Friday, May 3, 2024
Homeರಾಜಕೀಯರಾಜ್ಯದಲ್ಲಿ ಎರಡು ರಾಜಕೀಯ ಕುಟುಂಬಗಳಿಗೆ ಪ್ರತಿಷ್ಠೆಯಾದ ಲೋಕಸಭೆ ಚುನಾವಣೆ

ರಾಜ್ಯದಲ್ಲಿ ಎರಡು ರಾಜಕೀಯ ಕುಟುಂಬಗಳಿಗೆ ಪ್ರತಿಷ್ಠೆಯಾದ ಲೋಕಸಭೆ ಚುನಾವಣೆ

ಬೆಂಗಳೂರು,ಏ.20- ಈ ಬಾರಿಯ ಲೋಕಸಭೆ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ಗೆ ಮಾತ್ರ ಪ್ರತಿಷ್ಠೆಯಾಗಿರದೆ ರಾಜ್ಯದ ಎರಡು ಪ್ರಬಲ ರಾಜಕೀಯ ಕುಟುಂಬ ಗಳಿಗೂ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ರಾಜಕೀಯವನ್ನೇ ಅರಗಿಸಿಕೊಂಡಿರುವ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ರೈತ ಹೋರಾಟದ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿ ರಾಜಕೀಯ ನಿವೃತ್ತಿ ಅಂಚಿನಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಲೋಕಸಭೆ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ಒಂದು ವೇಳೆ ಈ ಚುನಾವಣೆಯಲ್ಲಿ ದೇವೇಗೌಡ ಮತ್ತು ಯಡಿಯೂರಪ್ಪ ಕುಟುಂಬಕ್ಕೆ ಅಪ್ಪಿತಪ್ಪಿಯೂ ಸ್ವಲ್ಪವೇನಾ ದರೂ ಹಿನ್ನಡೆಯಾದರೆ ಎರಡೂ ಕುಟುಂಬಗಳ ರಾಜಕೀಯ ಭವಿಷ್ಯಕ್ಕೆ ಕಲ್ಲು ಬೀಳುವುದರಲ್ಲಿ ಸಂಶಯವಿಲ್ಲ ಎಂದು ಇಬ್ಬರನ್ನೂ ಹತ್ತಿರದಿಂದ ಬಲ್ಲವರು ಹೇಳುತ್ತಿದ್ದಾರೆ.

ಹೀಗಾಗಿಯೇ ದೇವೇಗೌಡ ಮತ್ತು ಯಡಿಯೂರಪ್ಪ ತಮ್ಮ ರಾಜಕೀಯ ಜಿದ್ದನ್ನು ಮರೆತು ಪರಸ್ಪರ ಒಂದಾಗಿ ಹೆಗಲಿಗೆ ಹೆಗಲು ಕೊಟ್ಟು ಮೈತ್ರಿಯಾಗಿರುವುದು ಹೊಸ ಬೆಳವಣಿಗೆಯಾಗಿದೆ. ಇತ್ತೀಚಿನ ಚುನಾವಣೆಗಳಲ್ಲಿ ಎಚ್ಡಿ ದೇವೇಗೌಡ ಅವರ ನೇತೃತ್ವದ ಜೆಡಿಎಸ್ ಕಳಪೆ ಸಾಧನೆ ಮಾಡಿದ್ದು, ಈ ಚುನಾವಣೆ ಕೂಡ ಕೈ ಕೊಟ್ಟರೆ ದೇವೇಗೌಡರ ಕುಟುಂಬದ ರಾಜಕೀಯ ಹಿಡಿತ ಮತ್ತಷ್ಟು ಸಡಿಲಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

