Homeಇದೀಗ ಬಂದ ಸುದ್ದಿಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ನಾಯಕರರಿಗೆ ಕಾಂಗ್ರೆಸ್ ಶಾಸಕರ ಬ್ಲಾಕ್‌ ಮೇಲ್‌..?!

ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ನಾಯಕರರಿಗೆ ಕಾಂಗ್ರೆಸ್ ಶಾಸಕರ ಬ್ಲಾಕ್‌ ಮೇಲ್‌..?!

ಬೆಂಗಳೂರು, ಜು.29- ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶಕ್ಕಾಗಿ ಕೆಲ ಶಾಸಕರು ರಾಜ್ಯದ ಪ್ರಮುಖ ನಾಯಕರನ್ನೇ ಬ್ಲಾಕ್‌ ಮೇಲ್‌ ಮಾಡುತ್ತಿರುವ ವದಂತಿಗಳು ಕೇಳಿ ಬರುತ್ತಿವೆ.ಒಂದೆಡೆ ಕೆಲವರು ತಮಗೆ ಅವಕಾಶ ಬೇಕು ಎಂದು ಪಟ್ಟು ಹಿಡಿದರೇ, ಇನ್ನೂ ಕೆಲವು ನಾಯಕರು ತಮಗೆ ಅವಕಾಶ ನೀಡದೇ ಇದ್ದರೂ ಪರವಾಗಿಲ್ಲ. ತಮ ಜೊತೆ ಪೈಪೋಟಿ ರಾಜಕಾರಣ ನಡೆಸುತ್ತಿರುವವರಿಗೆ ಮಣೆ ಹಾಕಬಾರದು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.

ಹೀಗಾಗಿಯೇ ಸಂಪುಟ ವಿಸ್ತರಣೆ ನಿಗದಿತ ಅವಧಿಗಿಂತಲೂ ಮತ್ತಷ್ಟು ವಿಳಂಬವಾಗಿದೆ.ವಿಧಾನ ಪರಿಷತ್ತಿನ ಪೈಕಿ ಸಲೀಂ ಅಹಮದ್‌ ಅವರನ್ನು ಸಭಾಪತಿಯನ್ನಾಗಿ, ಮಾಜಿ ಸಚಿವ ದಿನೇಶ್‌ ಗುಂಡೂರಾವ್‌ ಅವರನ್ನು ಸಭಾಧ್ಯಕ್ಷರನ್ನಾಗಿ ನೇಮಿಸುವ ಚರ್ಚೆಗಳಾಗಿವೆ.ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆಗಳನ್ನು ಸೃಷ್ಟಿಸಲು ಹಾಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳು ಸೃಷ್ಟಿಯಾದರೆ ತಾವು ರಾಜೀನಾಮೆ ನೀಡುವುದಾಗಿ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಮತ್ತು ವಲಸಿಗ ನಾಯಕರಿಗೆ ಈ ಬಾರಿ ಕಡಿವಾಣ ಹಾಕುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಡಿ.ಕೆ.ಶಿವಕುಮಾರ್‌ ಅವರು ತಮ ಬೆಂಬಲಿಗರ ಪಟ್ಟಿಯನ್ನು ಹೆಚ್ಚು ನೀಡದೇ, ಕೇವಲ 4 ಮಂದಿಯ ಹೆಸರನ್ನು ಮಾತ್ರ ಹೈಕಮಾಂಡ್‌ ಮುಂದಿಟ್ಟು, ಉಳಿದಂತೆ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌ ಮತ್ತು ಹೈಕಮಾಂಡ್‌ ನಾಯಕರು ಸೂಚಿಸಿದವರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರಾಹುಲ್‌ ಗಾಂಧಿ ಅವರಿಗೆ ರಾಜಕೀಯ ವಿಶ್ಲೇಷಕರೊಬ್ಬರು ನೀಡಿರುವ ಮಾನದಂಡಗಳು ಡಿ.ಕೆ.ಶಿವಕುಮಾರ್‌ ಅವರ ಆಲೋಚನೆಗಳಿಗೆ ಹತ್ತಿರವಾಗಿದೆ ಎಂದು ತಿಳಿದು ಬಂದಿದೆ.ಒಂದೆಡೆ ಕಾಂಗ್ರೆಸ್‌‍ ಹೈಕಮಾಂಡ್‌ ನಾಯಕರು ಪಟ್ಟಿ ಸಿದ್ಧಪಡಿಸಲು ಸರಣಿ ಸಭೆಗಳನ್ನು ನಡೆಸುತ್ತಿದ್ದರೆ, ಹೊರಗಡೆ ಕೆಲವು ನಾಯಕರು ತಮದೇ ಆದ ಕಾರ್ಯ ತಂತ್ರಗಳನ್ನು ರೂಪಿಸುತ್ತಿದ್ದಾರೆ.

ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ತಮಗೆ ನೀಡಿರುವ ಖಾತೆಯನ್ನು ಬದಲಾವಣೆ ಮಾಡಿಕೊಡಬೇಕೇಂದು ಪಟ್ಟು ಹಿಡಿದಿದ್ದರು. ಅದಕ್ಕೆ ಪ್ರತಿಯಾಗಿ ಹೈಕಮಾಂಡ್‌ ಮುನಿಯಪ್ಪ ಅವರ ಬದಲಾಗಿ, ಅವರ ಪುತ್ರಿ ಶಶಿಕಲಾ ಅವರಿಗೆ ಸಚಿವ ಸ್ಥಾನ ನೀಡುವ ಚಿಂತನೆ ನಡೆಸಿದೆ. ಇದಕ್ಕೆ ಮುನಿಯಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ತಮನ್ನು ಬದಲಾವಣೆ ಮಾಡಿದ್ದೇ ಆದರೆ, ಕೋಲಾರ ಜಿಲ್ಲೆಯಲ್ಲಿ ಬೇರೆ ಯಾರಿಗೂ ಸಂಪುಟ ಸೇರಲು ಅವಕಾಶ ನೀಡಬಾರದು ಎಂದು ಷರತ್ತು ವಿಧಿಸಿರುವುದಾಗಿ ಹೇಳಲಾಗುತ್ತಿದೆ. ಈ ಮೂಲಕ ಮುನಿಯಪ್ಪ ತಮ ಕುಟುಂಬದಲ್ಲೇ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದು, ಎದುರಾಳಿಗಳನ್ನು ಏಕಕಾಲಕ್ಕೆ ಮಕಾಡೆಕೆಡವಲು ಮುಂದಾಗಿದ್ದಾರೆ. ಒಂದು ವೇಳೆ ಹೈಕಮಾಂಡ್‌ ಮುನಿಯಪ್ಪ ಅವರ ಮಾತಿಗೆ ಮಣೆ ಹಾಕಿದರೆ, ಕೋಲಾರ ಜಿಲ್ಲೆಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲವಾಗಲಿದೆ.

ಬೆಳಗಾವಿ ಜಿಲ್ಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ಖಚಿತವಾಗಿದೆ. ಲಕ್ಷ್ಮಣಸವದಿ, ಪಿ.ಎಂ.ಅಶೋಕ್‌, ಗಣೇಶ್‌ ಉಕ್ಕೇರಿ, ಮಹಂತೇಶ್‌ ಕೌಜಲಗಿ ಅವರ ಪೈಕಿ ಮತ್ತೊಬ್ಬರಿಗೆ ಅವಕಾಶ ನೀಡಬೇಕಿದೆ. ಅವಕಾಶ ವಂಚಿತರ ಬೆಂಬಲಿಗರು ಬೀದಿಗಿಳಿಯುವುದು ಶತಸಿದ್ಧ ಎಂಬಂತಹ ವಾತಾವರಣ ಇದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಆರ್‌.ಬಿ.ತಿಮಾಪೂರ್‌, ಜೆ.ಟಿ.ಪಾಟೀಲ್‌, ವಿಜಯಾನಂದ ಕಾಶಪ್ಪನವರ್‌ ಅವರ ನಡುವೆ ಪ್ರಬಲ ಪೈಪೋಟಿ ಇದೆ. ವಿಜಯಾನಂದ ಕಾಶಪ್ಪನವರ್‌ರವರಿಗೆ ಅವಕಾಶ ಸಿಗದೇ ಇದ್ದರೇ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಪ್ರಬಲಗೊಳಿಸಿ, ಕಾಂಗ್ರೆಸ್‌‍ಗೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಿಸುವುದಾಗಿ ಎಚ್ಚರಿಸಿದ್ದಾರೆ.

ವಿಜಯಪುರ ಜಿಲ್ಲೆಯಿಂದ ಶಿವಾನಂದ ಪಾಟೀಲ್‌ ಮರಳಿ ಯತ್ನ ಮಾಡುತ್ತಿದ್ದಾರೆ. ಕಲಬುರಗಿ ಜಿಲ್ಲೆಯಿಂದ ಈಗಾಗಲೇ ಇಬ್ಬರೂ ಶಾಸಕರಿದ್ದಾರೆ. ಕನೀಜಾ ಫಾತಿಮಾ ಹೆಸರು ಮಹಿಳಾ ಕೋಟಾದಲ್ಲಿ ಕೇಳಿ ಬರುತ್ತಿದೆ. ಅವಕಾಶ ಸಿಗದೇ ಇದ್ದರೇ ಅಜಯ್‌ ಸಿಂಗ್‌ ಮತ್ತು ಬಿ.ಆರ್‌.ಪಾಟೀಲ್‌ ಪಕ್ಷ ತೊರೆಯುವ ಬೆದರಿಗೆ ಹಾಕಿದ್ದಾರೆ ಎನ್ನಲಾಗಿದೆ.

ಬೀದರ್‌ ಜಿಲ್ಲೆಯ ರಹೀಂಖಾನ್‌, ರಾಯಚೂರಿನ ಜಿ.ಹಂಪಯ್ಯನಾಯಕ್‌, ಬಸನಗೌಡ ದದ್ದಲ್‌, ಹಂಪನಗೌಡ ಬಾದರ್ಲಿ, ಬಸನಗೌಡ ತುರವಿನಹಾಳ್‌ ಪೈಪೋಟಿಯಲ್ಲಿದ್ದಾರೆ.
ಕೊಪ್ಪಳ ಜಿಲ್ಲೆ ಕಾಂಗ್ರೆಸ್‌‍ಗೆ ದೊಡ್ಡ ತಲೆ ನೋವಾಗಿದೆ. ಬಸವರಾಜರಾಯರೆಡ್ಡಿ, ರಾಘವೇಂದ್ರ ಹಿಟ್ನಾಳ್‌, ಶಿವರಾಜ್‌ ತಂಗಡಗಿ ಮೂವರು ಸಿದ್ದರಾಮಯ್ಯ ಅವರ ಪರಮಾಪ್ತರಾಗಿದ್ದಾರೆ. ಇವರ ಪೈಕಿ ಒಬ್ಬರಿಗೆ ಅವಕಾಶ ನೀಡಬೇಕಾದರೆ, ಮೂವರಲ್ಲಿ ಒಂದು ಆಯ್ಕೆ ಕಷ್ಟಸಾಧ್ಯ ಎಂದು ಸಿದ್ದರಾಮಯ್ಯ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಗದಗದಿಂದ ಎಚ್‌.ಕೆ.ಪಾಟೀಲ್‌ ಮತ್ತೆ ಸಂಪುಟ ಸೇರುವ ಸಾಧ್ಯತೆ ಇದೆ. ಜಿ.ಎಸ್‌‍. ಪಾಟೀಲ್‌ ಅವರ ಪ್ರಯತ್ನ ನೀರಿನಲ್ಲಿ ಹೋಮ ಮಾಡುವಂತಾಗಿದೆ. ಧಾರವಾಡದಿಂದ ಸಂತೋಷ್‌ಲಾಡ್‌, ಪ್ರಸಾದ್‌ ಅಬ್ಬಯ್ಯ ಅವರ ನಡುವೆ ಎನ್‌.ಎಚ್‌.ಕೋನರೆಡ್ಡಿ ಆಕಾಂಕ್ಷಿಯಾಗಿದ್ದಾರೆ.

