಿನ ತನಿಖೆಯ ಪ್ರಕ್ರಿಯೆಗಳ ಮೇಲೆ ಎಸ್‌‍ಐಟಿ ವಿಶೇಷ ಗಮನ ಹರಿಸಿದ್ದು ನಿನ್ನೆ ಸಾಲು ಸಾಲು ವಿಚಾರಣೆಗಳನ್ನು ನಡೆಸಿದೆ.

ನಿನ್ನೆ ಒಂದೇ ದಿನ ಫೊರೆನ್ಸಿಕ್‌ ತಜ್ಞ ಡಾ.ಮಹಾಬಲ ಶೆಟ್ಟಿ, ಮರಣೋತ್ತರ ಪರೀಕ್ಷೆ ವೇಳೆ ಹಾಜರಿದ್ದ ವಾರ್ಡ್‌ಬಾಯ್‌ ಅನಿಲ್‌ಕುಮಾರ್‌ ಹಾಗೂ ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಮಂಗಳೂರಿನ ಎಸ್‌‍ಐಟಿ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿ ಮಾಹಿತಿಗಳನ್ನು ಪಡೆದುಕೊಂಡಿರುವುದು ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಪ್ರಕರಣದ ಆರೋಪಿಯಾಗಿದ್ದ ಸಂತೋಷ್‌ರಾವ್‌ನ ವೈದ್ಯಕೀಯ ಪರೀಕ್ಷೆ ನಡೆಸಿದ್ದ ಫೊರೆನ್ಸಿಕ್‌ ತಜ್ಞ ಡಾ.ಮಹಾಬಲ ಶೆಟ್ಟಿ ಅವರನ್ನು ಎಸ್‌‍ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಅಂದು ಸಂತೋಷ್‌ ದೇಹದಲ್ಲಿ 17 ಗಾಯಗಳಿದ್ದವು ಎಂದು ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆದ ಸಂದರ್ಭ, ಗಾಯಗಳ ಸ್ವರೂಪ ಹಾಗೂ ಅಂದು ನೀಡಿದ್ದ ವರದಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಸೌಜನ್ಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ಸಂದರ್ಭದಲ್ಲಿ ವೈದ್ಯರಿಗೆ ಸಹಾಯ ಮಾಡಿದ್ದ ವಾರ್ಡ್‌ಬಾಯ್‌ ಅನಿಲ್‌ಕುಮಾರ್‌ ಅವರನ್ನು ಎಸ್‌‍ಐಟಿ ವಿಚಾರಣೆಗೊಳಪಡಿಸಿ ಅಂದು ನಡೆದ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆ, ಶವದ ಪರಿಶೀಲನೆ ಹಾಗೂ ಇತರ ವಿಚಾರಣೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಸೌಜನ್ಯ ತಾಯಿ ಕುಸುಮಾವತಿ ಅವರನ್ನೂ ಸಹ ವಿಚಾರಣೆಗೆ ಒಳಪಡಿಸಿ ಪ್ರಕರಣದ ಹಿನ್ನಲೆ ಹಾಗೂ ಕುಟುಂಬಕ್ಕೆ ತಿಳಿದಿರುವ ಮಾಹಿತಿಗಳನ್ನು ಎಸ್‌‍ಐಟಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಒಟ್ಟಾರೆ ಈ ಪ್ರಕರಣದ ಹಲವು ಆಯಾಮಗಳನ್ನು ಪರಿಶೀಲಿಸುತ್ತಿರುವ ಎಸ್‌‍ಐಟಿ, ಹಳೆಯ ತನಿಖೆಯ ಪ್ರಮುಖ ಸಾಕ್ಷಿಗಳು ಹಾಗೂ ವೈದ್ಯಕೀಯ ಪರೀಕ್ಷೆಗೆ ಸಂಬಂಧಿಸಿದ ವ್ಯಕ್ತಿಗಳನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿ ಹಳೆಯ ಸಾಕ್ಷ್ಯಗಳನ್ನು ಮರುಪರಿಶೀಲಿಸುತ್ತಿರುವ ಅಧಿಕಾರಿಗಳ ಮುಂದಿನ ನಡೆ ಹಾಗೂ ತನಿಖೆಯಲ್ಲಿ ಹೊರಬರುವ ಸತ್ಯಾಂಶದ ಬಗ್ಗೆ ಕುತೂಹಲ ಮೂಡಿದೆ.

RELATED ARTICLES

Latest News