Homeರಾಜ್ಯಬೆಂಗಳೂರಲ್ಲಿ ರಸ್ತೆಬದಿ ಪಾರ್ಕಿಂಗ್‌ಗೆ ಹೊಸ ವ್ಯವಸ್ಥೆ

ಬೆಂಗಳೂರಲ್ಲಿ ರಸ್ತೆಬದಿ ಪಾರ್ಕಿಂಗ್‌ಗೆ ಹೊಸ ವ್ಯವಸ್ಥೆ

New system for roadside parking

ಬೆಂಗಳೂರು,ಜು.29- ನಗರದಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರ ದಟ್ಟಣೆ ಉಂಟುಮಾಡುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ನೂತನ ಪಾರ್ಕಿಂಗ್‌ ಪಾಲಿಸಿಯನ್ನು ಜಾರಿಗೆ ತರಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿದೆ. ಫುಟ್‌ಪಾತ್‌ ಒತ್ತುವರಿ ತೆರವು ಹಾಗೂ ಅನಾಥ ವಾಹನಗಳ ತೆರವು ಕಾರ್ಯಾಚರಣೆಯ ಬಳಿಕ ಈ ನೀತಿ ಜಾರಿಗೊಳಿಸುವ ಸಾಧ್ಯತೆ ಇದೆ.

ಈ ಸಂಬಂಧ ಐದು ನಗರಪಾಲಿಕೆಗಳಿಗೂ ತಮ ವ್ಯಾಪ್ತಿಯ ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ಯೋಗ್ಯ ಸ್ಥಳಗಳ ಮಾಹಿತಿ ನೀಡುವಂತೆ ಜಿಬಿಎ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ. ಜನಸಂದಣಿ ಹೆಚ್ಚಿರುವ ಮಾರುಕಟ್ಟೆಗಳು, ವಾಣಿಜ್ಯ ಪ್ರದೇಶಗಳು, ಹೆಚ್ಚು ವಾಹನ ನಿಲುಗಡೆಯಾಗುವ ರಸ್ತೆಗಳು ಹಾಗೂ ಪಾರ್ಕಿಂಗ್‌ಗೆ ಬೇಡಿಕೆ ಇರುವ ಸ್ಥಳಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ.

ಮುಖ್ಯ ಆಯುಕ್ತರ ನಿರ್ದೇಶನದ ಬೆನ್ನಲ್ಲೇ ಐದು ನಗರಪಾಲಿಕೆಗಳ ಆಯುಕ್ತರು ತಮ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಗುರುತಿಸುವ ಕಾರ್ಯ ಆರಂಭಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸಂಚಾರ ಪೊಲೀಸ್‌‍ ಇಲಾಖೆಯ ಸಹಕಾರವನ್ನೂ ಪಡೆಯಲಾಗುತ್ತಿದ್ದು, ರಸ್ತೆಬದಿ ಪಾರ್ಕಿಂಗ್‌ಗೆ ಸೂಕ್ತ ಸ್ಥಳಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ.

ಜಿಬಿಎ ಮೂಲಗಳ ಪ್ರಕಾರ, ಈಗಾಗಲೇ ಕೇಂದ್ರ ನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಯೋಗಿಕವಾಗಿ ಜಾರಿಗೊಂಡಿರುವ ಪಾರ್ಕಿಂಗ್‌ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅದೇ ಮಾದರಿಯನ್ನು ಕೆಲವು ಬದಲಾವಣೆಗಳೊಂದಿಗೆ ಉಳಿದ ನಾಲ್ಕು ನಗರಪಾಲಿಕೆಗಳಿಗೂ ವಿಸ್ತರಿಸಲು ಯೋಜನೆ ರೂಪಿಸಲಾಗುತ್ತಿದೆ.

ನಗರಪಾಲಿಕೆಗಳು ಸಲ್ಲಿಸುವ ವರದಿ ಆಧರಿಸಿ ಆಯ್ದ ರಸ್ತೆಗಳನ್ನು ಅಧಿಕೃತ ಪಾರ್ಕಿಂಗ್‌ ವಲಯಗಳಾಗಿ ಘೋಷಿಸುವ ಸಾಧ್ಯತೆ ಇದೆ. ಬಳಿಕ ವಾಹನ ನಿಲುಗಡೆಗೆ ನಿಗದಿತ ಶುಲ್ಕವನ್ನು ವಿಧಿಸುವ ಮೂಲಕ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ನಗರಪಾಲಿಕೆಗಳ ಆದಾಯವನ್ನೂ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.

ಹೊಸ ಪಾರ್ಕಿಂಗ್‌ ನೀತಿ ಜಾರಿಯಾದರೆ ಅನಿಯಂತ್ರಿತ ರಸ್ತೆಬದಿ ಪಾರ್ಕಿಂಗ್‌ಗೆ ಕಡಿವಾಣ ಬೀಳುವ ನಿರೀಕ್ಷೆ ಇದ್ದು, ಪ್ರಮುಖ ರಸ್ತೆಗಳಲ್ಲಿನ ಸಂಚಾರ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ವಾಹನ ಸವಾರರಿಗೂ ವ್ಯವಸ್ಥಿತ ಪಾರ್ಕಿಂಗ್‌ ಸೌಲಭ್ಯ ದೊರೆಯುವ ಸಾಧ್ಯತೆ ಇದೆ.

RELATED ARTICLES

Latest News