ಉತ್ತರ ಕನ್ನಡದಿಂದ ಆರ್‌.ವಿ.ದೇಶಪಾಂಡೆ, ಹಾವೇರಿಯಿಂದ ರುದ್ರಪ್ಪ ಲಮಾಣಿ ಅಥವಾ ಶ್ರೀನಿವಾಸ್‌‍ ಮಾನೆ, ಚಿತ್ರದುರ್ಗದಿಂದ ಟಿ.ರಘುಮೂರ್ತಿ, ದಾವಣಗೆರೆಯಿಂದ ಡಿ.ಜಿ.ಶಾಂತನಗೌಡ, ಶಿವಮೊಗ್ಗದಿಂದ ಮಧುಬಂಗಾರಪ್ಪ ಅಥವಾ ಬೇಳೂರು ಗೋಪಾಲಕೃಷ್ಣ, ಚಿಕ್ಕಮಗಳೂರಿನಿಂದ ಟಿ.ಡಿ.ರಾಜೇಗೌಡ ಅಥವಾ ಕೆ.ಎಸ್‌‍.ಆನಂದ್‌, ತುಮಕೂರು ಜಿಲ್ಲೆಯಿಂದ ಕೆ.ಷಡಕ್ಷರಿ ಅಥವಾ ಟಿ.ಬಿ.ಜಯಚಂದ್ರ, ಚಿಕ್ಕಬಳ್ಳಾಪುರದಿಂದ ಎಸ್‌‍.ಎನ್‌.ಸುಬ್ಬಾರೆಡ್ಡಿ ಸಚಿವರಾಗುವ ಸಾಧ್ಯತೆ ಇದೆ.

ವಿಜಯನಗರ-ಬಳ್ಳಾರಿ ಅವಿಭಜಿತ ಜಿಲ್ಲೆಯಿಂದ ಬಿ.ನಾಗೇಂದ್ರ ತಮಗೆ ಸಚಿವ ಸ್ಥಾನ ನೀಡಬೇಕು. ವಾಲೀಕಿ ಹಗರಣದಲ್ಲಿ ಜೈಲು ಪಾಲಾದರೂ ನಾನು ಯಾರ ಹೆಸರನ್ನು ಹೇಳಲಿಲ್ಲ ಎಂದು ಸೂಕ್ಷ್ಮವಾಗಿ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು ಗ್ರಾಮಾಂತರದಿಂದ ಶರತ್‌ ಬಚ್ಚೇಗೌಡ, ಬೆಂಗಳೂರು ದಕ್ಷಿಣದಿಂದ ಎಚ್‌.ಸಿ.ಬಾಲಕೃಷ್ಣ, ಮೈಸೂರಿನಿಂದ ತನ್ವೀರ್‌ ಸೇಠ್‌, ಚಾಮರಾಜನಗರದಿಂದ ಎ.ಆರ್‌.ಕೃಷ್ಣಮೂರ್ತಿ ಸಂಭವನೀಯ ಸಚಿವರ ಪಟ್ಟಿಯಲಿದ್ದಾರೆ. ಬೆಂಗಳೂರಿನಲ್ಲಿ ಎನ್‌.ಎ.ಹ್ಯಾರಿಸ್‌‍, ರಿಜ್ವಾನ್‌ ಅರ್ಷದ್‌ ನಡುವೆ ಪೈಪೋಟಿ ಇದೆ.

RELATED ARTICLES

Latest News