Homeರಾಜ್ಯಬೆಂಗಳೂರಲ್ಲಿ ಕಸ ವಿಲೇವಾರಿಗೆ ಹೊಸ ವ್ಯವಸ್ಥೆ : ಕೃಷ್ಣ ಬೈರೇಗೌಡ

ಬೆಂಗಳೂರಲ್ಲಿ ಕಸ ವಿಲೇವಾರಿಗೆ ಹೊಸ ವ್ಯವಸ್ಥೆ : ಕೃಷ್ಣ ಬೈರೇಗೌಡ

ಬೆಂಗಳೂರು, ಅ-28: ನಗರದಾದ್ಯಂತ ತ್ಯಾಜ್ಯ ವಿಲೇವಾರಿಯನ್ನು ಅತ್ಯಂತ ಪಾರದರ್ಶಕ ಮತ್ತು ಸಮರ್ಥವಾಗಿ ನಿರ್ವಹಿಸುವ ಉದ್ದೇಶದಿಂದ ಒಟ್ಟು 27 ವಿಧಾನಸಭಾ ಕ್ಷೇತ್ರಗಳನ್ನು 33 ಪ್ಯಾಕೇಜ್ಗಳನ್ನಾಗಿ ವಿಭಾಗಿಸಿ ನೂತನ ಟೆಂಡರ್ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಜಿಬಿಎ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ನಗರದ ತ್ಯಾಜ್ಯ ನಿರ್ವಹಣೆ ಮತ್ತು ನೈರ್ಮಲ್ಯ ವ್ಯವಸ್ಥೆಯನ್ನು ಅತ್ಯಂತ ವೈಜ್ಞಾನಿಕ ಹಾಗೂ ಸುಸಜ್ಜಿತ ರೀತಿಯಲ್ಲಿ ಸುಧಾರಿಸಲು ಬಿಬಿಎಂಪಿ ಮತ್ತು ಸರ್ಕಾರವು ಪ್ರಮುಖ ಹಾಗೂ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಹೊಸ ಯೋಜನೆಯಡಿ ಈಗಾಗಲೇ 5 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೆ ಒಂದರಂತೆ 5 ಪ್ಯಾಕೇಜ್ಗಳಿಗೆ ಟೆಂಡರ್ ಕಾರ್ಯಾದೇಶಗಳನ್ನು ಜಾರಿಗೊಳಿಸಲಾಗಿದೆ ಎಂದರು.

ಈ ನೂತನ ಟೆಂಡರ್ ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ಪ್ಯಾಕೇಜ್ನ ಕಾರ್ಯನಿರ್ವಹಣೆಗೆ ಗುತ್ತಿಗೆದಾರರು ಸುಮಾರು 10 ಕೋಟಿ ರೂಪಾಯಿಗಳ ಬಂಡವಾಳವನ್ನು ತೊಡಗಿಸಬೇಕಾಗುತ್ತದೆ. ಸಂಪೂರ್ಣ ವ್ಯವಸ್ಥೆಯನ್ನು ಸಂಘಟಿಸಿ ಕೆಲಸ ಆರಂಭಿಸಲು ಗುತ್ತಿಗೆದಾರರು 1.5 ರಿಂದ 2 ತಿಂಗಳ ಕಾಲಾವಕಾಶವನ್ನು ಕೋರಿದ್ದು, ಅದಕ್ಕೆ ಸಮ್ಮತಿಸಲಾಗಿದೆ ಎಂದು ಹೇಳಿದರು.

