ಹುಬ್ಬಳ್ಳಿ,ಏ.21- ರಾಜ್ಯ ಸರ್ಕಾರವೇ ಲವ್ ಜಿಹಾದ್ ಪರ ನಿಂತಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಯಾವುದೇ ಹಂತಕ್ಕೆ ಬೇಕಾದರೂ ಇಳಿಯುತ್ತದೆ ಎಂದು ಕೇಂದ್ರ ಸಂಸ ದೀಯ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರ ಮತ್ತು ಸಮಾಜ ಇಚ್ಛೆತ್ತುಕೊಳ್ಳಬೇಕು, ಬಹಳ ಜಾಗ್ರತೆಯಿಂದ ಇರಬೇಕು ಎಂದು ಸಲಹೆ ಮಾಡಿದರು. ಸಿಎಂ, ಡಿಸಿಎಂ, ಗೃಹ ಸಚಿವರು ತುಷ್ಟಿಕರಣದ ನೀತಿಯಿಂದಾಗಿ ಹೇಗೆಲ್ಲ ಮಾಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ನೇಹಾ ಕನ್ವರ್ಟ್ ಗೆ ಯತ್ನ:
ನೇಹಾಳನ್ನು ಕನ್ವರ್ಟ್ ಮಾಡಲು ಪ್ರಯತ್ನಿಸಿದ್ದರು. ಆದರೆ ಆಕೆ ಒಪ್ಪಿರಲಿಲ್ಲ ಎಂಬುದನ್ನು ಆಕೆ ತಂದೆಯೇ ಹೇಳಿದ್ದಾರೆ ಎಂದು ಸಚಿವ ಜೋಶಿ ತಿಳಿಸಿದರು. ಆರೋಪಿ ಫಯಾಜ್ ನೇಹಾಳನ್ನು ಕನ್ವರ್ಟ್ ಮಾಡಿ ಮದುವೆ ಮಾಡಿಕೊಳ್ಳಲು ನೋಡಿದ್ದಾನೆ. ಇದಕ್ಕೆ ನೇಹಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ. ಒಪ್ಪದಿದ್ದಾಗ ಅಂತಿಮವಾಗಿ ಹತ್ಯೆ ಕೃತ್ಯ ವೆಸಗಿದ್ದಾನೆ ಎಂದು ನೇಹಾಳ ತಂದೆ ನಿರಂಜನ್ ಹಿರೇಮಠ್ ಅವರೇ ನನ್ನೆದುರು ಮಾತ್ರವಲ್ಲಾ ಬಹಿರಂಗವಾಗೇ ಹೇಳಿದ್ದಾರೆ ಎಂದರು ಸಚಿವ ಜೋಶಿ.
ಜನಸಾಮಾನ್ಯರ ಗತಿ ಏನು:
ಕಾಂಗ್ರೆಸ್ ಕಾರ್ಪೊರೇಟರ್ ಆದ ನನ್ನ ಮಗಳ ಘಟನೆಯಲ್ಲೇ ಹೀಗೆ ವರ್ತಿಸುತ್ತಿದ್ದೀರಿ. ಇನ್ನು ಜನ ಸಾಮಾನ್ಯರ ಗತಿ ಏನು? ನಿರಂಜನ್ ಅವರೇ ಸಿಎಂ, ಗೃಹ ಸಚಿವರನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಅಂಥ ದುಸ್ಥಿತಿಗೆ ತಂದಿದ್ದಾರೆ ಎಂದು ಜೋಶಿ ಹರಿ ಹಾಯ್ದರು.
ಕಾಂಗ್ರೆಸ್ನವರಿಗೆ ಕರುಣೆಯೇ ಇಲ್ಲ:
ನೇಹಾಳನ್ನು ಹಾಡಹಗಲೇ ಒಂಬತ್ತು-ಹತ್ತು ಬಾರಿ ಚೂರಿ ಇರಿದು ಹತ್ಯೆಗೈದ ದೃಶ್ಯ ನೋಡಿದರೂ ಈ ಕಾಂಗ್ರೆಸ್ಸಿಗರಿಗೆ ಕರುಣೆಯೇ ಇಲ್ಲ. ನೇಹಾಳ ಕುಟುಂಬಕ್ಕೆ ನ್ಯಾಯ ಕೊಡಬೇಕು ಎಂಬ ಕಿಂಚಿತ್ತೂ ಜವಾಬ್ದಾರಿ ಇಲ್ಲ ಎಂದು ಸರ್ಕಾರದ ವಿರುದ್ಧ ಜೋಶಿ ಕಿಡಿ ಕಾರಿದರು.
ತುಷ್ಟಿಕರಣ ಮಿತಿಮೀರಿದೆ:
ಡಿಜೆ ಹಳ್ಳಿ-ಕೆಜೆ ಹಳ್ಳಿ, ರಾಮೇಶ್ವರ್ ಕೆಫೇ ಬಾಂಬ್ ಸೋಟ, ಪಾಕಿಸ್ತಾನ್ ಜಿಂದಾಬಾದ್ ಘೋಷಣೆ, ಉಡುಪಿಯ ಟಾಯ್ಲೆಟ್ ಒಳಗೆ ಕ್ಯಾಮರಾ ಇಟ್ಟ ಪ್ರಕರಣ ಹೀಗೆ ಎಲ್ಲಾ ಘಟನೆಗಳಲ್ಲೂ ಇವರ ತುಷ್ಟಿಕರಣ ನೀತಿ ಮಿತಿಮೀರಿದೆ. ಇದರಿಂದಾಗಿ ಜನರ ಆಕ್ರೋಶ ಮುಗಿಲು ಮುಟ್ಟಿದೆ ಎಂದು ಎಚ್ಚರಿಸಿದರು.