ಶಿವಮೊಗ್ಗ,ಏ.22- ಪ್ರಧಾನಮಂತ್ರಿಯಾಗಿದ್ದವರು ದೇಶದ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣಬೇಕು. ಆದರೆ ನರೇಂದ್ರ ಮೋದಿಯವರು ಅತ್ಯಂತ ಕೆಳಮಟ್ಟಕ್ಕೆ ಇಳಿದು ಟೀಕೆ ಮಾಡಿರುವುದು ಹುದ್ದೆಯ ಘನತೆಗೆ ಧಕ್ಕೆ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಮಹಿಳೆಯರ ಮಂಗಳಸೂತ್ರವನ್ನು ಕಿತ್ತು ಮುಸ್ಲಿಂ ಮಹಿಳೆಯರಿಗೆ ಕೊಡಲಾಗುತ್ತಿದೆ ಎಂದು ಪ್ರಧಾನಿ ಹೇಳಿರುವುದು ಅನಾರೋಗ್ಯಕರವಾದ ಟೀಕೆ. ಪ್ರಧಾನಿ ಹುದ್ದೆಯಲ್ಲಿದ್ದವರಿಂದ ಇಂತಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಪ್ರಧಾನಿಯಾದ ಅವರು ಎಲ್ಲರನ್ನೂ ಸಮಾನವಾಗಿ ಕಾಣಬೇಕಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಸಂಪತ್ತಿನ ಸಮಾನ ಹಂಚಿಕೆಗೆ ಆದ್ಯತೆ ನೀಡುತ್ತದೆ. ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಂಪತ್ತಿನ ಅವಕಾಶಗಳು ಎಲ್ಲರಿಗೂ ಸಮಾನವಾಗಿ ದೊರೆಯಬೇಕು ಎಂಬುದು ಅಂಬೇಡ್ಕರ್ ಅವರ ಆಶಯ. ಕಾಂಗ್ರೆಸ್ ಪಕ್ಷ ಅದಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿದೆ.
ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಚೊಂಬು ನೀಡಿದೆ. 15 ಲಕ್ಷ ರೂ. ಹಣ, 2 ಕೋಟಿ ರೂ. ಉದ್ಯೋಗ, ರೈತರ ಆದಾಯ ದ್ವಿಗುಣ ಸೇರಿದಂತೆ ಕೊಟ್ಟ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ರಾಜ್ಯಕ್ಕೆ ತೆರಿಗೆ ಪಾಲಿನಲ್ಲೂ ವಂಚನೆ ಮಾಡಲಾಗಿದೆ. ಈ ಮೂಲಕ ಬಿಜೆಪಿ ಚಿಪ್ಪು ಮತ್ತು ಚೊಂಬು ಈ ಎರಡನ್ನೂ ನೀಡಿದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಕಾಂಗ್ರೆಸ್ ಡೇಂಜರ್ ಎಂದು ಬಿಜೆಪಿ ನೀಡಿರುವ ಜಾಹೀರಾತಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು ಮಹಿಳೆಯರಿಗೆ 2 ಸಾವಿರ ರೂ. ನೀಡುತ್ತಿದ್ದೇವೆ. ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದ್ದೇವೆ, ಉಚಿತ ವಿದ್ಯುತ್ ಪೂರೈಕೆಯಾಗುತ್ತಿದೆ, ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ಕೊಡುತ್ತಿದ್ದೇವೆ. ಇದರಲ್ಲಿ ಯಾವುದು ಡೇಂಜರ್ ಎಂದು ಸಿದ್ದರಾಮಯ್ಯ ಮರುಪ್ರಶ್ನಿಸಿದರು.
