Homeಸಂಪಾದಕೀಯ-ಲೇಖನಗಳುಉದ್ಧವ ಗೀತಾ ಸಾರ : ಉದ್ಧವನಿಗೆ ಶ್ರೀಕೃಷ್ಣನ ಉಪದೇಶ - ಭಾಗ 2

ಉದ್ಧವ ಗೀತಾ ಸಾರ : ಉದ್ಧವನಿಗೆ ಶ್ರೀಕೃಷ್ಣನ ಉಪದೇಶ – ಭಾಗ 2

ಇದು ಅಕ್ಷರಶಃ ಸತ್ಯವಾದ ಮಾತು. ತನಗೆ ಯುದ್ಧದಲ್ಲಿ ಗೆಲುವು ಸಿಗಲಿ ಎಂದು ಹರಸುವಂತೆ ದುರ್ಯೋಧನನ ತಾಯಿ ಗಾಂಧಾರಿಯಲ್ಲಿ ನಮಸ್ಕರಿಸಿ ಕೇಳುತ್ತಾನೆ. ಆಗ ಗಾಂಧಾರಿಯು ನಿನ್ನಂತೆ ಪಾಂಡು ಪುತ್ರರೂ ನನಗೆ ಮಕ್ಕಳಿದ್ದಂತೆ. ಆದ್ದರಿಂದ ಯುದ್ಧ ನಡೆಯುವುದು ನನಗೆ ಬೇಕಿಲ್ಲ. ಆದರೆ ಯುದ್ಧ ಅನಿವಾರ್ಯ ಆಗಿದೆ. ಸನ್ನಿವೇಶಗಳು ಹಾಗೆಯೇ ಇದೆ. ಹಾಗಾಗಿ ಈ ಮಹಾಭಾರತ ಯುದ್ಧದಲ್ಲಿ ಧರ್ಮಕ್ಕೆ ಜಯ ಆಗುತ್ತದೆ. ಧರ್ಮವು ಯಾರ ಪರ ಇರುತ್ತದೆಯೋ ಅವರಿಗೆ ಜಯ ಶತಃಸಿದ್ದ. ಧರ್ಮ ಎಂದರೆ ಶ್ರೀಕೃಷ್ಣ, ಶ್ರೀಕೃಷ್ಣ ಎಂದರೆ ಧರ್ಮದ ಪ್ರತಿರೂಪದಂತೆ ಎಂದು ಹೇಳುತ್ತಾಳೆ.

ಈ ಮಾತನ್ನು ಶ್ರೀಕೃಷ್ಣನ ಜೀವನದ ಪ್ರತಿ ಹೆಜ್ಜೆಯಲ್ಲೂ ಪ್ರತಿಕ್ಷಣದಲ್ಲೂ ಪ್ರತಿ ಘಟನೆಯಲ್ಲೂ ಪ್ರತಿಯೊಂದು ಹಂತದಲ್ಲೂ ಕಾಣಬಹುದು. ಇಡೀ ಸಮಾಜಕ್ಕೆ, ವಿಶ್ವಕ್ಕೆ ಮಾದರಿ ಎನಿಸುವಂತೆ ಶ್ರೀ ಕೃಷ್ಣನ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ. ಅಧರ್ಮದೊಂದಿಗೆ ಎಂದಿಗೂ ರಾಜಿ ಆಗದೆ ತನ್ನ ಸಂಬಂಧಿಕರು, ಇಷ್ಟರು ಮತ್ತು ಶತ್ರುಗಳು ಯಾರೇ ಆಗಿದ್ದರೂ ಅವರು ವಧೆಗೆ ಅರ್ಹರು ಆಗಿರುತ್ತಾರೆ. ಧರ್ಮಕ್ಕೆ ನಿಷ್ಠರಾಗಿರುವವರು ಸಂಬಂಧಿಕರು, ನೆಂಟರು, ಇಷ್ಟರು, ಶತ್ರುಗಳೇ ಆಗಿದ್ದರೂ ಅವರು ಸಮಾಜ ಜೀವನದಲ್ಲಿ ಉಳಿಯಬೇಕು ಎನ್ನುವುದು ಶ್ರೀಕೃಷ್ಣನ ತಂತ್ರದ ಭಾಗವೇ ಆಗಿತ್ತು.

