ದೊಡ್ಡಬಳ್ಳಾಪುರ,ಡಿ.23- ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಘಾಟಿ ಸುಬ್ರಹಣ್ಯದಲ್ಲಿ ಇದೇ 25ರಂದು ನಡೆಯಲಿರುವ ಬ್ರಹರಥೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.
ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ದರ್ಶನ, ಸಂಚಾರ, ಭದ್ರತೆ ಹಾಗೂ ಮೂಲಸೌಕರ್ಯಗಳ ವ್ಯವಸ್ಥೆಯನ್ನು ದೇವಾಲಯದ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಸಂಯುಕ್ತವಾಗಿ ಕೈಗೊಂಡಿವೆ.
ಬ್ರಹರಥೋತ್ಸವದಂದು ದೇವಾಲಯವನ್ನು ಪ್ರಾತಃಕಾಲ 2 ಗಂಟೆಗೆ ತೆರೆಯಲಿದ್ದು, 2.30ಕ್ಕೆ ಅಭಿಷೇಕ, 4.30ಕ್ಕೆ ಮಹಾಮಂಗಳಾರತಿ, 5 ರಿಂದ 6 ಗಂಟೆಯವರೆಗೆ ಸ್ಥಳೀಯ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 6 ಗಂಟೆಯಿಂದ ಸಾಮಾನ್ಯ ಭಕ್ತಾಧಿಗಳಿಗೆ ಧರ್ಮ ದರ್ಶನ ಹಾಗೂ 50 ರೂ.ಗಳ ಟಿಕೆಟ್ ನೀಡಿ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿದೆ.
ಉಚಿತ ಬಸ್ ಮತ್ತು ಪಾರ್ಕಿಂಗ್ ವ್ಯವಸ್ಥೆ :
ರಥೋತ್ಸವದಂದು ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ಕಂಟನಕುಂಟೆಯಿಂದ 15 ಹಾಗೂ ಮಾಕಳಿಯಿಂದ 10 ಉಚಿತ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಘಾಟಿ ಸುಬ್ರಹಣ್ಯ ಕ್ಷೇತ್ರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಸ್ಥಳಗಳಲ್ಲಿ ಎರಡು ಮತ್ತು ನಾಲ್ಕು ಚಕ್ರ ವಾಹನಗಳಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಜ.1ರಿಂದ 31ರವರೆಗೆ ಶ್ರೀ ಕ್ಷೇತ್ರಕ್ಕೆ ಬರುವ ವಾಹನಗಳಿಗೆ ಸುಂಕ ವಿನಾಯಿತಿ ನೀಡಲಾಗಿದೆ.
ಭದ್ರತೆಗೆ 700 ಪೊಲೀಸರ ನಿಯೋಜನೆ :
ಭಕ್ತಾಧಿಗಳ ಭದ್ರತೆ ಹಾಗೂ ಸುಗಮ ಸಂಚಾರಕ್ಕೆ ಸುಮಾರು 700 ಪೊಲೀಸ್ ಸಿಬ್ಬಂದಿ ಮತ್ತು 200 ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಸರಗಳ್ಳತನ, ಜೇಬುಗಳ್ಳತನ ಹಾಗೂ ಯಾವುದೇ ಅವಘಡಗಳು ನಡೆಯದಂತೆ ತಡೆಯಲು ಕ್ಷೇತ್ರದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸುಮಾರು 80 ಸಿಸಿ ಕ್ಯಾಮರಗಳನ್ನು ಅಳವಡಿಸಿ ನಿರಂತರ ಕಣ್ಗಾವಲು ಇಡಲಾಗಿದೆ.
ವಿಶೇಷ ದೀಪಾಲಂಕಾರ:
ಡಿ.23ರಿಂದ 28ರವರೆಗೆ ಶ್ರೀ ಕ್ಷೇತ್ರದಲ್ಲಿ ವಿಶೇಷ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರು, ವಿಶೇಷ ಚೇತನರು, ಗರ್ಭಿಣಿ ಮಹಿಳೆಯರು ಹಾಗೂ ಒಂದು ವರ್ಷದೊಳಗಿನ ಶಿಶುವಿನೊಂದಿಗೆ ಬರುವ ಮಹಿಳೆಯರಿಗೆ ನೇರ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೆ ಸಾರ್ವಜನಿಕರ ಅನುಕೂಲಕ್ಕಾಗಿ ಮೊಬೈಲ್ ಶೌಚಾಲಯಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.
ಬ್ರಹರಥೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಧಾರ್ಮಿಕ ವಾತಾವರಣ ನಿರ್ಮಾಣವಾಗಿದ್ದು, ಎಲ್ಲ ವ್ಯವಸ್ಥೆಗಳನ್ನೂ ಸಮರ್ಪಕವಾಗಿ ನಿರ್ವಹಿಸಲು ಸಂಬಂಧಪಟ್ಟ ಇಲಾಖೆಗಳು ಸಜ್ಜಾಗಿವೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
