ಮಹಾಭಾರತವು ವ್ಯಾಸ ಋಷಿಗಳಿಂದ ರಚಿತವಾಗಿದ್ದು,ಭಾರತೀಯ ಸಂಸ್ಕೃತಿಯ ಮೇರು ಕೃತಿಯಾಗಿದೆ. ಒಂದು ಲಕ್ಷ ಶ್ಲೋಕಗಳಿರುವ ಈ ಬೃಹನ್- ಮಹಾನ್ ಕೃತಿಯಲ್ಲಿ ಏನಿದೆ ಎಂದು ಕೇಳುವುದಕ್ಕಿಂತ ಏನಿಲ್ಲ ಎಂದು ಕೇಳುವುದೇ ಸೂಕ್ತ. ಮೂಲತಃ ಕೌರವ- ಪಾಂಡವರ ದಾಯಾದಿ ಕಲಹ ಕುರಿತ ಅಂಶಗಳು ಇದರಲ್ಲಿವೆ ಎಂದು ಭಾಸವಾದರೂ ಇದರಲ್ಲಿ ಸತ್ಯ ಧರ್ಮ ನ್ಯಾಯ ನೀತಿ ವಿಚಾರಗಳ ದೈವಭಕ್ತಿಯ ಆಧ್ಯಾತಿಕತೆಯ ಬೋಧನೆಯ ಹೂರಣ ಸಮೃದ್ಧವಾಗಿದೆ. ಮಹಾಭಾರತದ ಮೇರು ಪುರುಷ ಶ್ರೀ ಕೃಷ್ಣನ ಹಿರಿಮೆ ಗರಿಮೆಗಳ ಚಿತ್ರಣ ಇದರಲ್ಲಿ ಕಂಡುಬರುತ್ತದೆ.
ಬಾಲ್ಯದಲ್ಲೇ ತಾನು ಅವತಾರಪುರುಷ ಎಂಬುದನ್ನು ರುಜುವಾತು ಮಾಡಿದ ಶ್ರೀ ಕೃಷ್ಣ ದ್ವಾಪರ ಯುಗದಲ್ಲಿ ದುಷ್ಟ ರಾಜರಾಗಿ ಅವತರಿಸಿದ ಅಸುರರ ನಾಶಕ್ಕೆ ಪ್ರತ್ಯಕ್ಷ- ಪರೋಕ್ಷವಾಗಿ ಕಾರಣನಾಗುತ್ತಾನೆ. ಪರಂಪರೆ ಮತ್ತು ಸಂಸ್ಕೃತಿಯ ಲೋಕದ ವಿಕಾಸಕ್ಕೆ ಅಡ್ಡಿ ಬಂದ ಎಲ್ಲಾ ಶಕ್ತಿಗಳನ್ನು ನಾಶ ಮಾಡಿ ಯಶಸ್ವಿಯಾಗಿ ಪ್ರಕೃತಿ ನಿಯಮದ ಸಂರಕ್ಷಣೆ ಮಾಡಿ ಧರ್ಮಕ್ಕೆ ಮರು ವ್ಯಾಖ್ಯಾನ ಮಾಡಿ ವೇದದ ನೈಜ ಅರ್ಥದ ದರ್ಶನ ಮಾಡಿಸಿದ ಶ್ರೀಕೃಷ್ಣ ಪರಮಾತನು ಅಂದು ಮಹಿಳೆಯರಿಗಿದ್ದಂತಹ ಎಲ್ಲಾ ಸಂಕೋಲೆಗಳನ್ನು ಬಿಡಿಸಿ ಮುಕ್ತತೆಯ ಹೊಸ ವಾತಾವರಣ ನಿರ್ಮಿಸಿದ.
