ನವದೆಹಲಿ,ಏ.20- ಉತ್ತರಭಾರತದಲ್ಲಿ ಪ್ರಬಲವಾಗಿ ರುವ ಬಿಜೆಪಿ ಈ ಬಾರಿ ದಕ್ಷಿಣ ಭಾರತದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ವಿಶೇಷ ರಣತಂತ್ರವನ್ನು ರೂಪಿಸುತ್ತಿದ್ದು, ಪ್ರಧಾನಿ ನರೇಂದ್ರಮೋದಿ ಅವರು ಬರುವ ದಿನಗಳಲ್ಲಿ ಮತ್ತಷ್ಟು ದಂಡಯಾತ್ರೆಯನ್ನು ಕೈಗೊಳ್ಳಲಿದ್ದಾರೆ. ಹಿಂದಿ ರಾಜ್ಯಗಳಾದ ಉತ್ತರಪ್ರದೇಶ, ಉತ್ತರಖಂಡ್, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್ಗಢ ಸೇರಿದಂತೆ ಮತ್ತಿತರ ಕಡೆ ಬಿಜೆಪಿ ಸಂಘಟನೆ ಹಿಂದೆಂದಿಗಿಂತಲೂ ಪ್ರಬಲವಾಗಿದೆ.
ಕೇಂದ್ರದಲ್ಲಿ ತಮ್ಮ ಉದ್ದೇಶಿತ 400 ಸ್ಥಾನಗಳನ್ನು ಗೆದ್ದು ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿರುವ ಬಿಜೆಪಿಗೆ ದ್ರಾವಿಡ ರಾಜ್ಯಗಳಾದ ದಕ್ಷಿಣ ಭಾರತದಲ್ಲಿ ಖಾತೆ ತೆರೆಯುವುದು ಸವಾಲಾಗಿ ಪರಿಣಿಮಿಸಿದೆ. ಕರ್ನಾಟಕ ಮತ್ತು ಗೋವಾ ಹೊರತುಪಡಿಸಿದರೆ ಉಳಿದ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
ತೆಲಂಗಾಣದಲ್ಲಿ ಒಂದಿಷ್ಟು ಸ್ಥಾನಗಳನ್ನು ಗೆದ್ದಿದೆಯಾದರೂ ಅಲ್ಲೇನು ಪಕ್ಷದ ಸಾಧನೆ ಹೇಳಿಕೊಳ್ಳುವಂತಿಲ್ಲ. ಇದೆಲ್ಲವನ್ನು ಅವಲೋಕಿಸಿರುವ ಬಿಜೆಪಿ ಚಿಂತಕರ ಛಾವಡಿ ದಕ್ಷಿಣ ಭಾರತದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದರೆ ಮಾತ್ರ ಉದ್ದೇಶಿತ 400 ಸ್ಥಾನಗಳನ್ನು ಗೆಲ್ಲಲು ಸಾಧ್ಯ ಎಂಬ ಕಿವಿಮಾತು ಹೇಳಿದೆ.
ಹೀಗಾಗಿ ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಷಾ, ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್, ಹಿಮಂತ್ ಬಿಸ್ವಾಸ್ ಸೇರಿದಂತೆ ಅನೇಕರು ದಕ್ಷಿಣ ಭಾರತದ ರಾಜ್ಯಗಳನ್ನು ಗುರಿಯಾಗಿಟ್ಟುಕೊಂಡು ದಾಂಗುಡಿ ಇಡಲಿದ್ದಾರೆ ಎಂದು ತಿಳಿದುಬಂದಿದೆ.
ಎನ್ಡಿಎ 400 ಸ್ಥಾನಗಳ ಗುರಿಯನ್ನು ತಲುಪಬೇಕಾದರೆ 130 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ದಕ್ಷಿಣ ಭಾರತದಲ್ಲಿ ಉತ್ತಮವಾದ ಸಾಧನೆಮಾಡಲೇಬೇಕಿದೆ. ಉತ್ತರ ಭಾರತದಲ್ಲಿ ಬಿಜೆಪಿಗೆ ಇರುವಷ್ಟು ನೆಲೆ ದಕ್ಷಿಣ ಭಾರತದಲ್ಲಿ ಇದುವರೆಗೂ ಸಿಕ್ಕಿಲ್ಲ. ಆದ್ದರಿಂದ ಈ ಬಾರಿ ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿರುವ ಬಿಜೆಪಿ ರಣತಂತ್ರ ರೂಪಿಸಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದಕ್ಷಿಣ ಭಾರತದ 130 ಕ್ಷೇತ್ರಗಳ ಪೈಕಿ ಕೇವಲ 29 ಕ್ಷೇತ್ರಗಳಲ್ಲಿ ಮಾತ್ರ ವಿಜಯದ ನಗೆ ಬೀರಿತ್ತು. ಅದರಲ್ಲಿ 25 ಕರ್ನಾಟಕ, ಉಳಿದ 4 ತೆಲಂಗಾಣದಿಂದ ಬಂದಿದ್ದವು. ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ಬಿಜೆಪಿಯ ಸಾಧನೆ ಶೂನ್ಯ ಆಗಿತ್ತು. ಈ ಹಿನ್ನೆಲೆ ದಕ್ಷಿಣ ಭಾರತದಲ್ಲಿ ಕೇಸರಿ ನೆಲೆಯನ್ನು ವಿಸ್ತರಿಸುವ ಶತಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಗೆ ನೆಲೆ ಇದ್ದು, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಜನಬೆಂಬಲ ನಿಧಾನವಾಗಿ ಹೆಚ್ಚಾಗುತ್ತಿದೆ. ಆದರೆ, ಬಿಜೆಪಿಗೆ ನಿಜವಾದ ಸವಾಲು ಎದುರಾಗಿರುವುದು ತಮಿಳುನಾಡು ಮತ್ತು ಕೇರಳದಲ್ಲಿ.