ಇದಕ್ಕೆ ಉದಾಹರಣೆ ಎಂಬಂತೆ ಕೃಷ್ಣ ತನ್ನ ಸ್ವಂತ ಸೋದರ ಮಾವ ಕಂಸನನ್ನೇ ಸಂಹರಿಸುತ್ತಾನೆ. ಭೀಮನಿಂದ ಜರಾಸಂಧನ ವಧೆ ಮಾಡಿಸುತ್ತಾನೆ. ನರಕಾಸುರ, ಶಿಶುಪಾಲ ಇವರನ್ನು ಸಹ ಸಂಹರಿಸುತ್ತಾನೆ. ಇವರೊಂದಿಗೆ ಇದ್ದ 23 ಅಕ್ಷೌಹಿಣಿ ಸೈನ್ಯವನ್ನು ಕೃಷ್ಣ ನಿರ್ನಾಮ ಮಾಡುತ್ತಾನೆ. ಅಲ್ಲಿಗೆ ಅಂದಿನ ದುಷ್ಟ ರಾಜಕಾರಣಕ್ಕೆ ಮತ್ತು ದುಷ್ಟ ನಡತೆಗೆ ಪ್ರಬಲವಾದ ಮತ್ತು ಎದ್ದೇಳಲಾಗದಂತಹ ಹೊಡೆತ ಬೀಳುತ್ತದೆ.

ಉಳಿದ ದುಷ್ಟ ರಾಜರು ಮತ್ತು ಸೈನಿಕರ ಪಡೆ ದುರ್ಯೋಧನನ ಬಳಿ ಧ್ರುವೀಕರಣ ಆಗುತ್ತದೆ. ಒಳ್ಳೆಯ ಮತ್ತು ಧರ್ಮದ ರೀತಿ ನೀತಿಯುಳ್ಳ ರಾಜರು ಧರ್ಮದ ಕಡೆಗೆ ಸೇರಿಕೊಳ್ಳುತ್ತಾರೆ. ಮಹಾಭಾರತ ಯುದ್ಧ ಅನಿವಾರ್ಯ ಆಗುತ್ತದೆ ಎಂದೇ ಮಹಾಭಾರತ ವ್ಯಾಖ್ಯಾನಿಸುತ್ತದೆ. ಅದರಲ್ಲೂ ದುರ್ಯೋಧನ, ಕರ್ಣ, ಶಕುನಿ ಮತ್ತು ದುಶ್ಯಾಸನ ಈ ನಾಲ್ವರನ್ನು ದುಷ್ಟ ಚತುಷ್ಟಯರು ಎನ್ನಲಾಗುತ್ತದೆ. ದುರ್ಯೋಧನ ಅಧರ್ಮದಲ್ಲಿ ತೊಡಗಿಕೊಳ್ಳುತ್ತಾನೆ. ಸಮಸ್ತ ರಾಜ್ಯವನ್ನು ದುರಂತದ ಸ್ಥಿತಿಗೆ ತಳ್ಳುತ್ತಾನೆ. ಇದರಿಂದ ಖಳ ಸ್ಥಾನದಲ್ಲಿ ನಿಲ್ಲುತ್ತಾನೆ. ಸ್ವತಃ ತನ್ನ ತಾಯಿಯ ಮಾತನ್ನು ಧಿಕ್ಕರಿಸಿ ತಾನು ಯುದ್ಧ ಕಮರಿಗೆ ಬಿದ್ದುದು ಅಲ್ಲದೆ ತನ್ನ ಕಡೆಯವರನ್ನೆಲ್ಲ ಕಮರಿಗೆ ತಳ್ಳುತ್ತಾನೆ.

ಧರ್ಮರಾಜನಿಗೆ ಕೆಟ್ಟದ್ದು ಮಾಡುವುದಕ್ಕೆ ಬರುವುದಿಲ್ಲ. ಒಳ್ಳೆಯತನ, ಸಾತ್ವಿಕರನ್ನು ಪ್ರತಿನಿಧಿಸುತ್ತಾನೆ. ದುರ್ಯೋಧನನಿಗೆ ಒಳ್ಳೆಯದನ್ನು ಮಾಡಲು ಬಾರದು. ಏಕೆಂದರೆ ಅವನಿಗೆ ಗುರುಗಳು ತಂದೆ ತಾಯಿಗಳು ಯಾರು ಬುದ್ಧಿ ಹೇಳಿದರೂ ಕೇಳುವುದಿಲ್ಲ. ದುಷ್ಟತನ ಕೆಟ್ಟದ್ದರ ಪ್ರತೀಕ ಎಂದೇ ಸಮಾಜದಲ್ಲಿ ಗುರುತಿಸಿಕೊಳ್ಳುವ ಮನಃಸ್ಥಿತಿ ಅವನದು ಆಗಿರುತ್ತದೆ, ಕಟ್ಟ ಕಡೆಗೆ ಸಾಕ್ಷಾತ್‌ ಭಗವಂತನ ಅವತಾರವೇ ಆದ ಶ್ರೀ ಕೃಷ್ಣನ ಪ್ರೀತಿಯ- ಹೃದಯವಂತಿಕೆಯ ಮಾತು ಸಹ ಅವನಿಗೆ ಹಿತ ತರುವುದಿಲ್ಲ. ತನ್ನ ಅಂತ್ಯವನ್ನು ತಾನೇ ತಂದುಕೊಳ್ಳುತ್ತಾನೆ.

ಶ್ರೀ ಕೃಷ್ಣನ ಜೀವನ ದರ್ಶನ ಇಡೀ ಸಮಾಜದ ಸಮಷ್ಟಿಯ ಹಿತದ ಕಡೆಗೆ ಇತ್ತು. ವೈಯಕ್ತಿಕ ಮತ್ತು ಕುಟುಂಬದ ಸ್ವಾರ್ಥದ ಬದುಕು ಅಲ್ಲಿ ಸ್ಥಾನ ಪಡೆಯುವುದಿಲ್ಲ. ಸರ್ವ ಜನ ಹಿತಾಯ ಎಂಬುದೇ ಶ್ರೀ ಕೃಷ್ಣ ಜೀವನದ ಧ್ಯೇಯವಾಕ್ಯ ಆಗಿತ್ತು ಎಂಬುದನ್ನು ಎಲ್ಲ ವಿದ್ವಾಂಸರು ಗುರುತಿಸುತ್ತಾರೆ. ಇದನ್ನು ಸಾಧಿಸಲು ಶ್ರೀ ಕೃಷ್ಣ ಅನೇಕ ತಂತ್ರ, ತೋಳ್ಬಲ ಪ್ರದರ್ಶನಕ್ಕೂ ಹಿಂದೆ ಮುಂದೆ ನೋಡುವುದಿಲ್ಲ. ಸಮಾಜದ ಸಮಷ್ಟಿ ಹಿತವೇ ಆತನಿಗೆ ಪ್ರಧಾನವಾಗಿತ್ತು. ಇದರ ಮುಂದೆ ವ್ಯಕ್ತಿ, ಕುಟುಂಬ ಯಾವುದೂ ಗಣನೆಗೆ ಬರುತ್ತಿರಲಿಲ್ಲ. ಶ್ರೀಕೃಷ್ಣ ಮನಸ್ಸು ಮಾಡಿದ್ದರೆ ರಾಜ ಮಹಾರಾಜ ಸಾರ್ವಭೌಮನಾಗಿ ಮೆರೆಯಬಹುದಿತ್ತು. ಅಂತಹ ಅವಕಾಶಗಳು ಅವನಿಗೆ ಬೇಕಾದಷ್ಟು ಸಿಕ್ಕಿತ್ತು. ಆದರೆ ಅದನ್ನು ಆತ ಬಯಸಲಿಲ್ಲ. ಸಮಾಜದ ಹಿತ ಕಾಯಲು ರಾಜ್ಯದ ಅಧಿಕಾರ ಶಾಶ್ವತ ಎಂದೂ ಅವನಿಗೆ ಎಂದೂ ಅನಿಸಲಿಲ್ಲ.

ಮಹಾಭಾರತ ಯುದ್ಧ ಗೆದ್ದಾದ ಮೇಲೆ ಕುಂತಿಯನ್ನು ಭೇಟಿ ಮಾಡಿದ ಕೃಷ್ಣ ವರ್ಷಗಳಿಂದ ನೀನು ಪಟ್ಟ ಪರಿಶ್ರಮಕ್ಕೆ ಇದೀಗ ಮುಕ್ತಿ ಸಿಕ್ಕಿದೆ. ನಿನ್ನ ಅಭಿಲಾಷೆಯಂತೆ, ನೀನೀಗ ರಾಜಮಾತೆ ಆಗಿದ್ದೀಯ. ಸಕಲ ವೈಭವಗಳು ನಿನ್ನಲ್ಲಿ ಈಗ ಇದೆ. ಇನ್ನು ಧರ್ಮರಾಜನು ಕ್ಷತ್ರಿಯ ಧರ್ಮಕ್ಕೆ ಅನುಗುಣವಾಗಿ ಯುದ್ಧದಲ್ಲಿ ಜಯ ಗಳಿಸಿದ್ದಾನೆ. ಈಗ ಎಲ್ಲರೂ ನಿನ್ನನ್ನು ಮಹಾ ರಾಜಮಾತೆ ಎಂದು ಗೌರವಿಸುತ್ತಾರೆ. ಈಗ ನೀನು ಇದಕ್ಕೆ ಅರ್ಹಳೂ ಆಗಿದ್ದೀಯ ಎಂದು ಮನತುಂಬಿ ಹೇಳುತ್ತಾನೆ.

ಇಂತಹ ಮಾತನ್ನು ಕೇಳುತ್ತ ಕೃಷ್ಣನ ಕಂಡ ಕುಂತಿಯು ನಿನ್ನನ್ನು ಕೇವಲ ಮಾನವ ಎಂದು ಯಾರೂ ಭಾವಿಸಬಾರದು.ನೀನು ಮನಸ್ಸು ಮಾಡಿದ್ದರೆ ಅವತಾರ ಮಾಡುವ ಪ್ರಮೇಯವೇ ಇರಲಿಲ್ಲ. ನೆನೆಸಿದ ಕ್ಷಣ ಏನನ್ನಾದರೂ ಮಾಡಬಹುದಾದ ಅಂತಃಶಕ್ತಿ ಮತ್ತು ಯುಕ್ತಿ ಎಲ್ಲವೂ ನಿನ್ನಲ್ಲಿ ಅಡಗಿದೆ. ಭಗವಂತನ ಅವತಾರವೇ ಆಗಿರುವಾಗ ನೀನು ಅವತರಿಸಿ ಬಂದದ್ದು ಎಂದರೆ ಅದಕ್ಕೆ ಬಲವಾದ ಕಾರಣ ಇದೆ. ಅದು ನಮೆಲ್ಲರ ಕಲ್ಯಾಣಕ್ಕಾಗಿ, ಉದ್ಧಾರಕ್ಕಾಗಿ ಆಗಿದೆ. ನಿನ್ನನ್ನು ಕೇವಲ ಮಾನವ ಎಂದು ಯಾರೂ ಭ್ರಮಿಸಲಾಗದು. ಇದೇ ಸತ್ಯ ಎಂದು ಹೇಳುತ್ತಾಳೆ.

ಸುಖದ ಸುಪ್ಪತ್ತಿಗೆಯಲ್ಲಿನ ಭ್ರಮಾಲೋಕ ನನಗೆ ಬೇಡ ಕೃಷ್ಣ. ಇದು ಸತ್ಯವೇ ಇರಬಹುದು. ಆದರೆ ಯಾವುದೂ ಶಾಶ್ವತ ಅಲ್ಲ. ನಿಜ, ಇದುವರೆಗೂ ನನಗೆ ಕಷ್ಟ ಇತ್ತು. ಆದರೆ ಇದರಲ್ಲಿ ನಾನು ಪರಮ ಸುಖವನ್ನೇ ಕಂಡಿದ್ದೇನೆ. ಏಕೆಂದರೆ ದಿನವೂ, ಅನು ಕ್ಷಣವೂ ಭಗವಂತನನ್ನೇ ನಾನು ಸ್ಮರಣೆ ಮಾಡುತ್ತಿದ್ದೆ. ಇದು ನನಗೆ ನಿಜಕ್ಕೂ ನೈಜ ಸುಖವನ್ನೇ ತಂದುಕೊಟ್ಟಿದೆ. ಇದೊಂದೇ ನನಗೆ ಸಾಕು. ಇದು ಬಿಟ್ಟು ಬೇರೆ ಯಾವ ಮಹಾರಾಜಮಾತೆ ಪಟ್ಟ ನನಗೆ ಬೇಡ.

ಕೃಷ್ಣ ನಿನ್ನನ್ನು ನೆನೆಯದ ರಾಜಮಾತೆಯ ಸುಖ ಭೋಗಕ್ಕಿಂತ ಅನುದಿನವೂ ನಿನ್ನನ್ನು ನೆನೆಯುವ ಈ ಕಷ್ಟದ ಜೀವನವೇ ನನಗೆ ಪರಮ ಸಂತೋಷ ಉಂಟು ಮಾಡುತ್ತದೆ. ನನಗೆ ಮಹಾರಾಜ ಧೃತರಾಷ್ಟ್ರ ಮತ್ತು ಗಾಂಧಾರಿಯ ಸೇವೆ ಮಾಡುವುದರಲ್ಲಿ ತೃಪ್ತಿ ಇದೆ ಎಂದು ಹೇಳುತ್ತಾ ಅವರೊಂದಿಗೆ ವಾನಪ್ರಸ್ಥಾಶ್ರಮಕ್ಕೆ ತೆರಳುತ್ತಾಳೆ. ಶ್ರೀಕೃಷ್ಣ ಪರಮಾತ ಕುಂತಿಯ ಜೀವನದ ನಡೆಯ ಆದರ್ಶವನ್ನು ಸಮಾಜಕ್ಕೆ ತೋರಿಸುತ್ತಾನೆ.

ಮುಂದುವರಿಯುವುದು…

RELATED ARTICLES
spot_img

Latest News