ಬೆಂಗಳೂರು,ಏ.23- ರಾಜ್ಯದ ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳ ನಾಮಪತ್ರ ಹಿಂಪಡೆಯುವಿಕೆ ಮುಕ್ತಾಯಗೊಂಡಿದ್ದು, ಚುನಾವಣಾ ಕಣದಲ್ಲಿ 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‍ನ ತಲಾ 14 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದರೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಯಾವುದೇ ಕ್ಷೇತ್ರದಲ್ಲಿ ಸ್ರ್ಪಧಿಸಿಲ್ಲ.
ರಾಯಚೂರು ಮತ್ತು ಬಿಜಾಪುರ ಲೋಕಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ 8 ಅಭ್ಯರ್ಥಿಗಳಿದ್ದರೆ, ದಾವಣಗೆರೆ ಕ್ಷೇತ್ರದಲ್ಲಿ ಅತೀ ಹೆಚ್ಚು 30 ಅಭ್ಯರ್ಥಿಗಳಿದ್ದಾರೆ. ಚಿಕ್ಕೋಡಿ 18, ಬೆಳಗಾವಿ 13, ಬಾಗಲಕೋಟೆ 22, ಗುಲ್ಬರ್ಗ 14, ಬೀದರ್ 18, ಕೊಪ್ಪಳ 19, ಬಳ್ಳಾರಿ 10, ಹಾವೇರಿ 14, ಧಾರವಾಡ 17, ಉತ್ತರ ಕನ್ನಡ 13, ಶಿವಮೊಗ್ಗ 23 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಇದರಲ್ಲಿ 206 ಪುರುಷ ಹಾಗೂ 21 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ. ನಾಮಪತ್ರ ಹಿಂಪಡೆಯಲು ಕಡೆಯ ದಿನವಾದ ನಿನ್ನೆ 45 ನಾಮಪತ್ರಗಳನ್ನು ವಾಪಸ್ಸು ಪಡೆಯಲಾಗಿದೆ.ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಲ್ಲಿ 247 ಹಾಗೂ ಎರಡನೇ ಹಂತದ 14 ಕ್ಷೇತ್ರಗಳಲ್ಲಿ 227 ಅಭ್ಯರ್ಥಿಗಳು ಸೇರಿದಂತೆ ಒಟ್ಟು 474 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಎರಡು ಹಂತದ 28 ಲೋಕಸಭಾ ಕ್ಷೇತ್ರಗಳಲ್ಲಿ 5.47 ಕೋಟಿ ಮತದಾರರಿದ್ದು, 58,834 ಮತಗಟ್ಟೆಗಳನ್ನು ತೆರಯಲಾಗುತ್ತದೆ. 1832 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ರಾಜ್ಯ ಚುನಾವಣಾಧಿಕಾರಿಗಳ ಇಲಾಖೆ ಪ್ರಕಟಣೆ ತಿಳಿಸಿದೆ.
ಉಪಚುನಾವಣೆ :
ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣದಲ್ಲಿ ಬಿಜೆಪಿ, ಕಾಂಗ್ರೆಸ್‍ನ ತಲಾ ಒಬ್ಬರು ಹಾಗೂ ನಾಲ್ವರು ಸ್ವತಂತ್ರ್ಯ ಅಭ್ಯರ್ಥಿ ಸೇರಿದಂತೆ ಒಟ್ಟು 6 ಮಂದಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.ಮೇ 7 ರಂದು 14 ಕ್ಷೇತ್ರಗಳ ಹಾಗೂ ಸುರಪುರ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆಯಲಿದೆ.