Sunday, November 24, 2024
Homeರಾಜ್ಯರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಪೊಲೀಸರ ತಯಾರಿ ಹೇಗಿದೆ..?

ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಪೊಲೀಸರ ತಯಾರಿ ಹೇಗಿದೆ..?

ಬೆಂಗಳೂರು, ಏ.23- ರಾಜ್ಯದ ಮೊದಲ ಹಂತದಲ್ಲಿ ಏ.26ರಂದು ಮತದಾನ ನಡೆಯಲಿದ್ದು, ನಗರದ ಮತದಾರರು ನಿರ್ಭೀತಿಯಿಂದ ಮತದಾನ ಮಾಡಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಗೆ ಒಳಪಡುವ ಐದು ಲೋಕಸಭಾ ಕ್ಷೇತ್ರಗಳ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸುಗಮವಾಗಿ ಮತ ಚಲಾವಣೆ ಮಾಡಲು ಅನುಕೂಲವಾಗುವಂತೆ ಭಾರತದ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ನಗರ ಪೊಲೀಸ್ ಘಟಕದಿಂದ ಚುನಾವಣಾ ಕರ್ತವ್ಯಗಳಿಗೆ ಮೂವರು ಹೆಚ್ಚುವರಿ ಪೊಲೀಸ್ ಆಯುಕ್ತರು, 24 ಡಿಸಿಪಿಗಳು, 52 ಎಸಿಪಿಗಳು, 118 ಇನ್‍ಸ್ಪೆಕ್ಟರ್‍ಗಳು, 687 ಪಿಎಸ್‍ಐ/ಎಎಸ್‍ಐ, 8511 ಎಚ್‍ಸಿ/ಪಿಸಿ ಸೇರಿದಂತೆ9,397 ಅಧಿಕಾರಿ ಸಿಬ್ಬಂದಿಗಳು, 3,919 ಗೃಹ ರಕ್ಷಕ ಸಿಬ್ಬಂದಿ, 54 ಸಶಸ್ತ್ರ ತುಕಡಿಗಳು ಹಾಗೂ 11 ಕೇಂದ್ರೀಯ ಪೊಲೀಸ್ ಕಂಪನಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ನಗರ ಪೊಲೀಸರ ಜೊತೆಗೆ ಸಿಎಆರ್‍ಪಿಎಫ್‍ನ 11 ಕಂಪನಿ, ಕೆಎಸ್‍ಆರ್‍ಪಿಯ 14, ಸಿಎಆರ್‍ನ 40 ಪ್ಲಟೂನ್ಸ್‍ಗಳನ್ನು ನೀಯೋಜಿಸಲಾಗಿದೆ. ಐದು ಕ್ಷೇತ್ರಗಳ ವ್ಯಾಪ್ತಿಯಲ್ಲಿ 2564 ಮತಗಟ್ಟೆ ಕೇಂದ್ರಗಳಿದ್ದು, 8088 ಮತಗಟ್ಟೆಗಳಿದ್ದು, ಇದರಲ್ಲಿ 1737 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ.

ನಗರದ 8 ವಿಭಾಗಗಳ ವ್ಯಾಪ್ತಿಯಲ್ಲಿ ಕೇಂದ್ರೀಯ ಭದ್ರತಾ ಪಡೆಗಳೊಂದಿಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಪ್ಲಾಗ್ ಮಾರ್ಚ್‍ಗಳನ್ನು ಕೈಗೊಳ್ಳಲಾಗಿದೆ. 103 ಚೆಕ್‍ ಪೋಸ್ಟ್ ಅಳವಡಿಸಿದ್ದು, 91 ಫ್ಲೈಯಿಂಗ್ ಸ್ಕ್ವಾಡ್‍ಗಳು ಕಾರ್ಯಾಚರಣೆಯಲ್ಲಿರುತ್ತವೆ. ರೌಡಿ ಪಟ್ಟಿಯಲ್ಲಿರುವ ಆಸಾಮಿಗಳು/ಕ್ರಿಮಿನಲ್ ಹಿನ್ನಲೆಯುಳ್ಳ 5117 ಜನರಿಂದ ಭದ್ರತಾ ಕಾಯ್ದೆಯಡಿ ಶಾಂತಿಭಂಗ ಉಂಟು ಮಾಡದಂತೆ ಮುಚ್ಚಳಿಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.

ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯನಿರ್ವಹಿಸಲು ಹೋಂ ಗಾರ್ಡ್ ಸಿಬ್ಬಂದಿಗಳು ವಿವಿಧ ಕ್ಷೇತ್ರಗಳಿಗೆ ತೆರಳುತ್ತಿರುವುದು

ನಗರದ 146 ಕಡೆಗಳಲ್ಲಿ ಸಶಸ್ತ್ರ ತುಕಡಿಗಳೊಂದಿಗೆ ಪೊಲೀಸ್ ಪಥಸಂಚಲನ ನಡೆಸಲಾಗಿದೆ. 5533 ಪರಾವನಗಿ ಪಡೆದ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಜಮೆ ಮಾಡಲಾಗಿದ್ದು , ವಿಶೇಷ ಕಾರ್ಯಾಚರಣೆ ಕೈಗೊಂಡು 1444 ವಾರೆಂಟ್‍ಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ನಾಳೆ ಸಂಜೆ 6 ಗಂಟೆಯಿಂದ ಏ.26ರ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮುಂಚಿತವಾಗಿ ಅಂದರೆ ನಾಳೆ ಸಂಜೆ 6 ಗಂಟೆಯ ನಂತರ ಮತದಾರರು ಅಲ್ಲದವರು ಕ್ಷೇತ್ರ ಬಿಟ್ಟು ಅವರ ಮಾತೃಪಕ್ಷಕ್ಕೆ ತೆರಳಬೇಕು. ಯಾವುದೇ ರೀತಿಯ ಗುಂಪುಗಾರಿಕೆ ಮಾಡುವುದನ್ನು ನಿಷೇಧಿಸಲಾಗಿದೆ.

ಸಾರ್ವಜನಿಕರು ಪೊಲೀಸ್ ಸಹಾಯಕ್ಕಾಗಿ ಚುನಾವಣಾ ಅಕ್ರಮಗಳ ಮಾಹಿತಿ ನೀಡಲು ಪೊಲೀಸ್ ದೂರವಾಣಿ 112ಕ್ಕೆ ಸಂಪರ್ಕಿಸಲು ಆಯುಕ್ತರು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

RELATED ARTICLES

Latest News