ಬೆಂಗಳೂರು,ಸೆ.9-ನಗರದಿಂದ ಎಂಟು ತಿಂಗಳ ಹಿಂದೆ ನಾಪತ್ತೆಯಾಗಿ ಪೊಲೀಸರಿಗೆ ಸವಾಲಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಪೈಕಿ ಒಬ್ಬರನ್ನು ಕೊನೆಗೂ ಸಿಐಡಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಜ.30 ರಂದು ವಿದ್ಯಾರಣ್ಯಪುರದಿಂದ ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಏಕಾಏಕಿ ಕಣರೆಯಾಗಿದ್ದರು.
ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ತೇಜಸ್ವಿನಿ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ತನಿಷ್ಕಾ ಯಾರಿಗೂ ಯಾವುದೇ ಸುಳಿವು ಸಿಗದಂತೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಇದೀಗ ರೋಚಕ ತಿರುವು ಸಿಕ್ಕಿದೆ.
ಈ ಇಬ್ಬರು ಕಾಣೆಯಾದ ದಿನದಿಂದ ಬರೋಬ್ಬರಿ ಎಂಟು ತಿಂಗಳ ಕಾಲ ಹೇಗೆ ಕಾಲ ಕಳೆದರು, ಎಲ್ಲೆಲ್ಲಿ ಸುತ್ತಾಡುತ್ತಿದ್ದರು, ಊಟ, ತಿಂಡಿ, ವಸತಿಗಾಗಿ ಎಲ್ಲೆಲ್ಲಿ ಅಲೆದಾಡಿದ್ದಾರೆ ಎಂಬುವುದರ ಬಗ್ಗೆ ಕಥೆ ಕಟ್ಟಿರುವ ವಿಷಯಗಳು ಸಿನಿಮಾ ಕಥೆಯನ್ನೇ ಮೀರಿಸುವಂತಿದೆ. ಯುವತಿಯರ ಕಣರೆ ಪ್ರಕರಣ ದಾಖಲಿಸಿಕೊಂಡು ವಿದ್ಯಾರಣ್ಯಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಾಗ ಮಲೈಮಹದೇಶ್ವರ ಬೆಟ್ಟಕ್ಕೆ ಹೋಗಿರುವ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಪೊಲೀಸರು ಅಲ್ಲಿಗೆ ತೆರಳಿ ಹುಡುಕಾಟ ನಡೆಸಿದಾಗ ಯುವತಿಯರ ಸುಳಿವು ಸಿಕ್ಕಿರಲಿಲ್ಲ.ಹಾಗಾಗಿ ಪೊಲೀಸರು ಬರಿಗೈಲಿ ಹಿಂದಿರುಗಿದ್ದರು.
ಆರು ತಿಂಗಳಾದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹಾಗಾಗಿ ತನಿಷ್ಕಾ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದರು.ಬಳಿಕ ಈ ಪ್ರಕರಣವನ್ನು ಹೈಕೋರ್ಟ್ ಸಿಐಡಿಗೆ ವರ್ಗಾವಣೆ ಮಾಡಿತ್ತು. ಕಳೆದ ಎರಡು ತಿಂಗಳಿನಿಂದ ಸಿಐಡಿ ತಂಡ ಈ ಇಬ್ಬರು ಯುವತಿಯರಿಗಾಗಿ ಹಗಲಿರುಳು ಶೋಧ ನಡೆಸುತ್ತಿತ್ತು.
ಸಿಮ್ ಖರೀದಿಗೆ ಹೋಗಿ ಪತ್ತೆಯಾದ ತನಿಷ್ಕಾ:
ಹೊಸ ಸಿಮ್‌ಕಾರ್ಡ್ ಖರೀದಿಸಲು ತನಿಷ್ಕಾ ಮೊಬೈಲ್ ಅಂಗಡಿಗೆ ಹೋಗಿ ಆಧಾರ್‌ಕಾರ್ಡ್ ನಂಬರ್ ಬಳಕೆಯಾಗಿರುವ ಬಗ್ಗೆ ಸರ್ವಿಸ್ ಪ್ರೋವೈಡರ್‌ನಿಂದ ಸಿಐಡಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.ಈ ಆಧಾರದ ಮೇಲೆ ತಕ್ಷಣ ಸಿಐಡಿ ಪೊಲೀಸರು ಶೋಧ ಕೈಗೊಂಡಾಗ ಕನಕಪುರದಲ್ಲಿ ತನಿಷ್ಕಾಳನ್ನು ಪತ್ತೆ ಹಚ್ಚಿದ್ದಾರೆ. ತೇಜಸ್ವಿನಿ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಉತ್ತಮ ವಿದ್ಯಾಭ್ಯಾಸ ಮಾಡಲು ಪೋಷಕರು ಮಕ್ಕಳ ಮೇಲೆ ನಂಬಿಕೆ ಇಟ್ಟು ಶಾಲಾ-ಕಾಲೇಜಿಗೆ ಕಳುಹಿಸುತ್ತಾರೆ. ಆದರೆ ಅವರ ಆಲೋಚನೆಯೇ ಬೇರೆಯಾದರೆ ಯಾರನ್ನು ನಂಬಬೇಕು. ಹೆತ್ತ ಮಕ್ಕಳೇ ಹೀಗೆ ಮಾಡಿದರೆ ಪೋಷಕರು ನೆಮದಿಯಿಂದ ಬದುಕಲು ಸಾಧ್ಯವೇ ಎಂಬ ಆಂತಕ ಮೂಡಿದೆ.
