Tuesday, December 23, 2025
Homeರಾಜಕೀಯಅಧಿಕಾರ ಹಂಚಿಕೆ ಒಪ್ಪಂದವಾಗಿದೆ, ಸಿದ್ದರಾಮಯ್ಯನವರು ಅದರಂತೆ ನಡೆದುಕೊಳ್ಳಬೇಕು : ಡಿಕೆಶಿ ಬಣದ ಸ್ಫೋಟಕ ಹೇಳಿಕೆ

ಅಧಿಕಾರ ಹಂಚಿಕೆ ಒಪ್ಪಂದವಾಗಿದೆ, ಸಿದ್ದರಾಮಯ್ಯನವರು ಅದರಂತೆ ನಡೆದುಕೊಳ್ಳಬೇಕು : ಡಿಕೆಶಿ ಬಣದ ಸ್ಫೋಟಕ ಹೇಳಿಕೆ

There is a power sharing agreement, Siddaramaiah should act accordingly

ಬೆಂಗಳೂರು, ಡಿ.23- ಕಾಂಗ್ರೆಸ್‌‍ ಪಕ್ಷದಲ್ಲಿ ಸಮಸ್ಯೆಗಳೇ ಇಲ್ಲ. ಇನ್ನು ಬಗೆಹರಿಸಿಕೊಳ್ಳುವುದು ಯಾವುದನ್ನು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿ ದೆಹಲಿಗೆ ವಿಮಾನ ಏರಿದ ಬೆನ್ನಲ್ಲೇ, ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆ. ಅದರಂತೆ ಸಿದ್ದರಾಮಯ್ಯ ನಡೆದುಕೊಳ್ಳಬೇಕು ಎಂಬ ಒತ್ತಾಯವನ್ನು ಡಿ.ಕೆ. ಬಣದ ಶಾಸಕರು ಮುಂದಿಟ್ಟಿದ್ದಾರೆ.

ಕೇಂದ್ರ ಸಚಿವರ ಹಾಗೂ ಪಕ್ಷದ ಹೈಕಮಾಂಡ್‌ ನಾಯಕರ ಭೇಟಿಗಾಗಿ ಡಿ.ಕೆ.ಶಿವಕುಮಾರ್‌ ಇಂದು ಬೆಳಿಗ್ಗೆ ದೆಹಲಿಗೆ ತೆರಳಿದ್ದಾರೆ. ಎರಡು ದಿನಗಳವರೆಗೂ ಅವರು ದೆಹಲಿಯಲ್ಲೇ ಠಿಕಾಣಿ ಹೂಡಲಿದ್ದಾರೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಚೇವಾಲ, ಪವನ್‌ ಖೇರಾ, ಜೈರಾಮ್‌ ರಮೇಶ್‌ ಮತ್ತು ಸೋನಿಯಾ ಗಾಂಧಿ ಅವರ ಆಪ್ತರಾದ ಅಂಬಿಕಾ ಸೋನಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಉಪಮುಖ್ಯಮಂತ್ರಿಯವರ ದೆಹಲಿ ಪ್ರವಾಸದ ಬೆನ್ನಲ್ಲೆ ಡಿ.ಕೆ.ಶಿವಕುಮಾರ್‌ ಆಪ್ತರು ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆ. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದುಕೊಳ್ಳಬೇಕು ಎಂದು ನೇರವಾಗಿ ಹೇಳುವ ಮೂಲಕ ಸಂಘರ್ಷವನ್ನು ಮತ್ತೊಂದು ಹಾದಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ.

ಬೆಳಗಾವಿಯ ವಿಧಾನಮಂಡಲದ ಅಧಿವೇಶನದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಯಾವುದೇ ಒಪ್ಪಂದ ಆಗಿಲ್ಲ ಎಂದಿದ್ದರು. ಇದಕ್ಕೂ ಮೊದಲು ಕಳೆದ ತಿಂಗಳು ಡಿ.ಕೆ.ಶಿವಕುಮಾರ್‌ ರಾಮನಗರದಲ್ಲಿ ಮಾತನಾಡುವ ವೇಳೆಯಲ್ಲಿ ದೆಹಲಿಯಲ್ಲಿ ಐದಾರು ಮಂದಿಯ ನಡುವೆ ನಡೆದಿರುವ ವ್ಯಾಪಾರವನ್ನು ಬಹಿರಂಗ ಪಡಿಸಲು ತಾವು ಇಚ್ಚಿಸುವುದಿಲ್ಲ ಎಂದು ಹೇಳಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದರು.

ಯಾವುದೇ ಒಪ್ಪಂದ ಆಗಿಲ್ಲ ಎಂದು ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳುವುದಕ್ಕೂ, ಅದಾದ ಎರಡು ದಿನಗಳ ಬಳಿಕ ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು, ನಾಯಕತ್ವದ ಗೊಂದಲಗಳನ್ನು ಸೃಷ್ಟಿ ಮಾಡಿರುವುದು ರಾಜ್ಯದ ನಾಯಕರು. ಅದನ್ನು ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳಬೇಕು ಎನ್ನುವುದಕ್ಕೂ ತಾಳಮೇಳ ಹೊಂದಾಣಿಕೆಯಾಗಿತ್ತು.

