ನವದೆಹಲಿ, ಸೆ. 12— ಚೀನಾ ಮತ್ತು ರಷ್ಯಾದ ಪ್ರಬಲ ಬೆಂಬಲವಿದ್ದರೂ ಪಾಕಿಸ್ತಾನಕ್ಕೆ ಇನ್ನೂ ಬ್ರಿಕ್ಸ್ ರಾಷ್ಟ್ರಗಳ ಸದಸ್ಯತ್ವ ಪಡೆಯಲು ಸಾಧ್ಯವಾಗಿಲ್ಲ. ಭಾರತದ ಆತಿಥ್ಯದಲ್ಲಿ ಇಂದಿನಿಂದ 18ನೇ ಬ್ರಿಕ್ಸ್ ಶೃಂಗಸಭೆ ಆರಂಭಗೊಳ್ಳುತ್ತಿದೆ. ಈ ಹೊತ್ತಿನಲ್ಲಿ ಅಚ್ಚರಿಯ ವಿಷಯವೊಂದು ಬೆಳಕಿಗೆ ಬಂದಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದಂತಹ ಉದಯೋನ್ಮುಖ ಆರ್ಥಿಕತೆಗಳ ಒಕ್ಕೂಟವಾದ ಬ್ರಿಕ್ಸ್ ಸೇರಲು ಪಾಕಿಸ್ತಾನ ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿತ್ತು ಎಂಬುದು ತಿಳಿದುಬಂದಿದೆ.
ಬ್ರಿಕ್ಸ್ ಒಕ್ಕೂಟವು ಕಳೆದ ವರ್ಷ ‘ಬ್ರಿಕ್ಸ್ ಪ್ಲಸ್’ ಆಗಿ ವಿಸ್ತರಣೆಗೊಂಡಿತು. ಈಜಿಪ್ಟ್, ಇಥಿಯೋಪಿಯಾ, ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರಗಳನ್ನು ಹೊಸ ಸದಸ್ಯ ರಾಷ್ಟ್ರಗಳನ್ನಾಗಿ ಸೇರಿಸಿಕೊಳ್ಳಲಾಯಿತು. ಹಾಗಾಗಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಕೂಡ ಬ್ರಿಕ್ಸ್ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ, ಭಾರತದ ವಿರೋಧವು ಪಾಕಿಸ್ತಾನವನ್ನು ಒಕ್ಕೂಟದಿಂದ ಹೊರಗಿಡುವಂತೆ ಮಾಡಿದೆ.
ಬ್ರಿಕ್ಸ್ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ಇತರ 29 ದೇಶಗಳ ಪೈಕಿ ಪಾಕಿಸ್ತಾನವೂ ಒಂದಾಗಿದೆ. ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಸವಾಲುಗಳೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸಮೀಕ್ಷೆಗಳ ಪ್ರಕಾರ, ಪಾಕಿಸ್ತಾನದ ಜಿಡಿಪಿ ಬೆಳವಣಿಗೆ ದರವು ಶೇ. 3.70ರಷ್ಟಿತ್ತು. ಹಾಗಾಗಿ ಹಣಕಾಸಿನ ಆಯ್ಕೆಗಳನ್ನು ವೈವಿಧ್ಯಮಯಗೊಳಿಸಲು ಹಾಗೂ ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪಾಕ್ ಬ್ರಿಕ್ಸ್ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿತ್ತು ಎನ್ನಲಾಗಿದೆ.
ಅಷ್ಟೇ ಅಲ್ಲದೆ, ಬ್ರಿಕ್ಸ್ ಬೆಂಬಲಿತ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ನಲ್ಲಿ 580 ದಶಲಕ್ಷ ಡಾಲರ್ (ಅಂದಾಜು 5,544 ಕೋಟಿ ರೂಪಾಯಿ) ಮೌಲ್ಯದ ಷೇರುಗಳನ್ನೂ ಖರೀದಿಸಿದೆ ಎಂದು ವರದಿಗಳು ತಿಳಿಸಿವೆ.
ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಗೆ ಭಾರತದ ರಫ್ತು ಶೇ. 48.8ರಷ್ಟು ಹೆಚ್ಚಳ
ಗ್ಲೋಬಲ್ ಸೌತ್ (ಜಾಗತಿಕ ದಕ್ಷಿಣದ ರಾಷ್ಟ್ರಗಳು) ಅನ್ನು ಪ್ರತಿನಿಧಿಸುವ ಪ್ರಮುಖ ಗುಂಪಾಗಿ ಬ್ರಿಕ್ಸ್ ಒಕ್ಕೂಟವು ಪಡೆಯುತ್ತಿರುವ ಮನ್ನಣೆ ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ಪಾಕಿಸ್ತಾನದಿಂದ ಸದಸ್ಯತ್ವಕ್ಕೆ ಅರ್ಜಿಯೂ ಸಲ್ಲಿಕೆಯಾಗಿದೆ. ಸದ್ಯ ಈ ಒಕ್ಕೂಟವು ವಿಶ್ವದ ಜನಸಂಖ್ಯೆಯ ಸುಮಾರು ಶೇ. 49ರಷ್ಟು ಹಾಗೂ ಖರೀದಿ ಸಾಮರ್ಥ್ಯದ ಸಮಾನತೆಯ ಆಧಾರದ ಮೇಲೆ ಜಾಗತಿಕ ಜಿಡಿಪಿಯ ಸುಮಾರು ಶೇ. 40ರಷ್ಟನ್ನು ಪ್ರತಿನಿಧಿಸುತ್ತದೆ.
ಬ್ರಿಕ್ಸ್ ಒಕ್ಕೂಟದ ಪ್ರವೇಶಕ್ಕೆ ಚೀನಾ ಮತ್ತು ರಷ್ಯಾದ ಬೆಂಬಲವಿದೆ ಎಂದು ಹೇಳಲಾಗುತ್ತಿದ್ದರೂ, ಪಾಕಿಸ್ತಾನಕ್ಕೆ ಸದಸ್ಯತ್ವ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಇದಕ್ಕೆ ಭಾರತದ ವಿರೋಧವೇ ಕಾರಣ ಎನ್ನಲಾಗಿದೆ. ಬ್ರಿಕ್ಸ್ ಒಕ್ಕೂಟಕ್ಕೆ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲು ಅಸ್ತಿತ್ವದಲ್ಲಿರುವ ಎಲ್ಲ ಸದಸ್ಯ ರಾಷ್ಟ್ರಗಳ ಒಮ್ಮತದ ಅನುಮೋದನೆ ಅತ್ಯಗತ್ಯವಾಗಿದೆ.
