ನೆಲಮಂಗಲ,ಏ.22- ಸಹೋದರನ ಮನೆಯಲ್ಲಿ ರಾತ್ರಿ ಊಟ ಮಾಡಿಕೊಂಡು ಒಂದೇ ಕುಟುಂಬದ ಸದಸ್ಯರು ಖುಷಿಖುಷಿಯಿಂದ ಮಾತನಾಡಿ, ಕಾಲ ಕಳೆದು ಮನೆಗೆ ವಾಪಸ್ಸಾಗುತ್ತಿದ್ದರು. ಆದರೆ ಆ ಜವರಾಯನಿಗೆ ಅವರ ಸಂಭ್ರಮ ನೋಡಿ ಸಹಿಸಲಾಗಲಿಲ್ಲವೇನೋ?…
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಮಾದಾವರದ ಬಳಿ ಓಮಿನಿ ಕಾರಿಗೆ ಹಿಂದಿನಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದು ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ಪರಿಣಾಮ ಬಾಲಕಿಯೊಬ್ಬಳು ಸುಟ್ಟು ಕರಕಲಾಗಿರುವ ಧಾರುಣ ಘಟನೆ ನಡೆದಿದೆ. ದಿವ್ಯ (16) ಮೃತಪಟ್ಟ ಬಾಲಕಿ.
ಘಟನೆಯ ವಿವರ:
ಅರಿಶಿನಗುಂಟೆಯ ಬೃಂದಾವನ ಲೇ ಔಟ್‍ನ ನಿವಾಸಿ ಮಹೇಶ್ ಎಂಬುವರು ತಮ್ಮ ಕುಟುಂಬ ಸಮೇತ ಅಬ್ಬಿಗೆರೆಯಲ್ಲಿರುವ ಸಹೋದರನ ಮನೆಗೆ ತೆರಳಿ ರಾತ್ರಿ ಊಟ ಮುಗಿಸಿಕೊಂಡು ಓಮಿನಿ ಕಾರಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದರು. 10 ಗಂಟೆ ಸುಮಾರಿಗೆ ಮಾದಾವರ ಟೋಲ್ ಬಳಿ ಓಮಿನಿಗೆ ಬಲೇನೊ ಕಾರು ಡಿಕ್ಕಿ ಹೊಡೆದ ಪರಿಣಾಮ ಓಮಿನಿ ಪಲ್ಟಿಯಾಗಿ ಬೆಂಕಿಗಾಹುತಿಯಾಗಿ ಈ ದುರ್ಘಟನೆ ಸಂಭವಿಸಿದೆ.
ಕಾರಿನಲ್ಲಿ ಒಟ್ಟು 8 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಕಾರಿನಲ್ಲಿದ್ದ ದಿವ್ಯ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದರೆ, ಮಹೇಶ್, ಶಾಂತಿಲಾಲ್, ಮಂಜುಳ, ತರುಣ್ ಕುಮಾರ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಸುಮನ್, ಸುನಿತಾ, ಮಯಾಂಕ್ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಕಾರು ಪಲ್ಟಿಯಾಗಿ ಪೆಟ್ರೋಲ್ ಟ್ಯಾಂಕ್ ಓಪನ್ ಆಗಿದ್ದು ಬೆಂಕಿ ಹತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿಯ ಜ್ವಾಲೆ ಆಕಾಶದೆತ್ತರಕ್ಕೆ ಆವರಿಸಿದ್ದು ಕಾರಿನಲ್ಲಿದ್ದ 7 ಮಂದಿ ಹರಸಾಹಸ ಪಟ್ಟು ಹೊರಗೆ ಬಂದಿದ್ದಾರೆ. ಆದರೆ ದಿವ್ಯಳ ಕಾಲು ಕಾರಿನಲ್ಲಿ ಸಿಲುಕಿಕೊಂಡಿದ್ದು, ಹೊರಬರಲಾಗದೆ ಒದ್ದಾಡಿದ್ದಾಳೆ.
ಈಕೆಯನ್ನುರಕ್ಷಿಸಲು ಕುಟುಂಬ ಸದಸ್ಯರು ಭಾರೀ ಹೋರಾಟವನ್ನೇ ಮಾಡಿದರಾದರೂ ಬೆಂಕಿಯ ಜ್ವಾಲೆ ಹೆಚ್ಚಾಗಿದ್ದು ಸಾಧ್ಯವಾಗಲಿಲ್ಲ. ಮನೆಮಗಳು ಕಣ್ಣೆದುರೇ ಧಗಧಗನೇ ಹೊತ್ತಿ ಉರಿಯುತ್ತಿದ್ದರೂ ಕಾಪಾಡಲಾಗದಂತಹ ದುಸ್ಥಿತಿ ನಿರ್ಮಾಣವಾಗಿದ್ದು ದುರಂತ.
ಮಹೇಶ್ ಅರಿಶಿನಗುಂಟೆಯಲ್ಲಿ ಪ್ಲೇವುಡ್ ಅಂಗಡಿ ನಡೆಸುತ್ತಿದ್ದರು ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.