33 ಪ್ಯಾಕೇಜ್ ಗಳ ಪೈಕಿ 5 ಪ್ಯಾಕೇಜ್ ಗಳಿಗೆ ಈಗಾಗಲೇ ಅನುಮತಿ ನೀಡಲಾಗಿದ್ದು, ನವೆಂಬರ್ ತಿಂಗಳಲ್ಲಿ ಕಾರ್ಯಾರಂಭವಾಗಲಿದೆ. 3 ಪ್ಯಾಕೇಜ್ ಗಳಿಗೆ ಒಪ್ಪಿಗೆ ಪತ್ರ ನೀಡಲಾಗಿದ್ದು, 10 ಪ್ಯಾಕೇಜ್ ಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಸರ್ಕಾರದ ಆಡಳಿತಾತ್ಮಕ ಅನುಮೋದನೆಗೆ ಸಲ್ಲಿಕೆಯಾಗಿವೆ. ಸರ್ಕಾರದಿಂದ ಅನುಮೋದನೆ ಸಿಕ್ಕ ತಕ್ಷಣವೇ ಮುಂದಿನ 10 ರಿಂದ 15 ದಿನಗಳ ಒಳಗಾಗಿ ಆ ಗುತ್ತಿಗೆದಾರರಿಗೂ ಕಾರ್ಯಾದೇಶವನ್ನು ನೀಡಲಾಗುವುದು. ಇನ್ನು 10 ಪ್ಯಾಕೇಜ್ ಗಳು ಬಿಡ್ಡಿಂಗ್ ಹಂತದಲ್ಲಿದ್ದು, ಅಕ್ಟೋಬರ್ 30ರಂದು 1 ಪ್ಯಾಕೇಜ್ ಹಾಗೂ ನವೆಂಬರ್ 1 ರಂದು 1 ಪ್ಯಾಕೆಜ್ ಬಿಡ್ಡಿಂಗ್ ಮಾಡಲಾಗುತ್ತಿದೆ. ನ್ಯಾಯಾಲಯದ ಹಂತದಲ್ಲಿರುವ ಇನ್ನುಳಿದ 3 ಪ್ಯಾಕೇಜ್ಗಳಿಗೆ ಕೋರ್ಟ್ನಿಂದ ಗ್ರೀನ್ ಸಿಗ್ನಲ್ ದೊರೆತ ತಕ್ಷಣವೇ ಅವುಗಳಿಗೂ ಟೆಂಡರ್ ಕರೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ನಗರದಲ್ಲಿ ನೈರ್ಮಲ್ಯ ಕಾಪಾಡಲು ಮತ್ತು ಮೂಲಸೌಕರ್ಯಗಳನ್ನು ಆಧುನೀಕರಿಸಲು ಹೊಸ ವಾಹನಗಳ ಸೇರ್ಪಡೆ ಅತ್ಯಗತ್ಯವಾಗಿದೆ. ಪ್ರಸ್ತುತ ಬಳಕೆಯಲ್ಲಿರುವ ವಾಹನಗಳು 15 ವರ್ಷಗಳಿಗಿಂತಲೂ ಹಳೆಯದಾಗಿದ್ದು, ಪದೇ ಪದೇ ದುರಸ್ತಿಗೆ ಬಂದು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಇದನ್ನು ಮನಗಂಡು ಸಂಪೂರ್ಣವಾಗಿ ಹೊಸ ಹಾಗೂ ಸುಸಜ್ಜಿತ ವಾಹನಗಳನ್ನು ರಸ್ತೆಗಿಳಿಸಲು ನಿರ್ಧರಿಸಲಾಗಿದೆ. ಇಷ್ಟು ಮಾತ್ರವಲ್ಲದೆ, ಈ ವಾಹನಗಳು ನಿಗದಿತ ಮಾರ್ಗಗಳಲ್ಲಿ ಸರಿಯಾಗಿ ಸಂಚರಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ವಾಹನಕ್ಕೂ ಜಿಪಿಎಸ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ವಾಹನಗಳು ನಿಯಮಿತವಾಗಿ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುವುದರಿಂದ ನಾಗರಿಕರು ರಸ್ತೆಬದಿಯಲ್ಲಿ ತ್ಯಾಜ್ಯ ಬಿಸಾಡುವುದು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಲಿದೆ ಎಂದು ತಿಳಿಸಿದರು.

ಇದಲ್ಲದೆ, ಪ್ರಸ್ತುತ ಚಾಲ್ತಿಯಲ್ಲಿರುವ 500 ಕೆಜಿ ಸಾಮರ್ಥ್ಯದ ಸಣ್ಣ ಆಟೋ ಟಿಪ್ಪರ್ ಗಳ ಸಂಖ್ಯೆಯನ್ನು ಹಂತ ಹಂತವಾಗಿ ಕಡಿಮೆ ಮಾಡಿ, 3 ರಿಂದ 5 ಟನ್ ಸಂಗ್ರಹಣಾ ಸಾಮರ್ಥ್ಯವಿರುವ 4 ಚಕ್ರದ ದೊಡ್ಡ ವಾಹನಗಳ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ. ಅತ್ಯಂತ ಕಿರಿದಾದ ರಸ್ತೆಗಳು ಮತ್ತು ಸಂದಿಗಳಲ್ಲಿ ಮಾತ್ರವೇ 3 ಚಕ್ರದ ವಾಹನಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ಪ್ರಸ್ತುತ ಪ್ರತಿದಿನ ಇರುವ 5,200 ಟನ್ ತ್ಯಾಜ್ಯ ಸಂಗ್ರಹಣಾ ಸಾಮರ್ಥ್ಯವನ್ನು 9,000 ಟನ್ಗೆ ಹೆಚ್ಚಿಸಲು ಸಾಧ್ಯವಾಗಲಿದೆ. ಇದರ ಜೊತೆಗೆ, ಸಿಬ್ಬಂದಿ ಮತ್ತು ವಾಹನಗಳ ಸಮರ್ಪಕ ನಿರ್ವಹಣೆಗಾಗಿ ಜಿಪಿಎಸ್ ಆಧಾರಿತ ಮುಖಚಹರೆ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದ್ದು, ಇದರಿಂದ ಕೆಲಸದಲ್ಲಿ ಪಾರದರ್ಶಕತೆ ಮತ್ತು ನಿಖರತೆ ಬರಲಿದೆ ಎಂದು ಮಾಹಿತಿ ನೀಡಿದರು.