ಚುನಾವಣಾ ವರ್ಷದ ಹಿನ್ನೆಲೆ ಪ್ರಧಾನಿ ನರೇಂದ್ರಮೋದಿ ಈ ವರ್ಷದ ಆರಂಭದಿಂದಲೇ ದಕ್ಷಿಣ ಭಾರತಕ್ಕೆ 24ಕ್ಕಿಂತ ಹೆಚ್ಚು ಬಾರಿ ಬಂದಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ, NDA ಅಭ್ಯರ್ಥಿಗಳ ಪರ ರ್ಯಾಲಿ ನಡೆಸಲು ದಕ್ಷಿಣ ಭಾರತಕ್ಕೆ ಹಿಂದೆಂದಿಗಿಂತಲೂ ಹೆಚ್ಚಾಗಿ ಭೇಟಿ ನೀಡಿದ್ದು, ಡಿಎಂಕೆ, ಕಾಂಗ್ರೆಸ್, ಬಿಆರ್ಎಸ್ ಹಾಗೂ ಎಡಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೋದಿ ಅಷ್ಟೇ ಅಲ್ಲದೇ ಕೇಂದ್ರದ ಇತರೆ ಸಚಿವರು, ಬಿಜೆಪಿಯ ಹಿರಿಯ ನಾಯಕರು ಕೂಡ ದಕ್ಷಿಣ ಭಾರತಕ್ಕೆ ನಿಯಮಿತವಾಗಿ ಭೇಟಿ ನೀಡಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಸಂಸತ್ನ ಚಳಿಗಾಲದ ಅಧಿವೇಶನದ ಬೆನ್ನಲ್ಲೇ ದಕ್ಷಿಣ ಭಾರತದ 84 ಕ್ಷೇತ್ರಗಳನ್ನು ಗುರುತಿಸಿ ಅಲ್ಲಿಗೆ ವಿಸ್ತಾರಕರನ್ನು ಕಳುಹಿಸಿತ್ತು. ಈ ಮೂಲಕ ಕಳಪೆ ಸಾಧನೆ ಮಾಡಿದ ಕ್ಷೇತ್ರಗಳಲ್ಲಿ ತನ್ನ ನೆಲೆಯನ್ನು ಗಟ್ಟಿಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿತ್ತು. ಅದಲ್ಲದೇ ದಕ್ಷಿಣ ಭಾರತದ ಬಹುತೇಕ ಬಿಜೆಪಿ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರ ನಾಮಬಲವನ್ನೇ ನೆಚ್ಚಿಕೊಂಡಿದ್ದು, ಅವರ ಹೆಸರಲ್ಲಿಯೇ ಚುನಾವಣೆ ಎದುರಿಸುತ್ತಿದ್ದಾರೆ.
ದ್ರಾವಿಡರ ನೆಲದಲ್ಲಿ ಕದನ: ಉತ್ತರಭಾರತದಲ್ಲಿ ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ವೋಟ್ ಬ್ಯಾಂಕ್ ಹೆಚ್ಚಿಸಿಕೊಳ್ಳುತ್ತಿರುವ ಬಿಜೆಪಿಯ ಮತ ಗಳಿಕೆ ತಮಿಳುನಾಡಿನಲ್ಲಿ ಶೇ.5ಕ್ಕಿಂತ ಕಡಿಮೆಯಿದೆ. ಇಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವಿದ್ದು, ಬಿಜೆಪಿಯ ಪ್ಯಾನ್ ಇಂಡಿಯಾ ಪಕ್ಷದ ಕನಸಿಗೆ ತಮಿಳುನಾಡು ಅಡ್ಡಿಯಾಗಿದೆ. ಆದರೆ ಈ ಬಾರಿ ಹೊಸ ಮುಖ ಅಣ್ಣಾಮಲೈ ಹಾಗೂ ಪ್ರಧಾನಿ ನರೇಂದ್ರಮೋದಿ ಅವರ ಪ್ರಚಾರದಿಂದ ಬಿಜೆಪಿಗೆ ಹೊಸ ನಿರೀಕ್ಷೆ ಸೃಷ್ಟಿಯಾಗಿದೆ. ಮತಗಳಿಕೆ ಪ್ರಮಾಣ ಹೆಚ್ಚಳ ಮಾಡುವುದರೊಂದಿಗೆ ಒಂದಿಷ್ಟು ಕ್ಷೇತ್ರಗಳನ್ನು ಬಾಚಿಕೊಳ್ಳುವ ನಿಟ್ಟಿನಲ್ಲಿ ಕೇಸರಿ ಪಡೆ ಕೆಲಸ ಮಾಡಿದೆ.