ಈ ಹೇಳಿಕೆ ಆಂತರಿಕವಾಗಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಿದೆ. ಮುಖ್ಯಮಂತ್ರಿ ಹುದ್ದೆ ಆಭಾದಿತ ಎಂಬ ಭರವಸೆಯ ಮೇಲೆ ಸಿದ್ದರಾಮಯ್ಯ ಅವರ ಬಣ ಸಂಭ್ರಮಾಚರಣೆ ಮಾಡುತ್ತಿದೆ. ಈ ಹೊತ್ತಿನಲ್ಲೇ ಡಿ.ಕೆ. ಶಿವಕುಮಾರ್‌ ಅವರ ಪರಮಾಪ್ತರಾಗಿರುವ ಕುಣಿಗಲ್‌ ಕ್ಷೇತ್ರದ ಶಾಸಕ ಎಚ್‌.ಡಿ.ರಂಗನಾಥ್‌, ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎಂದು ಉಪಮುಖ್ಯಮಂತ್ರಿಯವರು ನಮೊಂದಿಗೆ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳದಿರುವುದು ಸರಿಯಲ್ಲ ಎಂದು ಹೆಚ್‌.ಡಿ.ರಂಗನಾಥ್‌ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅಣ್ಣ-ತಮಂದಿರಂತೆ ಕೆಲಸ ಮಾಡುತ್ತಿದ್ದಾರೆ. ಒಪ್ಪಂದವಾಗಿರುವಂತೆ ಹೈಕಮಾಂಡ್‌ ನಾಯಕರು ಎಲ್ಲವನ್ನು ಸರಿಪಡಿಸುತ್ತಾರೆ ಎಂಬ ವಿಶ್ವಾಸವಿದೆ. ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಿಂದ ಹಿಂದೆ ಸರಿಯುವುದಿಲ್ಲ ಒಳ್ಳೆಯದಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ, ಒಳ್ಳೆಯದಾಗುತ್ತದೆ ಎಂದು ರಂಗನಾಥ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಧಿಕಾರ ಹಂಚಿಕೆಯ ಯಾವುದೇ ಒಪ್ಪಂದ ಆಗಿಲ್ಲ ಎಂದು ಮುಖ್ಯಮಂತ್ರಿ ಹೇಳಿರುವ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಡಿಕೆ ಶಿವಕುಮಾರ್‌ ಅವರು ಒಪ್ಪಂದ ಆಗಿದೆ ಎಂದು ಹೇಳಿದ್ದಾರೆ. ನಾವುಅದನ್ನು ನಂಬುತ್ತೇವೆ. ಹೈಕಮಾಂಡ್‌ ನಾಯಕರು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಸ್ಫೋಟಕ ತಿರುವು:

ಅಧಿಕಾರ ಹಂಚಿಕೆಯ ಬಗ್ಗೆ ಒಪ್ಪಂದ ಆಗಿದೆಯೋ ಇಲ್ಲವೋ ಎಂಬ ಗೊಂದಲಗಳೆ ರಾಜ್ಯದ ರಾಜಕಾರಣವನ್ನು ರಾಡಿ ಮಾಡಿವೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷ ಭರ್ಜರಿ ಬಹುಮತಕ್ಕೆ ಗಳಿಸಿದಾಗ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ದೆಹಲಿಯಲ್ಲಿ ಒಂದು ವಾರ ಕಾಲ ಸಂಧಾನದ ಕಸರತ್ತುಗಳು ನಡೆದವು.

ಡಿ.ಕೆ.ಶಿವಕುಮಾರ್‌ ದೆಹಲಿಗೆ ಹೋಗುವ ಮೊದಲು ತಾವು ಕೆಲಸ ಮಾಡಿದ್ದು, ಅದಕ್ಕೆ ಕೂಲಿ ಕೇಳುತ್ತಿದ್ದೇನೆ ಎಂದು ಹೇಳಿದ್ದರು. ಆ ವೇಳೆ ಸಿದ್ದರಾಮಯ್ಯ ಯಾವುದೇ ಮಾತನಾಡದೆ ಮೌನವಾಗಿದ್ದುಕೊಂಡು ಒಳಗೊಳಗೆ ರಣತಂತ್ರಗಳನ್ನು ರೂಪಿಸಿ ಹೈಕಮಾಂಡ್‌ ಮನ ಗೆದ್ದಿದ್ದರು. ಸಂಧಾನ ಸೂತ್ರ ಯಶಸ್ವಿಯಾದ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಡಿಕೆ ಶಿವಕುಮಾರ್‌ ಅವರನ್ನು ಉಪಮುಖ್ಯಮಂತ್ರಿಯಾಗಿ ನಿಯೋಜಿಸಲಾಗುತ್ತಿದೆ. ಕರ್ನಾಟಕಕ್ಕೆ ಒಂದೇ ಒಂದು ಉಪಮುಖ್ಯಮಂತ್ರಿ ಹುದ್ದೆಗೆ ಮಾತ್ರ ಇರಲಿದೆ. ಲೋಕಸಭೆಯ ಚುನಾವಣೆಯವರೆಗೂ ಡಿಕೆ ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿದ್ದರು.