ನಗರದ ಸ್ವಚ್ಚತೆಗೆ ಸಾರ್ವಜನಿಕರ ಸಹಕಾರ ಅಗತ್ಯ:

ನಗರವನ್ನು ಸಂಪೂರ್ಣವಾಗಿ ಸ್ವಚ್ಛವಾಗಿಡಲು ಸಾರ್ವಜನಿಕರ ಸಹಕಾರವೇ ಅತ್ಯಂತ ಮುಖ್ಯವಾಗಿದೆ. ಸಾರ್ವಜನಿಕರು ತಮ್ಮ ಮನೆಯ ತ್ಯಾಜ್ಯವನ್ನು ಬಕೆಟ್ಗಳಲ್ಲಿ ಹಾಕಿ ಮನೆಯ ಗೇಟ್, ಕಾಂಪೌಂಡ್ ಅಥವಾ ಗೋಡೆಗೆ ಮೊಳೆ ಒಡೆದು ನೇತುಹಾಕಿ ಇಟ್ಟರೆ, ಸಂಸ್ಥೆಯ ಸಿಬ್ಬಂದಿಯೇ ಬಂದು ಕಸವನ್ನು ಸಂಗ್ರಹಿಸಿ ಬಕೆಟ್ ಅನ್ನು ಯಥಾಸ್ಥಿತಿಯಲ್ಲಿ ಅಲ್ಲೇ ಇಟ್ಟು ಹೋಗುತ್ತಾರೆ. ಕಸವನ್ನು ಎಲ್ಲೆಂದರಲ್ಲಿ ಅಥವಾ ರಸ್ತೆ ಬದಿಯಲ್ಲಿ ಚೆಲ್ಲದೆ ಈ ಸರಳ ವ್ಯವಸ್ಥೆಗೆ ನಾಗರಿಕರು ಸಹಕರಿಸಿದರೆ ನಗರದಲ್ಲಿ ಸಂಪೂರ್ಣ ನೈರ್ಮಲ್ಯವನ್ನು ತರಲು ಸಾಧ್ಯವಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡರು ಮನವಿ ಮಾಡಿದರು.

ಆರೋಪಗಳಲ್ಲಿ ಸತ್ಯಾಂಶವಿಲ್ಲ:

ಪ್ರಸ್ತುತ ಈ ಹೊಸ ಟೆಂಡರ್ ಪ್ರಕ್ರಿಯೆಯ ಬಗ್ಗೆ ಕೇಳಿಬರುತ್ತಿರುವ ಆರೋಪಗಳ ಕುರಿತು ಸ್ಪಷ್ಟನೆ ನೀಡಿದ ಸಚಿವರು, “ಪ್ರಸ್ತುತ ನಗರದ ತ್ಯಾಜ್ಯ ನಿರ್ವಹಣೆಗೆ ವಾರ್ಷಿಕವಾಗಿ ₹597 ಕೋಟಿ ವೆಚ್ಚವಾಗುತ್ತಿದ್ದು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೊಸ ವಾಹನಗಳನ್ನು ಒಳಗೊಂಡ ನೂತನ ಟೆಂಡರ್ ಜಾರಿಯಿಂದ ಈ ವೆಚ್ಚ ಸುಮಾರು ₹620 ಕೋಟಿಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ನೂತನ ಟೆಂಡರ್ನಲ್ಲಿ ನಿಯಮಾವಳಿಗಳ ಪ್ರಕಾರ ಶೇ. 5 ರಿಂದ 6 ರಷ್ಟು ಎಸ್ಟಿಮೇಟ್ ಹಾಕಿಕೊಂಡಿರುವ ಅರ್ಹ ಗುತ್ತಿಗೆದಾರರಿಗೆ ಪಾರದರ್ಶಕವಾಗಿ ಟೆಂಡರ್ ಸಿಕ್ಕಿದೆ. ತಮಗೆ ಟೆಂಡರ್ ಸಿಗಲಿಲ್ಲ ಎಂಬ ಒಂದೇ ನಿರಾಶೆ ಅಥವಾ ಅಸಮಾಧಾನದಿಂದ ಕೆಲವರು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಯಾವುದೇ ಆರೋಪಗಳಲ್ಲಿ ಸತ್ಯಾಂಶವಿಲ್ಲ. ನಗರದಾದ್ಯಂತ ತ್ಯಾಜ್ಯ ನಿರ್ವಹಣೆಯನ್ನು ಅತ್ಯಂತ ಸಮರ್ಪಕವಾಗಿ, ವೈಜ್ಞಾನಿಕವಾಗಿ ಮತ್ತು ಸುಸೂತ್ರವಾಗಿ ನಡೆಸುವುದು ಒಂದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

RELATED ARTICLES

Latest News