ಬೆಂಗಳೂರು,ಏ.22- ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದ್ದ ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದಿಂಗಾಲೇಶ್ವರ ಸ್ವಾಮೀಜಿ ಕೊನೆಗೂ ನಾಮಪತ್ರ ಹಿಂಪಡೆಯಲು ಸಮ್ಮತಿಸಿದ್ದಾರೆ. ಹಿರಿಯ ಮಠಾಧೀಶರೊಬ್ಬರ ಮನವೊಲಿಕೆ ಹಾಗೂ ರಾಜ್ಯದ ಪ್ರಭಾವಿ ಹಿರಿಯ ಲಿಂಗಾಯತ ಸಮುದಾಯದ ನಾಯಕರ ಮಧ್ಯಪ್ರವೇಶದಿಂದಾಗಿ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಹಿಂಪಡೆಯಲು ಮುಂದಾಗಿದ್ದಾರೆ.
ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದ್ದು, ಸಮುದಾಯದವರ ಮಾತಿಗೆ ಕಟಿಬಿದ್ದು ದಿಂಗಾಲೇಶ್ವರ ಸ್ವಾಮೀಜಿ ಭಕ್ತರ ಆಶಯದಂತೆ ನಾಮಪತ್ರವನ್ನು ಹಿಂಪಡೆಯುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ಸಮುದಾಯದ ಜೊತೆಗೆ ಭಕ್ತರ ವಿರೋಧವನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಭಾವಿ ನಾಯಕರೊಬ್ಬರು ದೂರವಾಣಿಯಲ್ಲಿ ಸಂಪರ್ಕಿಸಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನನಗೆ ಈಗಲೂ ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಷಿ ಮೇಲೆ ಇರುವ ಅಸಮಾಧಾನ ಸ್ವಲ್ಪವೂ ಕಡಿಮೆಯಾಗಿಲ್ಲ. ಆದರೆ ನೀವು ಮತ್ತು ನಿಮ್ಮ ಕುಟುಂಬದವರು ಮಠದ ಬಗ್ಗೆ ಇಟ್ಟುಕೊಂಡಿರುವ ಗೌರವದಿಂದ ನಿಮ್ಮ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ಹಿಂಪಡೆಯುತ್ತಿದ್ದೇನೆ. ಮುಂದಿನ ದಿನಗಳಲ್ಲಾದರೂ ಪ್ರಹ್ಲಾದ್ ಜೋಷಿಗೆ ನಮ್ಮ ಸಮುದಾಯದ ವಿರುದ್ಧ ಷಡ್ಯಂತ್ರ್ಯ ನಡೆಸುವುದು ಇಲ್ಲವೇ ಎರಡು ಮತ್ತು ಮೂರನೇ ಹಂತದ ನಾಯಕರನ್ನು ತುಳಿಯುವ ಪ್ರವೃತ್ತಿ ಬಿಡುವಂತೆ ಸೂಚನೆ ನೀಡಿ ಎಂದು ಸ್ವಾಮೀಜಿ ಹೇಳಿದ್ದಾರೆ.
ಉಳಿದ ವಿಷಯವನ್ನು ನಾನು ನೋಡಿಕೊಳ್ಳುತ್ತೇನೆ, ಮೊದಲು ನೀವು ನಾಮಪತ್ರ ಹಿಂಪಡೆಯಿರಿ. ಚುನಾವಣೆ ಮುಗಿದ ಬಳಿಕ ಇಬ್ಬರನ್ನೂ ಪರಸ್ಪರ ಭೇಟಿ ಮಾಡಿಸಿ ಸಮಸ್ಯೆ ಇತ್ಯರ್ಥಪಡಿಸುವ ಆಶ್ವಾಸನೆಯನ್ನು ನೀಡಿದ್ದಾರೆಂದು ತಿಳಿದುಬಂದಿದೆ. ಇದೇ ವೇಳೆ ಧಾರವಾಡ ಮೂಲದ ಹಿರಿಯ ಸ್ವಾಮೀಜಿಯೊಬ್ಬರು ಮಧ್ಯಪ್ರವೇಶಿಸಿ ನೀವು ಚುನಾವಣೆಗೆ ಸ್ಪರ್ಧಿಸುವುದಾದರೆ ನಮ್ಮ ಅಭ್ಯಂತರವಿಲ್ಲ. ಮೊದಲು ಪೀಠ ತ್ಯಾಗ ಮಾಡಿ, ಇಲ್ಲವೇ ಭಕ್ತರ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಿ ಎಂದು ಸೂಚ್ಯವಾಗಿ ಹೇಳಿದ್ದಾರೆ.
ಮಠಾೀಧಿಶರಾಗಿ ಕಾವಿ ಧರಿಸಿ ಚುನಾವಣೆಗೆ ಸ್ಪರ್ಧಿಸುವುದು ಸರಿಯಲ್ಲ. ಒಂದು ವೇಳೆ ಸ್ರ್ಪಸಬೇಕೆಂಬ ನಿರ್ಧಾರ ಅಚಲವಾದರೆ, ಪೀಠ ತ್ಯಾಗ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹಿರಿಯ ಶ್ರೀಗಳು ತಿಳಿ ಹೇಳಿದ್ದಾರೆ. ಅಂತಿಮವಾಗಿ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಹಿಂಪಡೆಯಲು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.