ಯತೋ ಕೃಷ್ಣಃ ತತೋ ಧರ್ಮಃ
ಯತೋ ಧರ್ಮಃ ತತೋ ಜಯಃ
ಎಂದರೆ ಎಲ್ಲಿ ಶ್ರೀ ಕೃಷ್ಣ ಇರುವನೋ ಅಲ್ಲಿ ಧರ್ಮ ಇರುತ್ತದೆ ಎಲ್ಲಿ ಧರ್ಮ ಇರುತ್ತದೆಯೋ ಅಲ್ಲಿ ಜಯ ಇರುತ್ತದೆ. ಮಹಾಭಾರತವನ್ನು ಜಯ ಎಂಬ ಹೆಸರಿನಲ್ಲೂ ಕರೆಯುತ್ತಾರೆ ಅಂದರೆ ಪರಮಾತನ ಕೃಪಾ ಕಟಾಕ್ಷದಿಂದ ಧರ್ಮವು ಅಧರ್ಮದ ವಿರುದ್ಧ ಸಾಧಿಸಿದ ಜಯ ಎಂದು ಹೇಳಬಹುದು.ತಿಳಿದವರು ತಿಳಿಸುವ ಹಾಗೆ ಶ್ರೀಕೃಷ್ಣಾವತಾರದ ಮೂರು ಪ್ರಮುಖ ಘಟ್ಟಗಳು ಇಡೀ ಸಮಾಜಕ್ಕೆ ಮಾದರಿ ಎಂದು ಕರೆಸಿಕೊಂಡಿವೆ . ಇವು ಮಾನವರೂಪಿ ಶ್ರೀ ಕೃಷ್ಣನು ಭೂಮಿಯಿಂದ ನಿರ್ಗಮಿಸಿದ ನಂತರ ಈಗಲೂ ಬಹುಶಃ ಮುಂದೆಯೂ ಸಮಾಜದಲ್ಲಿನ ಸರ್ವರ ಬದುಕು ರೂಪಿಸುವಲ್ಲಿ , ಸಾತ್ವಿಕರಿಗೆ ಸುಖ ಶಾಂತಿ ನೆಮದಿ ತಂದು ಕೊಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.
ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಮೋಹವಶನಾಗಿ ಶಸ್ತ್ರಕೆಳಗಿಡುವ ಅರ್ಜುನನಿಗೆ ಕರ್ತವ್ಯ ಪ್ರಜ್ಞೆ ನೆನಪಿಸಲು ತಿಳಿವಳಿಕೆ ಮತ್ತು ಜ್ಞಾನದ ಮಾರ್ಗವನ್ನು ಶ್ರೀ ಕೃಷ್ಣ ಪರಮಾತ ಬೋಧಿಸುತ್ತಾನೆ. ಇದು ಮುಂದೆ ಭಗವದ್ಗೀತೆ ಎಂದೇ ಪ್ರಸಿದ್ಧವಾಯಿತು .ಇದು ಅರ್ಜುನನ ಹೃದಯ ಮತ್ತು ಕಣ್ಣನ್ನು ತೆರೆಸಿತು . ಒಂದು ಹೊಸ ದಿಕ್ಕು ಮತ್ತು ಮಾರ್ಗದರ್ಶನ ಆತನಿಗೆ ಲಭಿಸಿತು. ಇದು ಒಂದು ಘಟ್ಟ.
ಮುಂದೆ ಯುದ್ಧದ ಬಳಿಕ ಧರ್ಮರಾಜನು ಬಂಧು ಹತ್ಯೆಯಿಂದ ಲಭಿಸಿದ ರಾಜ್ಯ ಬೇಡ ಎಂದು ಮರುಗಿ ನಿಷ್ಕ್ರಿಯನಾದಾಗ ಭೀಷಾಚಾರ್ಯರ ಮುಖಾಂತರ ಧರ್ಮರಾಜನಿಗೆ ನೀತಿ ಬೋಧನೆ ಮಾಡಿಸಿ ಆತನಲ್ಲಿ ಜೀವನೋತ್ಸಾಹ ತುಂಬುತ್ತಾನೆ.ಈ ಬೋಧನೆ ವಿಷ್ಣು ಸಹಸ್ರನಾಮ ಎಂದು ಪ್ರಖ್ಯಾತ.ಇದು ಎರಡನೇ ಘಟ್ಟ.