ವಿವಿಧತೆಯಲ್ಲಿ ಏಕತೆ ದೇಶಕ್ಕೆ ಒಳ್ಳೆಯದು. ಆದರೆ ಬಿಜೆಪಿ ಏಕತೆಗೆ ಡೇಂಜರ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದಾಯ ತೆರಿಗೆ, ಇಡಿ ಸೇರಿದಂತೆ ಯಾವುದೇ ದಾಳಿಗಳಿಗೆ ನಮ್ಮ ವಿರೋಧವಿಲ್ಲ. ಆದರೆ ಅದು ಕಾನೂನುಪ್ರಕಾರ ನಡೆಯಬೇಕು. ರಾಜಕೀಯ ದ್ವೇಷಕ್ಕೆ ಬಳಕೆಯಾಗಬಾರದು. ಬಿಜೆಪಿಯಲ್ಲಿ ಯಡಿಯೂರಪ್ಪ, ವಿಜಯೇಂದ್ರ ಅಕ್ರಮ ಸಂಪತ್ತು ಗಳಿಸಿಲ್ಲವೇ?, ಭ್ರಷ್ಟಾಚಾರ ಮಾಡಿಲ್ಲವೇ? ಅವರ ಮೇಲೆ ಏಕೆ ದಾಳಿಯಾಗಿಲ್ಲ? ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಆರ್.ಅಶೋಕ್ ಮೇಲೆ ಎಂದಾದರೂ ದಾಳಿಗಳು ನಡೆದಿದೆಯೇ? ಎಂದು ಪ್ರಶ್ನಿಸಿದರು.
ಈಶ್ವರಪ್ಪ ಅವರಿಗೆ ಮೆದುಳು ಮತ್ತು ನಾಲಿಗೆ ಮೇಲೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಅವರ ಟೀಕೆಗೆ ಪ್ರತಿಕ್ರಿಯಿಸುವುದಿಲ್ಲ. ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು. ಲೋಕಸಭಾ ಚುನಾವಣೆಯಲ್ಲೂ ಅದೇ ರೀತಿ ಮಾತನಾಡುತ್ತಿದ್ದಾರೆ. ಆದರೆ ಜನ ಅದಕ್ಕೆ ಮನ್ನಣೆ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಗೆಲ್ಲಿಸಿಕೊಡುತ್ತಾರೆ ಎಂದು ಹೇಳಿದರು.
ಧಾರವಾಡದಲ್ಲಿರುವ ಫಕೀರೇಶ್ವರ ಮಠ ಜಾತ್ಯತೀತ ನಿಲುವುಗಳಿಗೆ ಬದ್ಧವಾಗಿ ನಡೆದುಕೊಂಡು ಬಂದಿದೆ. ಅಲ್ಲಿನ ಮಠಾೀಧಿಶರ ದಿಂಗಾಲೇಶ್ವರ ಸ್ವಾಮಿಯವರೂ ಕೂಡ ಜಾತ್ಯತೀತರು. ಲೋಕಸಭಾ ಚುನಾವಣೆಯಲ್ಲಿ ಸ್ರ್ಪಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಅದನ್ನು ಹಿಂಪಡೆದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ನಾವು ಮನವಿ ಮಾಡಿಕೊಂಡಿದ್ದೇವೆ ಎಂದರು.
ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ, ರಾಜ್ಯಸರ್ಕಾರಗಳು ಪ್ರಸ್ತಾವನೆ ಸಲ್ಲಿಸಿದ ಒಂದು ತಿಂಗಳ ಒಳಗಾಗಿ ನೆರೆ ಮತ್ತು ಬರ ಪರಿಸ್ಥಿತಿಗೆ ಪರಿಹಾರ ಪಾವತಿಸಬೇಕು. ಆದರೆ ಕೇಂದ್ರ ಸರ್ಕಾರ 6 ತಿಂಗಳಾದರೂ ಕರ್ನಾಟಕಕ್ಕೆ ಬಿಡಿಗಾಸು ಕೊಟ್ಟಿಲ್ಲ. ನಾವು ಸತತ ಪ್ರಯತ್ನ ನಡೆಸಿದ್ದೇವೆ. ಆದರೂ ಮಲತಾಯಿ ಧೋರಣೆ ಮುಂದುವರೆದಿದೆ ಎಂದು ಮುಖ್ಯಮಂತ್ರಿ ಕಿಡಿಕಾರಿದ್ದಾರೆ.
ರಾಜ್ಯದ ಖಜಾನೆ ಖಾಲಿಯಾಗಿದೆ ಎಂಬ ಬಿಜೆಪಿಯವರ ಟೀಕೆ ಅಪ್ರಸ್ತುತ. ಯಾವ ಆಧಾರದ ಮೇಲೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ? ನಮ್ಮ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಜೊತೆಗೆ ಪಂಚಖಾತ್ರಿ ಯೋಜನೆಗಳು ಯಶಸ್ವಿಯಾಗಿ ಜಾರಿಗೊಂಡಿವೆ ಎಂದು ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡರು.