ನ್ಯೂಯಾರ್ಕ್,ನ.18- ಭಾರತವು ಗಂಭೀರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅಮೆರಿಕದ ನ್ಯೂಯಾರ್ಕ್ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಭಾರತದಲ್ಲಿ ಭಾರಿ ನಿರುದ್ಯೋಗ ಸಮಸ್ಯೆ ಇದೆ. ಉತ್ಪಾದನಾ ವಲಯ ನಿರೀಕ್ಷಿತ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುತ್ತಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿಯೂ ಗಂಭೀರ ಸಮಸ್ಯೆಗಳಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಭಾರತದ ಪ್ರಸ್ತುತ ಆರ್ಥಿಕ ಮಾದರಿ ಸುಮಾರು ಒಂದು ದಶಕದ ಹಿಂದೆ ತನ್ನ ಫಲಿತಾಂಶ ನೀಡುವುದನ್ನು ನಿಲ್ಲಿಸಿದೆ ಎಂದು ಅವರು ಪ್ರತಿಪಾದಿಸಿದರು.
ಭಾರತವು ಆರ್ಥಿಕ ವಿಕೋಪದಲ್ಲಿ ಕುಳಿತಿದೆ ಎಂಬುದು ಸ್ಪಷ್ಟ. ಅದು ವಾಸ್ತವ. ಮಾಧ್ಯಮಗಳು ಅದನ್ನು ಬದಿಗಿಡಬಹುದು. ಆದರೆ ಭಾರತದಲ್ಲಿ ಭಾರಿ ನಿರುದ್ಯೋಗ ಸಮಸ್ಯೆ ಇದೆ. ಶಿಕ್ಷಣ ವ್ಯವಸ್ಥೆಯಲ್ಲಿಯೂ ದೊಡ್ಡ ಸಮಸ್ಯೆಯಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಮೇಕ್ ಇನ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ ಯೋಜನೆಗಳ ಬಗ್ಗೆ ಪ್ರಶ್ನೆ :
ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟ್ಅಪ್ ಇಂಡಿಯಾಗಳ ಪರಿಣಾಮಕಾರತ್ವವನ್ನೂ ರಾಹುಲ್ ಪ್ರಶ್ನಿಸಿದರು. ಈ ಯೋಜನೆಗಳು ದೇಶದ ಯುವಜನರಿಗೆ ಅಗತ್ಯ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ವಿಫಲವಾಗಿವೆ ಎಂದು ಅವರು ವಾದಿಸಿದರು.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕೃಷಿ ವಲಯ ಭಾರತದ ಆರ್ಥಿಕತೆಯ ಬೆನ್ನೆಲುಬು ಎಂದು ಹೇಳಿದ ರಾಹುಲ್, ಆ ಬೆನ್ನೆಲುಬೇ ದುರ್ಬಲಗೊಂಡಿದೆ ಎಂದು ಟೀಕಿಸಿದರು. ಕೇವಲ ಸೇವಾ ವಲಯದ ಮೂಲಕ ದೇಶದ ಎಲ್ಲರಿಗೂ ಉದ್ಯೋಗ ಒದಗಿಸಲು ಸಾಧ್ಯವಿಲ್ಲ ಎಂದ ಅವರು, ಉತ್ಪಾದನಾ ವಲಯವನ್ನು ಪುನರ್ನಿರ್ಮಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸೇವಾ ವಲಯದ ಮೂಲಕ ಸಾಕಷ್ಟು ಜನರಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ. ಶೇ 1, 2, 3 ಅಥವಾ 5ರಷ್ಟು ಉದ್ಯೋಗಾವಕಾಶಗಳನ್ನು ನೀಡಬಹುದು. ಆದರೆ ಎಲ್ಲರಿಗೂ ಸೇವಾ ವಲಯದ ಮೂಲಕ ಭವಿಷ್ಯ ಒದಗಿಸಲು ಸಾಧ್ಯವಿಲ್ಲ. ಉತ್ಪಾದನೆ ನಮಗೆ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ನಾವು ಮೂಲತಃ ಬಂದಿದ್ದೇವೆ ಎಂದು ಅವರು ಹೇಳಿದರು.
ವಿದೇಶಿ ನೆಲದಲ್ಲಿ ಭಾರತ ವಿರೋಧಿ ಪ್ರಚಾರ ಆರೋಪ
ರಾಹುಲ್ ಗಾಂಧಿ ಅವರ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ವಿದೇಶಿ ನೆಲದಲ್ಲಿ ಭಾರತದ ಆರ್ಥಿಕತೆಯನ್ನು ಟೀಕಿಸುವ ಮೂಲಕ ಅವರು ಭಾರತ ವಿರೋಧಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ. ವಿದೇಶಿ ವಿಶ್ವವಿದ್ಯಾನಿಲಯಗಳು ಹಾಗೂ ವೇದಿಕೆಗಳಲ್ಲಿ ರಾಹುಲ್ ಗಾಂಧಿ ನೀಡುವ ಹೇಳಿಕೆಗಳು ಈ ಹಿಂದೆಯೂ ರಾಜಕೀಯ ವಿವಾದಕ್ಕೆ ಕಾರಣವಾಗಿವೆ ಎಂದು ಬಿಜೆಪಿ ವಾದಿಸಿದೆ. ದೇಶದ ಆರ್ಥಿಕತೆ ಮತ್ತು ಸರ್ಕಾರದ ನೀತಿಗಳ ಕುರಿತು ಟೀಕೆ ಮಾಡುವ ಹಕ್ಕು ವಿರೋಧ ಪಕ್ಷಕ್ಕಿದ್ದರೂ, ಅಂತಹ ಟೀಕೆಗಳನ್ನು ವಿದೇಶಿ ನೆಲದಲ್ಲಿ ಮಾಡುವ ಮೂಲಕ ಭಾರತದ ಬಗ್ಗೆ ನಕಾರಾತಕ ಚಿತ್ರಣ ಮೂಡಿಸಲಾಗುತ್ತಿದೆ ಎಂಬುದು ಬಿಜೆಪಿಯ ಆರೋಪವಾಗಿದೆ. ಹೀಗಾಗಿ, ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ರಾಹುಲ್ ಗಾಂಧಿ ಮಾಡಿದ ಆರ್ಥಿಕ ಟೀಕೆಗಳು ಮತ್ತೊಮೆ ಕಾಂಗ್ರೆಸ್ಬಿಜೆಪಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ.
