ಬೆಂಗಳೂರು,ಸೆ.9- ದೇಹ ಧಾರ್ಢ್ಯಪಟು ಜಿಮ್ ರವಿ ಅವರು ತಮ ಜೀವನದಲ್ಲಿ ಎದುರಾದ ಹಲವು ಸವಾಲುಗಳನ್ನು ಛಲದಿಂದ ಎದುರಿಸಿ ಗೆದ್ದಿದ್ದಾರೆ. ಇದೆಲ್ಲವೂ ಇಂದಿನ ಯುವಜನಾಂಗಕ್ಕೆ ಸ್ಫೂರ್ತಿ ದಾಯಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಂಸೆ ವ್ಯಕ್ತಪಡಿಸಿದರು.ಅಂತಾರಾಷ್ಟ್ರೀಯ ದೇಹಧಾರ್ಢ್ಯ ಪಟು, ಸಿನಿಮಾ ಕಲಾವಿದ ಜಿಮ್ ರವಿ ಅವರ ಜೀವನಾಧಾರಿತ ರವಿ ನೀನು ಆಗಸದಲ್ಲಿ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪದಕಗಳನ್ನು ಗೆದ್ದಿದ್ದಾರೆ. ಈವರೆಗೆ ಸುಮಾರು 110 ಪ್ರಶಸ್ತಿಯನ್ನು ಗಳಿಸಿದ್ದಾರೆ. ಇದು ಸಾಮಾನ್ಯರಿಂದ ಸಾಧ್ಯವಾಗುವ ಸಾಧನೆಯಲ್ಲ, ಇದರ ಹಿಂದೆ ಗುರಿ, ಬದ್ಧತೆ, ಶ್ರಮದ ಅಗತ್ಯವಿದೆ ಎಂದು ರವಿಯವರನ್ನು ಕೊಂಡಾಡಿದರು.
ತಾಯಿಯಿಂದ ಪ್ರೇರಣೆ ಪಡೆದ ರವಿ ಇಂದು ಈ ಎತ್ತರಕ್ಕೆ ಬೆಳೆದಿದ್ದಾರೆ ಎನ್ನುವುದು ಹೆಮೆಯ ವಿಚಾರ. ಪುಸ್ತಕದ ಲೇಖಕರಾದ ಮಂಜುನಾಥ್ ಅವರು ರವಿಯವರ ಓದು, ಬಾಲ್ಯ, ಆಸಕ್ತಿ, ಸಾಧನೆಗಳ ಬಗ್ಗೆ ಅತ್ಯಂತ ಸುಂದರವಾಗಿ ಬರಹ ರೂಪ ಕೊಟ್ಟಿದ್ದಾರೆ ಎಂದರು.
ರವಿಯವರ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು ಮಾಡುವಂತೆ ಹಲವರು ವೇದಿಕೆಯಲ್ಲಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದ ರಾಮಯ್ಯ ಅವರು ಮುಂಚೆಯೇ ಈ ವಿಚಾರ ಹೇಳಿದ್ದರೆ ನಾನೇ ಪ್ರಶಸ್ತಿ ನೀಡುವ ವ್ಯವಸ್ಥೆ ಮಾಡುತ್ತಿದ್ದೆ, ಈಗಲೂ ನಮದೇ ಸರ್ಕಾರವಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶಸ್ತಿ ನೀಡುವಂತೆ ತಪ್ಪದೇ ಶಿಫಾರಸು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕನಕ ಗುರು ಪೀಠದ ಕಾಗಿನೆಲೆ ಮಹಾಸಂಸ್ಥಾನದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಸಚಿವ ನರೇಂದ್ರಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಎಸ್.ಜಿ.ಸಿದ್ದರಾಮಯ್ಯ, ಎಲ್.ಎನ್.ಮುಕುಂದರಾಜ್ ಉಪಸ್ಥಿತರಿದ್ದರು.