2004ರಲ್ಲಿ 58 ಶಾಸಕರನ್ನು ಹೊಂದಿದ್ದ ಜೆಡಿಎಸ್ ಈಗ ಕೇವಲ 19 ಶಾಸಕರು ಹಾಗೂ ಏಕೈಕ ಸಂಸದ ಸ್ಥಾನಕ್ಕೆ ಇಳಿದಿದೆ. ಜೆಡಿಎಸ್ನ ಅಧಃಪತನಕ್ಕೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಪ್ರಮುಖ ಕಾರಣ. 2023ರ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಗಣನೀಯವಾಗಿ ಕಾಂಗ್ರೆಸ್ ಕಡೆ ತಿರುಗಿಸುವಲ್ಲಿ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಅಗ್ರೆಸ್ಸಿವ್ ಆಗಿ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುತ್ತಿದ್ದಾರೆ. ಒಕ್ಕಲಿಗ ಮುಖಂಡರ ಜೊತೆ ರಹಸ್ಯ ಸಭೆಗಳನ್ನು ನಡೆಸುತ್ತಿರುವ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಅದರ ಜೊತೆಗೆ ದೇವೇಗೌಡರ ಕುಟುಂಬದ ಪ್ರಾಬಲ್ಯದಿಂದ ತಮ್ಮನ್ನು ತಾವು ಮುಕ್ತಗೊಳಿಸಬೇಕಾದ ಅಗತ್ಯವನ್ನು ಒಕ್ಕಲಿಗ ಮುಖಂಡರ ಮುಂದೆ ಪ್ರತಿಪಾದಿಸುತ್ತಿದ್ದಾರೆ. ಜೊತೆಗೆ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ನ ಮೂಲಗಳು ಹೇಳಿವೆ.

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಸಾಕಷ್ಟು ಕ್ಷೇತ್ರಗಳನ್ನು ಗೆದ್ದರೆ ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ಗೆ ಅಸ್ತಿತ್ವದ ಪ್ರಶ್ನೆ ಉಂಟಾಗಲಿದೆ ಎಂದು ಜೆಡಿಎಸ್ನ ಹಿರಿಯ ಕಾರ್ಯಕರ್ತರೊಬ್ಬರು ಹೇಳಿದ್ದಾರೆ. ಒಕ್ಕಲಿಗ ಸಮುದಾಯದ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಳಸಿಕೊಂಡು ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳನ್ನು ಓಲೈಸಲು ಕಾಂಗ್ರೆಸ್ ಸರ್ವಪ್ರಯತ್ನ ನಡೆಸುತ್ತಿದೆ.

ಈ ಸಮಸ್ಯೆಯನ್ನು ಗ್ರಹಿಸಿರುವ ದೇವೇಗೌಡ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ನರೇಂದ್ರಮೋದಿ ಅವರು ಮೂರನೇ ಅವಗೆ ಪ್ರಧಾನಿಯಾದರೆ ಕೇಂದ್ರ ಸರ್ಕಾರದ ಭಾಗವಾಗಬಹುದು. ಆದರೆ ಒಕ್ಕಲಿಗರು ಗೌಡರ ಕುಟುಂಬವನ್ನು ಅಷ್ಟು ಸುಲಭವಾಗಿ ಬಿಟ್ಟುಬಿಡುತ್ತಾರೆಯೇ? ದೇವೇಗೌಡರ ಕುಟುಂಬ ಯಾವಾಗ ರಾಜಕೀಯವಾಗಿ ಕುಸಿತ ಕಂಡಿದೆಯಾ? ಆಗೆಲ್ಲಾ ಒಕ್ಕಲಿಗ ಸಮುದಾಯ ಅವರ ರಕ್ಷಣೆಗೆ ನಿಂತಿದೆ ಎಂಬ ಭಾವನೆ ಸಮುದಾಯದ ಅನೇಕರಲ್ಲಿದೆ.

