ಬೆಂಗಳೂರು,ಅ.28- ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಮತ್ತೊಂದು ಲಾರಿ ಗುದ್ದಿದ ಪರಿಣಾಮ ಇಬ್ಬರು ಚಾಲಕರು ಮೃತಪಟ್ಟಿರುವ ಘಟನೆ ನೈಸ್ ರಸ್ತೆಯಲ್ಲಿ ಮಧ್ಯರಾತ್ರಿ ಸಂಭವಿಸಿದೆ.ತಮಿಳುನಾಡಿನ ನಿವಾಸಿಗಳಾದ ಚಾಲಕ ರಾಜು (60) ಮತ್ತು ಸಹ ಚಾಲಕ ಪರಂದಾಮ (60) ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಎರಡು ಶವಗಳನ್ನು ಆರ್ ಆರ್ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇಡಲಾಗಿದೆ. ತಮಿಳುನಾಡಿನಿಂದ ಅಡಿಗೆ ಉಪ್ಪನ್ನು ತುಂಬಿಕೊಂಡು ಕೊಪ್ಪಳಕ್ಕೆ ಲಾರಿಯೊಂದು ಹೋಗುತ್ತಿತ್ತು.
ರಾತ್ರಿ 12.30 ರ ಸುಮಾರಿನಲ್ಲಿ ನೈಸ್ ರಸ್ತೆಯ ಕೋನಸಂದ್ರದ ಸೇತುವೆ ಬಳಿ ಕಬ್ಬಿಣ ತುಂಬಿಕೊಂಡು ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಈ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಚಾಲಕರು ಮೃತಪಟ್ಟಿದ್ದಾರೆ.ಗುದ್ದಿದ ರಭಸಕ್ಕೆ ಒಂದು ಲಾರಿಯ ಮುಂಭಾಗ ಹಾಗೂ ಇನ್ನೊಂದು ಲಾರಿಯ ಹಿಂಭಾಗ ನಜ್ಜುಗುಜ್ಜಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಕೆಂಗೇರಿ ಸಂಚಾರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