ಅದರ ಬಳಿಕ ಬೆಂಗಳೂರಿನಲ್ಲಿ ಕಾಂಗ್ರೆಸ್‌‍ ಶಾಸಕಾಂಗ ಸಭೆ ನಡೆದು ಸಿದ್ದರಾಮಯ್ಯ ಅವರನ್ನು ಶಾಸಕಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿರುವುದಾಗಿ ಅಧಿಕೃತ ಘೋಷಣೆ ಹೊರ ಬಿದ್ದಿತ್ತು. ಅದರ ನಂತರ ಎರಡುವರೆ ವರ್ಷ ತುಂಬಿದ ವೇಳೆಯಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಚರ್ಚೆಗಳು ಆರಂಭದಿಂದಲೂ ಇವೆ. ಲೋಕಸಭೆ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಅವರ ಬಣ, ಜಾತಿವಾರು ಲೆಕ್ಕಾಚಾರದಲ್ಲಿ ಮೂರರಿಂದ ಐದು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಠಿಸಬೇಕು ಎಂಬ ಬೇಡಿಕೆ ಮಂಡಿಸಿತ್ತು. ಒಂದಷ್ಟು ದಿನ ಆ ಚರ್ಚೆ ಪಕ್ಷದಲ್ಲಿ ಗೊಂದಲ ಮೂಡಿಸಿತು.

ಮಲ್ಲಿಕಾರ್ಜುನ ಖರ್ಗೆ, ಎಲ್ಲರೂ ಬಾಯಿ ಮುಚ್ಚಿಕೊಂಡು ತಮಗೆ ವಹಿಸಿರುವ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕು. ಹೈಕಮಾಂಡ್‌ ಕಾಲಕಾಲಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಗದರುವ ಮೂಲಕ ಎಲ್ಲವನ್ನು ತಣ್ಣಗಾಗಿಸಿದರು.

ಲೋಕಸಭೆಯ ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು ಎಂದು ಸಿದ್ದರಾಮಯ್ಯ ಅವರ ಆಪ್ತ ಸಚಿವರಾದ ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಒಂದಿಷ್ಟು ಲಾಬಿಗಳು ನಡೆದಿದ್ದವು. ಆದರೆ ಹೈಕಮಾಂಡ್‌ ಅದ್ಯಾವುದಕ್ಕೂ ಮಣೆ ಹಾಕಲಿಲ್ಲ. ಇದಕ್ಕೆ ಪ್ರತಿಯಾಗಿ ಡಿ.ಕೆ. ಬಣ ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆ ಎಂಬ ಭಾವನೆಯನ್ನು ಬಲವಾಗಿ ಬಿತ್ತಲಾರಂಭಿಸಿದೆ. ಈ ಮೂಲಕ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದೆ. ಡಿ.ಕೆ.ಬಣದ ಶಾಸಕರ ದೆಹಲಿ ಯಾತ್ರೆಯಾಗಿದೆ. ಸಂಧಾನಕ್ಕಾಗಿ ಬೆಂಗಳೂರಿನಲ್ಲಿ ಉಪಹಾರ ಕೂಟಗಳಾಗಿವೆ.

ಎಲ್ಲದರ ನಡುವೆಯೂ ಯಾವುದೇ ಒಪ್ಪಂದ ಆಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಒಪ್ಪಂದ ಆಗಿದೆ ಎಂದು ಈವರೆಗೂ ಯಾರೂ ಬಹಿರಂಗವಾಗಿ ಮಾತನಾಡಿರಲಿಲ್ಲ. ಇದೇ ಮೊದಲ ಬಾರಿಗೆ ಎಚ್‌.ಡಿ.ರಂಗನಾಥ್‌ ಒಪ್ಪಂದ ಆಗಿದೆ ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ ಎಂದು ಸ್ಪಷ್ಟಪಡಿಸುವ ಮೂಲಕ ಕಾಂಗ್ರೆಸ್ಸಿನಲ್ಲಿ ರಾಜಕೀಯ ಜಿದ್ದಾಜಿದ್ದಿಯನ್ನು ಬೇರೆ ಮಗ್ಗಲಿಗೆ ತಿರುಗಿಸಿದ್ದಾರೆ.

RELATED ARTICLES

Latest News