ಬೆಂಗಳೂರು,ಏ.24- ಪ್ರಸಕ್ತ ಲೋಕಸಭಾ ಚುನಾವಣೆಗೆ ಮತದಾನ ಮಾಡುವ ದಿನ ಹತ್ತಿರವಾಗುತ್ತಿದ್ದಂತೆಯೇ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ನಗದು, ಮದ್ಯ, ಡ್ರಗ್ಸ್, ಚಿನ್ನ, ವಜ್ರ, ಉಚಿತ ಉಡುಗೊರೆಗಳ ಜಪ್ತಿಯಾಗುತ್ತಿದೆ. ನಿನ್ನೆ ಒಂದೇ ದಿನ 23.88 ಕೋಟಿ ರೂ. ಮೌಲ್ಯದ ನಗದು ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಮಾದರಿ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ನಿನ್ನೆಯವರೆಗೆ ರಾಜ್ಯದಲ್ಲಿ 430.61 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಪೊಲೀಸ್ ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು 136.23 ಕೋಟಿ ರೂ. ಮೌಲ್ಯದ ನಗದು, ಮದ್ಯ, ಡ್ರಗ್ಸ್, ಚಿನ್ನ, ಬೆಳ್ಳಿ ಹಾಗೂ ಉಚಿತ ಉಡುಗೊರೆಗಳನ್ನು ವಶಪಡಿಸಿಕೊಂಡಿದೆ. ಅಬಕಾರಿ ಇಲಾಖೆಯವರು 177.12 ಕೋಟಿ ರೂ. ಮೌಲ್ಯದ ಮದ್ಯ, ಡ್ರಗ್ಸ್, ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದರೆ ಆದಾಯ ತೆರಿಗೆ ಅಧಿಕಾರಿಗಳು 37.42 ಕೋಟಿ ರೂ. ಮೌಲ್ಯದ ನಗದು, ಚಿನ್ನ, ವಜ್ರದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಾಣಿಜ್ಯ ತೆರಿಗೆ ಅಧಿಕಾರಿಗಳು 79.84 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ, ಉಚಿತ ಉಡುಗೊರೆ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾದ ನಗದು, ಮದ್ಯ, ಉಚಿತ ಉಡುಗೊರೆ ಹಾಗೂ ಇತರೆ ವಸ್ತುಗಳಿಗೆ ಸಂಬಂಧಿಸಿದಂತೆ 2,049 ಎಫ್‍ಐಆರ್‍ಗಳನ್ನು ದಾಖಲಿಸಲಾಗಿದ್ದು, 1,801 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಜಯನಗರ ಅಡಗಲಿ ಪೊಲೀಸ್ ತಂಡದವರು 12.17 ಲಕ್ಷ ರೂ. ನಗದು, 2.50 ಲಕ್ಷ ರೂ. ಮೌಲ್ಯದ 28.5 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
23.88 ಕೋಟಿ ರೂ. ಮೌಲ್ಯದ ಚಿನ್ನ, ವಜ್ರ, ನಗದು ವಶ :
ಸ್ಥಿರ ಕಣ್ಗಾವಲು ತಂಡದವರು ರಾಮನಗರ ಜಿಲ್ಲೆಯ ಗಂಟಕನದೊಡ್ಡಿ ಚೆಕ್‍ಪೋಸ್ಟ್ ನಲ್ಲಿ 23.11 ಲಕ್ಷ ರೂ. ಹಾಗೂ ಮೈಸೂರು ಜಿಲ್ಲೆಯ ಚಾಮರಾಜನಗರ ಲೋಕಸಭಾ ಕ್ಷೇತ್ರದ ಮಡವಾಡಿ ಚೆಕ್ ಪೋಸ್ಟ್ ನಲ್ಲಿ 13.18 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಆದಾಯ ತೆರಿಗೆ ಇಲಾಖೆಯವರು ಬಸವನಗುಡಿಯಲ್ಲಿ 1,29,24,959 ರೂ. ಮೌಲ್ಯದ 1839.59 ಗ್ರಾಂ ಚಿನ್ನವನ್ನು ಶಂಕರಪುರಂನಲ್ಲಿ 3,10,10,375 ರೂ. ಮೌಲ್ಯದ 4413.66 ಗ್ರಾಂ ಚಿನ್ನ, ಶಾರದಾದೇವಿ ರಸ್ತೆಯಲ್ಲಿ 3,39,60,360 ರೂ. ಮೌಲ್ಯದ 4833.527 ಗ್ರಾಂ ಚಿನ್ನವನ್ನು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,13,64,941 ರೂ. ಮೌಲ್ಯದ 3040.84 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದೆ.
ವಿಜಯನಗರದಲ್ಲಿ 5,33,85,093 ರೂ. ಮೌಲ್ಯದ 7597.22 ಗ್ರಾಂ ಚಿನ್ನ, ಚಾಮರಾಜಪೇಟೆಯಲ್ಲಿ 84,31,200 ರೂ. ಮೌಲ್ಯದ 1200 ಗ್ರಾಂ ಚಿನ್ನದ ಗಟ್ಟಿಯನ್ನು ಹಾಗೂ ಬಸವನಗುಡಿಯಲ್ಲಿ 3,24,950 ರೂ. ಮೌಲ್ಯದ 6.38 ಕ್ಯಾರೆಟ್ ವಜ್ರವನ್ನು, ಶಾರದಾದೇವಿ ರಸ್ತೆಯಲ್ಲಿ 3,14,475 ರೂ. ಮೌಲ್ಯದ 5.99 ಕ್ಯಾರೆಟ್ ವಜ್ರವನ್ನು, ಜಯನಗರದಲ್ಲಿ 6,40,33,668 ರೂ. ಮೌಲ್ಯದ 202.83 ಕ್ಯಾರೆಟ್ ವಜ್ರವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬಸವನಗುಡಿಯಲ್ಲಿ 17 ಲಕ್ಷ ರೂ. ನಗದು, ಶಂಕರಪುರಂನಲ್ಲಿ 55 ಲಕ್ಷ ರೂ. ನಗದು, ಶಾರದಾದೇವಿ ರಸ್ತೆಯಲ್ಲಿ 16 ಲಕ್ಷ ರೂ. ನಗದು, ಜಯನಗರದಲ್ಲಿ 8,77,800 ರೂ. ನಗದು, 37 ಲಕ್ಷ ರೂ. ನಗದನ್ನು ಬಸವನಗುಡಿಯಲ್ಲಿ ವಶಪಡಿಸಿಕೊಂಡಿದ್ದಾರೆ.ಪುಲಕೇಶಿ ನಗರದಲ್ಲಿ 3,67,50,000 ರೂ. ನಗದು, ಮಹಾಲಕ್ಷ್ಮಿ ಲೇ ಔಟ್‍ನಲ್ಲಿ 63,92,240 ರೂ. ನಗದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆಂದು ಪ್ರಕಟಣೆ ತಿಳಿಸಿದೆ.