ಬೆಂಗಳೂರು,ಸೆ.12- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗೌರಿ-ಗಣೇಶ ಹಬ್ಬದ ಆಚರಣೆಗೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಇದರ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿದೆ.
ಬೆಲೆ ಏರಿಕೆಯ ನಡುವೆಯೇ ಗ್ರಾಹಕರು ಹಬ್ಬಕ್ಕೆ ಬೇಕಾದ ವಸ್ತುಗಳ್ನು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ಹಬ್ಬದ ಸಂದರ್ಭಗಳಲ್ಲಿ ಬೆಲೆ ಏರಿಕೆ ಸರ್ವೇಸಾಮಾನ್ಯ. ಆದರೆ ಕಳೆದ ಕೆಲವು ತಿಂಗಳುಗಳಿಂದ ದಿನಸಿ ಸಾಮಗ್ರಿಗಳು ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ
ಏರುತ್ತಲೇ ಇದೆ. ಆದರೂ ಸಹ ಜನರು ಉತ್ಸಾಹ ಕುಂದದೆ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಯಶವಂತಪುರ, ಕೆ.ಆರ್.ಮಾರುಕಟ್ಟೆ, ವಿಜಯನಗರ, ಮಲ್ಲೇಶ್ವರಂ, ಗಾಂಧಿ ಬಜಾರ್, ಬಸವನಗುಡಿ, ಜಯನಗರ ಮತ್ತಿತರ ಮಾರುಕಟ್ಟೆಗಳು ಜನರಿಂದ ಗಿಜಗುಡುತ್ತಿವೆ.
ವರಲಕ್ಷ್ಮಿ ಹಬ್ಬಕ್ಕಿದ್ದ ಹೂ ಬೆಲೆ ಗಣೇಶ ಹಬ್ಬಕ್ಕಿಲ್ಲ :
ವರಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಹೂಗಳ ಬೆಲೆ ಗಗನಕ್ಕೇರಿತ್ತು. ಆದರೆ ಗೌರಿ-ಗಣೇಶ ಹಬ್ಬಕ್ಕೆ ಅಷ್ಟೇನೂ ಹೆಚ್ಚಿಗೆಯಾಗಿಲ್ಲ. ಚಿಲ್ಲರೆ ವ್ಯಾಪಾರಿಗಳು ಮಾತ್ರ ತುಸು ಏರಿಕೆ ಮಾಡಿದ್ದು, ಮಾರುಕಟ್ಟೆಗಳಲ್ಲಿ ಹೂವಿನ ಬೆಲೆ ಸಾಮಾನ್ಯವಾಗಿದೆ.ಕನಕಾಂಬರ ಕೆಜಿಗೆ 1,500 ರೂ., ಮಲ್ಲಿಗೆ 500 ರೂ., ಗುಲಾಬಿ 200 ರೂ., ಸೇವಂತಿಗೆ 200 ರೂ., ಸುಗಂಧರಾಜ 200 ರೂ., ಡೇರೆ ಹೂ 200 ರೂ.ಗೆ ಮಾರಾಟವಾಗುತ್ತಿದೆ.ಬಾಳೆಕಂದು, ಮಾವಿನ ಸೊಪ್ಪು ಅಪಾರ ಪ್ರಮಾಣದಲ್ಲಿ ನಗರಕ್ಕೆ ಬಂದಿದ್ದು, ಗಾತ್ರಕ್ಕೆ ಅನುಗುಣವಾಗಿ ಮಾರಾಟ ಮಾಡಲಾಗುತ್ತಿದೆ.
ತುಸು ಏರಿಕೆಯಾದ ಹಣ್ಣುಗಳ ಬೆಲೆ :
ಏಲಕ್ಕಿ ಬಾಳೆ ಹೊರತುಪಡಿಸಿದರೆ ಎಲ್ಲಾ ಹಣ್ಣುಗಳ ಬೆಲೆ ಅಷ್ಟೇನೂ ಏರಿಕೆಯಾಗಿಲ್ಲ. ಸೇಬು ಕೆಜಿಗೆ 200 ರೂ.ಗಳಿಂದ 250 ರೂ., ದಾಳಿಂಬೆ 200-250 ರೂ., ಏಲಕ್ಕಿ ಬಾಳೆ 100-120 ರೂ., ಮೂಸಂಬಿ 120 ರೂ., ಸಪೋಟ 120-150 ರೂ.ಗಳಿಗೆ ಮಾರಾಟವಾಗುತ್ತಿದೆ.
ಏರುತ್ತಲೇ ಇರುವ ದಿನಸಿ ಬೆಲೆ :
ದಿನಸಿ ಪದಾರ್ಥಗಳ ಬೆಲೆ ಕೇಳಿದರೆ ಗ್ರಾಹಕರು ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ. ಅಡುಗೆ ಎಣ್ಣೆ ಕೆಜಿಗೆ ದ್ವಿಶತಕದ ಆಜುಬಾಜಿನಲ್ಲಿದ್ದರೆ, ಬೇಳೆಕಾಳು, ಅಕ್ಕಿ, ಸಕ್ಕರೆ, ಬೆಲ್ಲ, ಮೈದಾ ಸೇರಿದಂತೆ ದಿನಸಿ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಖರ್ಚು ದುಪ್ಪಟ್ಟಾಗಿದೆ. ಆದರೂ ಸಹ ಹಬ್ಬದ ಸಂಪ್ರದಾಯವನ್ನು ಬಿಡಬಾರದೆಂದು ಜನರು ಖರೀದಿಯಲ್ಲಿ ತೊಡಗಿದ್ದಾರೆ.
