ಬೆಂಗಳೂರು,ಸೆ.12- ಸಾಮಾಜಿಕ ಜಾಲ ತಾಣಗಳಲ್ಲಿ ಇದೀಗ ಟ್ರೆಂಡಿಂಗ್ ಆಗುತ್ತಿರುವ 1980 ರ ಫೋಟೋ ಬಗ್ಗೆ ಜಾಗೃತಿ ವಹಿಸುವಂತೆ ನಗರ ಪೊಲೀಸರು ಎಚ್ಚರಿಸಿದ್ದಾರೆ.ಟ್ರೆಂಡಿಂಗ್ ಫೋಟೋ ಎಡಿಟಿಂಗ್ ವೇಳೆ ಸೈಬರ್ ವಂಚಕರು ನಿಮನ್ನು ವಂಚಿಸುವ ಸಾಧ್ಯತೆ ಇರುತ್ತದೆ. ನೀವು ಮೋಸ ಹೋಗಬಹುದು, ಸೈಬರ್ ವಂಚಕರ ಹಾವಳಿ ಹೆಚ್ಚಾಗಬಹುದು ಹಾಗಾಗಿ 80 ರ ದಶಕದ ಫೋಟೋ ಎಡಿಟಿಂಗ್ ಕುರಿತು ನಗರ ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
80 ರ ದಶಕದ ಫೋಟೋ ಎಡಿಟಿಂಗ್ ವೇಳೆ ನಿಮ ದಾಖಲೆ ಅಥವಾ ಮಾಹಿತಿ ಕೇಳಬಹುದು, ಅಪರಿಚಿತ ಆ್ಯಪ್, ಪಾಸ್‌ವರ್ಡ್, ಲಿಂಕ್ ಒತ್ತಬೇಡಿ ಎಂದು ಸಾರ್ವಜನಿಕರಿಗೆ ಕೆಲವು ಸಲಹೆಗಳನ್ನು ನಗರ ಪೊಲೀಸರು ನೀಡಿದ್ದಾರೆ.ಅಂತಹ ಸಂದರ್ಭದಲ್ಲಿ ಅಪರಿಚಿತ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದು ಅಥವಾ ಅನುಮಾನಾಸ್ಪದ ಲಿಂಕ್‌ಗಳನ್ನು ತೆರೆಯುವುದರಿಂದ ನೀವು ವಂಚನೆಗೊಳಗಾಗುವ ಸಾಧ್ಯತೆ ಇರುತ್ತದೆ.
ನಿಮ ಎಡಿಟಿಂಗ್ ಫೋಟೋ ಅಥವಾ ಹೊಸ ಮಾದರಿಯ ಫೋಟೋ ಸೃಷ್ಟಿಸುವ ನೆಪದಲ್ಲಿ ಸೈಬರ್ ವಂಚಕರು ವೈಯಕ್ತಿಕ ಮಾಹಿತಿ ಹಾಗೂ ದಾಖಲೆಗಳ ವಿವರ ಕೇಳುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ನಿಮ ಬ್ಯಾಂಕ್ ಖಾತೆ ವಿವರ, ಪಾಸ್‌ವರ್ಡ್ ಸೇರಿದಂತೆ ಯಾವುದೇ ಸೂಕ ಮಾಹಿತಿಗಳನ್ನು ಹಂಚಿಕೊಳ್ಳದಂತೆ ಸಲಹೆ ನೀಡಿದ್ದಾರೆ.
ಯಾವುದೇ ಆನ್‌ಲೈನ್ ಸೇವೆ ಬಳಸುವ ಮುನ್ನ ಅದರ ವಿಶ್ವಾರ್ಸಾಹತೆ ಪರಿಶೀಲಿಸುವಂತೆ ಹಾಗೂ ವೈಯಕ್ತಿಕ ಮಾಹಿತಿ ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಹಾಗೂ ವಂಚನೆ ಆ್ಯಪ್‌ಗಳ ಬಗ್ಗೆ ಹಲವಾರು ಬಾರಿ ಪೊಲೀಸರು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದರೂ ಯಾವುದಾದರೂ ಒಂದು ರೀತಿ ಸೈಬರ್ ವಂಚಕರ ಗಾಳಕ್ಕೆ ಸಿಲುಕಿ ಹಲವು ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಹೊಸ ಟ್ರೇಂಡ್ ಶುರುವಾಗಿದ್ದು, ಪ್ರಮುಖವಾಗಿ ಯುವಜನತೆ ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ನಗರ ಪೊಲೀಸರು ತಿಳಿಸಿದ್ದಾರೆ.