ತಮಿಳುನಾಡಿಗೆ ಈ ವರ್ಷ ಬರೋಬ್ಬರಿ 8 ಬಾರಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು, ತಮಿಳಿಗರ ಮತ ಸೆಳೆಯಲು ಹಲವು ಕೆಲಸ ಮಾಡಿದ್ದಾರೆ. ದೇವಸ್ಥಾನಕ್ಕೆ ಭೇಟಿ, ತಮಿಳು ಭಾಷೆಗೆ ಆದ್ಯತೆ, ತಿರುವಳ್ಳುವರ್ ಅವರಂತಹ ಸ್ಮರಣೆ, ಕಚ್ಛತೀವು ಪ್ರದೇಶದ ವಿವಾದಗಳನ್ನು ನೆನಪಿಸುವ ಮೂಲಕ ಮತ ಸೆಳೆಯುವ ಯತ್ನ ಮಾಡಿದ್ದಾರೆ. ಅದಲ್ಲದೇ ಅಣ್ಣಾಮಲೈ ಅವರ ತಳಹಂತದ ಹೋರಾಟ ಆಡಳಿತಾರೂಢ ಡಿಎಂಕೆಗೆ ಒಂದಿಷ್ಟು ಸವಾಲನ್ನು ತಂದಿದೆ.
ಈ ಸಲ ಸಾಂಪ್ರದಾಯಿಕ ಮಿತ್ರ ಪಕ್ಷ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳದೇ 6 ಸಣ್ಣ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿರುವುದು ಮತ್ತೊಂದು ವಿಶೇಷ.ದೇವರ ನಾಡು ಕೇರಳದ ರಾಜಕೀಯದಲ್ಲಿ ಯುಡಿಎಫ್ ಮತ್ತು ಎಲ್ಡಿಎಫ್ ಪ್ರಾಬಲ್ಯವಿದ್ದು, ಇಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಈ ನಿಟ್ಟಿನಲ್ಲಿ ಈ ಬಾರಿ ಏನಾದರೂ ಮಾಡಿ ಬದಲಾವಣೆ ತರಬೇಕು ಎಂದುಕೊಂಡಿರುವ ಬಿಜೆಪಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ತಿರುವನಂತಪುರಂನಲ್ಲಿ ಮೂರು ಬಾರಿ ಗೆದ್ದಿರುವ ಸಂಸದ ಶಶಿ ತರೂರ್ ಎದುರು ಕಣಕ್ಕಿಳಿಸಿದೆ.
ವಿ.ಮುರುಳೀಧರನ್ ಅವರನ್ನು ಯುಡಿಎಫ್ ಸಂಸದ ಅದೂರ್ ಪ್ರಕಾಶ್ ಎದುರು ಅತ್ತಿಂಗಲ್ನಲ್ಲಿ ಕಣಕ್ಕಿಳಿಸಿದೆ. ಇದರ ಜೊತೆ ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್ ಪುತ್ರಿ ಪದ್ಮಜಾ ವೇಣುಗೋಪಾಲ್, ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ ಪುತ್ರ ಅನಿಲ್ ಆಂಟನಿಯಂತಹ ಹಲವು ಪ್ರಮುಖ ಕಾಂಗ್ರೆಸ್ ನಾಯಕರನ್ನು ತನ್ನ ಕಡೆ ಸೆಳೆದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೂ ಮುನ್ನ ಈ ವರ್ಷ ಒಟ್ಟು 7 ಬಾರಿ ಕೇರಳಕ್ಕೆ ಬಂದಿದ್ದಾರೆ. ಜೊತೆಗೆ ನಾರಾಯಣಗುರು ಅವರಂತಹ ಸ್ಥಳೀಯ ಗಣ್ಯರನ್ನು ಸ್ಮರಿಸುವ ಕೆಲಸವನ್ನು ಮೋದಿ ಮಾಡಿದ್ದು, ಕೇರಳ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅದಲ್ಲದೇ ಎಸ್ಡಿಪಿಐ ಬೆಂಬಲ ಪಡೆಯುವ ಕಾಂಗ್ರೆಸ್ ನಡೆಯನ್ನು ಕೂಡ ಮೋದಿ ವಿರೋಧಿಸಿದ್ದು, ಮತದಾರರನ್ನು ಸೆಳೆಯಲು ಎಲ್ಲ ರೀತಿಯ ಪ್ರಯತ್ನ ಮಾಡಿದ್ದಾರೆ. ಚುನಾವಣಾ ಫಲಿತಾಂಶ ಬಂದ ದಿನವೇ ಎಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬುದು ಸ್ಪಷ್ಟವಾಗಲಿದೆ.