Friday, November 22, 2024
Homeರಾಜ್ಯಬೆಂಗಳೂರು ಗ್ರಾಮಾಂತರವನ್ನು ಅತೀಸೂಕ್ಷ್ಮ ಕ್ಷೇತ್ರ ವೆಂದು ಪರಿಗಣಿಸುವಂತೆ ಆಯೋಗ ಸೂಚನೆ

ಬೆಂಗಳೂರು ಗ್ರಾಮಾಂತರವನ್ನು ಅತೀಸೂಕ್ಷ್ಮ ಕ್ಷೇತ್ರ ವೆಂದು ಪರಿಗಣಿಸುವಂತೆ ಆಯೋಗ ಸೂಚನೆ

ಬೆಂಗಳೂರು,ಏ.22- ಜಿದ್ದಾಜಿದ್ದಿನ ಕುರುಕ್ಷೇತ್ರವಾಗಿರುವ ಪ್ರತಿಷ್ಠಿತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಅತೀಸೂಕ್ಷ್ಮ ಕ್ಷೇತ್ರವೆಂದು ಪರಿಗಣಿಸುವಂತೆ ಕೇಂದ್ರ ಚುನಾವಣಾ ಆಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.

ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಅತೀಸೂಕ್ಷ್ಮ ಕ್ಷೇತ್ರವೆಂದು ಪರಿಗಣಿಸಲಾಗಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಎಲ್ಲಾ ರೀತಿಯ ಕ್ರಮಗಳನ್ನೂ ತೆಗೆದುಕೊಳ್ಳಬೇಕೆಂದು ಉಪ ಮುಖ್ಯ ಚುನಾವಣಾಧಿಕಾರಿ ನವೀನ್ ಜೋಸೆಫ್ ಎ. ಅವರು ರಾಮನಗರ ಚುನಾವಣಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರ ಪರವಾಗಿ ಬಿಜೆಪಿ ಚುನಾವಣಾ ಏಜೆಂಟ್ ಪದ್ಮನಾಭ ಜಿ.ವಿ. ಅವರು ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಆಡಳಿತಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಇಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯವುದು ಅನಿವಾರ್ಯವಾಗಿದೆ.

ರಾಷ್ಟ್ರೀಯ ಪಕ್ಷಗಳಿಂದ ಪ್ರಬಲ ಅಭ್ಯರ್ಥಿಗಳು ಸ್ಪರ್ಧಿಸಿರುವ ಕಾರಣ ಈ ಕ್ಷೇತ್ರವನ್ನು ಅತೀಸೂಕ್ಷ್ಮವೆಂದು ಪರಿಗಣಿಸಿ ಎಲ್ಲಿ ಅಗತ್ಯವಿದೆಯೋ ಅಂತಹ ಕಡೆ ಸೇನಾಪಡೆ, ಅರೆಸೇನಾಪಡೆ, ಕ್ಷಿಪ್ರಪಡೆ ಸೇರಿದಂತೆ ಮತ್ತಿತರ ಭದ್ರತಾ ಪಡೆಗಳನ್ನು ನಿಯೋಜಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದರು.

ಈ ಪತ್ರವನ್ನು ಮುಖ್ಯ ಚುನಾವಣಾ ಆಯುಕ್ತರಿಗೆ ರವಾನಿಸಲಾಗಿತ್ತು. ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿದ ಆಯೋಗ ಅತೀಸೂಕ್ಷ್ಮ ಎಂದು ಪರಿಗಣಿಲುಸ ನಿರ್ದೇಶನ ನೀಡಿತ್ತು. ಇದೀಗ ಗ್ರಾಮಾಂತರ ಕ್ಷೇತ್ರವು ಅತೀ ಸೂಕ್ಷ್ಮ ಕ್ಷೇತ್ರವೆಂದು ಘೋಷಣೆಯಾಗಿರುವುದರಿಂದ ಮತದಾನಕ್ಕೂ ಮುನ್ನ ಕ್ಷೇತ್ರದಾದ್ಯಂತ ಹೆಚ್ಚಿನ ಭದ್ರತಾ ಪಡೆಯನ್ನು ನಿಯೋಜನೆ ಮಾಡಲಾಗುತ್ತದೆ.

ಮೂಲಗಳ ಪ್ರಕಾರ, ಒಂದೆರೆಡು ದಿನಗಳಲ್ಲಿ ಸಿಐಎಸ್‍ಎಫ್, ಸಿಆರ್‍ಪಿಎಫ್, ಆರ್‍ಎಎಫ್ ಹಾಗೂ ಸ್ಥಳೀಯ ಪೊಲೀಸರನ್ನು ಕೂಡ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

RELATED ARTICLES

Latest News