ಯಡಿಯೂರಪ್ಪಗೆ ಆಂತರಿಕ ಸವಾಲು: ಅತ್ತ ದೇವೇಗೌಡರ ಕುಟುಂಬಕ್ಕೆ ಡಿ.ಕೆ.ಶಿವಕುಮಾರ್ ಸವಾಲಾಗಿದ್ದರೆ, ಇತ್ತ ಬಿಎಸ್ ಯಡಿಯೂರಪ್ಪ ಅವರ ಕುಟುಂಬಕ್ಕೆ ಬಿಜೆಪಿ ಪಕ್ಷದಲ್ಲಿಯೇ ಹಲವು ಸವಾಲುಗಳು ಎದುರಾಗಿವೆ. ಬಿಎಸ್ ಯಡಿಯೂರಪ್ಪ ಅವರು ತಮ್ಮ ಪುತ್ರ ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜಾ್ಯಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ರಾಜ್ಯ ಬಿಜೆಪಿ ಘಟಕದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಬಸನಗೌಡ ಪಾಟೀಲ್ ಯತ್ನಾಳ್, ಸಿಟಿ ರವಿ, ನಳಿನ್ ಕುಮಾರ್ ಕಟೀಲ್, ಕೆಎಸ್ ಈಶ್ವರಪ್ಪ, ಡಿವಿ ಸದಾನಂದಗೌಡ ಸೇರಿ ಹಲವು ಹಿರಿಯ ಬಿಜೆಪಿ ನಾಯಕರು ವಿಜಯೇಂದ್ರ ಅವರ ಬಡ್ತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಕೆ.ಎಸ್.ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಡಿವಿ ಸದಾನಂದಗೌಡ ಅವರು ಯಡಿಯೂರಪ್ಪನವರ ಕುಟುಂಬವನ್ನು ಚುನಾವಣೆ ಬಳಿಕ ಎದುರಿಸಲು ಪಣ ತೊಟ್ಟಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಈಶ್ವರಪ್ಪ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಇನ್ನು ಕೊಪ್ಪಳದ ಹಾಲಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದು, ಬಿಎಸ್ ಯಡಿಯೂರಪ್ಪನವರ ಆಪ್ತರಾಗಿದ್ದ ಜೆಸಿ ಮಾಧುಸ್ವಾಮಿ, ಬಿಎನ್ ಚಂದ್ರಪ್ಪ, ಮಾಲೀಕಯ್ಯ ಗುತ್ತೇದಾರ್ ಸೇರಿ ಅನೇಕರಿಗೆ ಎಂಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆ ಅವರು ಕೆರಳಿದ್ದಾರೆ. ಹೀಗಾಗಿ ಯಡಿಯೂರಪ್ಪ ಮತ್ತು ಅವರ ಕುಟುಂಬದವರ ಮೇಲೆ ಒತ್ತಡ ಸೃಷ್ಟಿಯಾಗಿರುವುದು ಸ್ಪಷ್ಟವಾಗಿದೆ.

ಬಿಎಸ್ವೈ ಕುಟುಂಬಕ್ಕೆ ಇದು ಮಾಡು ಇಲ್ಲವೇ ಮಡಿ ಕದನ ಎಂದು ಉತ್ತರ ಕರ್ನಾಟಕದ ಬಿಜೆಪಿಯ ಹಿರಿಯ ಶಾಸಕರೊಬ್ಬರು ಹೇಳಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ಗಿಂತ ಎನ್ಡಿಎ ಹೆಚ್ಚು ಸ್ಥಾನಗಳನ್ನು ಗೆದ್ದರೆ, ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಕುಟುಂಬದ ಪ್ರಾಬಲ್ಯ ಮುಂದುವರಿಯುತ್ತದೆ. ಇಲ್ಲದಿದ್ದರೆ, ಬಿವೈ ವಿಜಯೇಂದ್ರ ಅವರು ರಾಜಾ್ಯಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸಂಗ ಬರಬಹುದು. ಜೊತೆಗೆ ಕರ್ನಾಟಕ ಬಿಜೆಪಿ ಮೇಲೆ ಬಿಎಸ್ವೈ ಕುಟುಂಬಕ್ಕಿರುವ ಹಿಡಿತ ಸಡಿಲವಾಗಬಹುದು.

RELATED ARTICLES

Latest News