ಮೂರನೆಯದಾಗಿ ಯಾದವರ ಪೈಕಿ ಪ್ರಮುಖನಾದ, ನ್ಯಾಯ ನೀತಿ ಧರ್ಮ ಪಾಲನೆಗೆ ಬದ್ಧನಾಗಿದ್ದ ಉದ್ದವನು ಶ್ರೀಕೃಷ್ಣ ಪರಮಾಪ್ತ ಮಿತ್ರನಾಗಿದ್ದ. ಕೃಷ್ಣಾವತಾರದ ಕೊನೆಯ ದಿನಗಳಲ್ಲಿ ಯಾದವರು ತಮಲ್ಲೇ ಬಡಿದಾಡಿ ಕುಲ ನಾಶವಾಗುವ ಸನ್ನಿವೇಶದಲ್ಲಿಯೂ ಸ್ಥಿತಪ್ರಜ್ಞನಾಗಿದ್ದ ಶ್ರೀಕೃಷ್ಣನನ್ನು ಸರ್ವಶಕ್ತನಾಗಿದ್ದರೂ ನಿನ್ನಕಣ್ಣ ಮುಂದೆಯೇ ಕುಲ ನಾಶವಾಗುತ್ತಿದ್ದರೂ ಹೇಗೆ ಸುಮನಿರುವೆ ಎಂದು ಉದ್ಧವ ಪ್ರಶ್ನಿಸಿದ.
ಆಗ ಉದ್ಧವನಿಗೆ ಶ್ರೀಕೃಷ್ಣನು ಅಧ್ಯಾತದ ವಿಶ್ವ ದರ್ಶನ ಮಾಡಿಸುತ್ತಾನೆ.ಅವನಿಗೆ ಹೇಳಿದ ವೇದಾಂತದ ಸಾರವೇ ಉದ್ಧವ ಗೀತೆ ಎಂದು ಪ್ರಸಿದ್ಧಿ ಗಳಿಸಿತು. ನನ್ನವರನ್ನೇ ನಾನು ಹೇಗೆ ಕೊಲ್ಲಲಿ ಎಂಬ ತೊಳಲಾಟಕ್ಕೆ ಉತ್ತರವಾಗಿ ಭಗವದ್ಗೀತೆ ಹುಟ್ಟಿದರೆ, ನನ್ನವರನ್ನು ಉಳಿಸಿಕೊಳ್ಳುವ ಮಾರ್ಗವೇ ಇಲ್ಲವೇ ಎಂಬ ಮಮಕಾರದ ಹೊಯ್ದಾಟಕ್ಕೆ ಪರಿಹಾರವಾಗಿ ಉದ್ಧ್ದವ ಗೀತೆ ಹುಟ್ಟಿತು.ಉದ್ಧವ ಗೀತೆ ಗಾತ್ರದಲ್ಲಿ ಕಿರಿದಾದರೂ ಆಧ್ಯಾತಿಕ ಗುರುತ್ವದಲ್ಲಿ ಭಗವದ್ಗೀತೆಗೆ ಸರಿಸಮಾನವಾಗಿ ನಿಲ್ಲುವ ಕಾವ್ಯ.
ಪ್ರಕೃತಿಯಲ್ಲಿ ಕಾಣುವ 24 ಸಂಗತಿಗಳ ಮೂಲಕ ಬದುಕಿಗೆ ಅತಿ ಮುಖ್ಯವಾಗಿ ಬೇಕಾದ 24 ಗುಣಗಳನ್ನು ಇಲ್ಲಿ ಶ್ರೀ ಕೃಷ್ಣನು ತಿಳಿಸಿದ್ದಾನೆ.ಈ ಅರ್ಥದಲ್ಲಿ ಇದು ಅವಧೂತ ಗೀತೆ ಎಂದು ಕರೆಸಿಕೊಳ್ಳುತ್ತದೆ. ಭಗವದ್ಗೀತೆಯು ಮಾನವನನ್ನು ಧರ್ಮ ಮಾರ್ಗದಲ್ಲಿ ತೊಡಗಿಸಿಕೊಳ್ಳುವ ದಾರಿದೀಪವಾಗಿದ್ದರೆ, ಉದ್ಧವ ಗೀತೆಯು ಮೋಕ್ಷ ಮಾರ್ಗಕ್ಕೆ ಕೈಗಂಬವಾಗಿದೆ. ಉದ್ಧವಗೀತೆಯ 24 ಅಧ್ಯಾಯಗಳನ್ನು ಈ ಸಂಜೆ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
