Homeಬೆಂಗಳೂರುಬೆಂಗಳೂರಿನ ಗುಂಡಿ ಮುಚ್ಚಲು ಬಂದಿವೆ ವಿದೇಶಿ ಯಂತ್ರಗಳು

ಬೆಂಗಳೂರಿನ ಗುಂಡಿ ಮುಚ್ಚಲು ಬಂದಿವೆ ವಿದೇಶಿ ಯಂತ್ರಗಳು

ಬೆಂಗಳೂರು, ಸೆ.12- ಸಿಲಿಕಾನ್‌ ಸಿಟಿಯಲ್ಲಿ ಬಾಯ್ತೆರೆದು ನಿಂತಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ನಗರಪಾಲಿಕೆಗಳು ಇದೀಗ ಹೊಸ ತಂತ್ರಜ್ಞಾನದ ಮೊರೆ ಹೋಗಿವೆ.

ಕೋಲ್ಡ್ ಮಿಕ್ಸ್ , ಫಿಕ್ಸ್ ಮೈ ಸ್ಟ್ರೀಟ್‌‍ ಸೇರಿದಂತೆ ಹಲವು ಪ್ರಯೋಗಗಳನ್ನು ನಡೆಸಿದರೂ ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ರಸ್ತೆಗುಂಡಿಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆಯಲು ಗುಂಡಿ ಗಮನ ಆ್ಯಪ್‌ ಕೂಡ ಜಾರಿಗೊಳಿಸಲಾಗಿತ್ತು. ಆದರೂ ನಗರದ ಹಲವು ರಸ್ತೆಗಳಲ್ಲಿನ ಗುಂಡಿಗಳು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಲೇ ಇದ್ದವು.

ಇದೀಗ ರಸ್ತೆಗುಂಡಿಗಳ ಬಾಯಿ ಮುಚ್ಚಲು ವಿದೇಶಿ ತಂತ್ರಜ್ಞಾನ ಬಳಸಲು ನಗರಪಾಲಿಕೆಗಳು ಮುಂದಾಗಿವೆ. ಸುಮಾರು 2.5 ಕೋಟಿ ವೆಚ್ಚದಲ್ಲಿ ಎರಡು ಜೆಟ್‌ ಪ್ಯಾಚರ್‌ ಯಂತ್ರಗಳನ್ನು ಖರೀದಿಸಿ, ರಸ್ತೆಗುಂಡಿ ಮುಚ್ಚುವ ಕಾರ್ಯಕ್ಕೆ ವೇಗ ನೀಡಲು ಸಿದ್ಧತೆ ನಡೆಸಲಾಗಿದೆ.

ಐದು ನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವ ಪ್ರದೇಶಗಳಲ್ಲಿ ಹೆಚ್ಚು ರಸ್ತೆಗುಂಡಿಗಳಿವೆ ಎಂಬ ಕುರಿತು ಮಾಹಿತಿ ಹಾಗೂ ದತ್ತಾಂಶ ಸಂಗ್ರಹಿಸಲಾಗುತ್ತಿದೆ. ಹೆಚ್ಚಿನ ರಸ್ತೆಗುಂಡಿಗಳಿರುವ ಪ್ರದೇಶಗಳಿಗೆ ಆದ್ಯತೆ ನೀಡಿ, ಹೊಸ ಯಂತ್ರಗಳ ಮೂಲಕ ಗುಂಡಿ ಮುಚ್ಚುವ ಕಾರ್ಯವನ್ನು ತ್ವರಿತಗೊಳಿಸಲು ಪಾಲಿಕೆಗಳು ಯೋಜನೆ ರೂಪಿಸಿವೆ.

ಸಾಮಾನ್ಯವಾಗಿ ರಸ್ತೆಗುಂಡಿ ಮುಚ್ಚುವ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇರುತ್ತದೆ. ಆದರೆ ಜೆಟ್‌ ಪ್ಯಾಚರ್‌ ಯಂತ್ರದ ಮೂಲಕ ಕಡಿಮೆ ಸಮಯದಲ್ಲಿ ಹಾಗೂ ಟ್ರಾಫಿಕ್‌ ಸಮಸ್ಯೆಯನ್ನು ಸಾಧ್ಯವಾದಷ್ಟು ತಪ್ಪಿಸಿ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ನಗರದ ರಸ್ತೆಗುಂಡಿ ಸಮಸ್ಯೆಗೆ ಸಂಬಂಧಿಸಿದಂತೆ ಈ ಹಿಂದೆ ಕೂಡ ಹಲವು ತಂತ್ರಜ್ಞಾನಗಳ ಬಗ್ಗೆ ಘೋಷಣೆ ಮಾಡಲಾಗಿತ್ತು. ವಾಹನಗಳ ಮೇಲೆ ಎಐ ಕ್ಯಾಮರಾಗಳನ್ನು ಅಳವಡಿಸಿ ರಸ್ತೆಗಳ ಸ್ಥಿತಿಗತಿ ಪರಿಶೀಲಿಸಲಾಗುವುದು, ರಸ್ತೆಗುಂಡಿಗಳನ್ನು ಗುರುತಿಸಿ ತ್ವರಿತವಾಗಿ ದುರಸ್ತಿ ಮಾಡಲಾಗುವುದು ಎಂದು ಹೇಳಲಾಗಿತ್ತು.

ಅದೇ ರೀತಿ ಗುಂಡಿ ಗಮನ ಆ್ಯಪ್‌ ಮೂಲಕ ಸಾರ್ವಜನಿಕರು ರಸ್ತೆಗುಂಡಿಗಳ ಬಗ್ಗೆ ದೂರು ದಾಖಲಿಸುವ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿತ್ತು. ಆದರೆ ಈ ಎಲ್ಲ ಪ್ರಯತ್ನಗಳ ನಡುವೆಯೂ ನಗರದ ಅನೇಕ ರಸ್ತೆಗಳಲ್ಲಿನ ಗುಂಡಿಗಳು ಹಾಗೆಯೇ ಉಳಿದಿವೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಸಚಿವರಿಂದ ಚಾಲನೆ :ನಗರದ ರಸ್ತೆಗುಂಡಿ ಮುಚ್ಚುವ ನೂತನ ತಂತ್ರಜ್ಞಾನಕ್ಕೆ ನಿನ್ನೆ ಎಂಎಸ್‌‍ ಬಿಲ್ಡಿಂಗ್‌ ಸಮೀಪ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಉಸ್ತುವಾರಿ ಸಚಿವರು, ಹೊಸ ತಂತ್ರಜ್ಞಾನದ ಮೂಲಕ ಟ್ರಾಫಿಕ್‌ ಸಮಸ್ಯೆಗೆ ಹೆಚ್ಚಿನ ತೊಂದರೆಯಾಗದಂತೆ ಹಾಗೂ ಸಾಧ್ಯವಾದಷ್ಟು ವೇಗವಾಗಿ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

RELATED ARTICLES
spot_img

Latest News