Tuesday, December 23, 2025
Homeರಾಜ್ಯಬ್ರೆಡ್‌ನಲ್ಲಿಟ್ಟು ಮುಂಬೈನಿಂದ ಬೆಂಗಳೂರಿಗೆ ಡ್ರಗ್ಸ್ ಸಾಗಿಸುತ್ತಿದ್ದ ನೈಜೀರಿಯಾ ಮಹಿಳೆ ಬಂಧನ

ಬ್ರೆಡ್‌ನಲ್ಲಿಟ್ಟು ಮುಂಬೈನಿಂದ ಬೆಂಗಳೂರಿಗೆ ಡ್ರಗ್ಸ್ ಸಾಗಿಸುತ್ತಿದ್ದ ನೈಜೀರಿಯಾ ಮಹಿಳೆ ಬಂಧನ

Nigerian woman arrested for transporting drugs from Mumbai to Bengaluru in bread

ಬೆಂಗಳೂರು,ಡಿ.23- ಬ್ರೆಡ್‌ ಒಳಗೆ ಮಾದಕ ವಸ್ತುವನ್ನು ಪ್ಯಾಕ್‌ಮಾಡಿ ಯಾರಿಗೂ ಅನುಮಾನ ಬಾರದಂತೆ ಮುಂಬೈನಿಂದ ಸಾಗಣೆ ಮಾಡಿಕೊಂಡು ಖಾಸಗಿ ಟ್ರಾವೆಲ್ಸ್ ಬಸ್‌‍ನಲ್ಲಿ ನಗರಕ್ಕೆ ಬಂದಿದ್ದ ನೈಜೀರಿಯಾ ದೇಶದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 1.20 ಕೋಟಿ ರೂ. ಮೌಲ್ಯದ ಕೊಕೇನ್‌ ವಶಪಡಿಸಿಕೊಂಡಿದ್ದಾರೆ.

ನೈಜೀರಿಯಾದ ಓಲಜೈಡ್‌ ಎಸ್ತರ್‌ ಇಯಾನುವೊಲುವಾ (29) ಬಂಧಿತ ಮಹಿಳೆ. 2024 ರಲ್ಲಿ ದೆಹಲಿಯ ಯೂನಿವರ್ಸಿಟಿಯೊಂದರಲ್ಲಿ ವ್ಯಾಸಂಗ ಮಾಡುವುದಾಗಿ ವಿದ್ಯಾರ್ಥಿ ವೀಸಾ ಪಡೆದು ದೆಹಲಿಗೆ ಬಂದಿರುವ ಈ ಮಹಿಳೆ, ಕಾಲೇಜಿಗೆ ದಾಖಲಾಗದೇ ಮುಂಬೈನ ಗಾಲಾನಗರ, ಅಂಬವಾಡಿ, ನಲ್ಲಾಸೋಪ್ರಾ ಕಡೆಗಳಲ್ಲಿ ವಾಸವಾಗಿದ್ದುಕೊಂಡು, ಮುಂಬೈನಲ್ಲಿದ್ದ ಆಕೆಯ ಸ್ನೇಹಿತನು ನೀಡಿದ ಕೊಕೇನ್‌ ಅನ್ನು ಪಡೆದುಕೊಂಡು, ಆತನು ಹೇಳಿದ ಸ್ಥಳಗಳಿಗೆ ಸಾಗಣೆ ಮಾಡಿ ಡ್ರಗ್‌ಪೆಡ್ಲಿಂಗ್‌ ಮಾಡುವ ಕೃತ್ಯದಲ್ಲಿ ತೊಡಗಿಕೊಂಡು ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದಳು.

ಈಕೆಯು ಮುಂಬೈನಿಂದ ಬೆಂಗಳೂರಿಗೆ ಬರುವ ಖಾಸಗಿ ಬಸ್‌‍ಗಳಲ್ಲಿ ಪ್ರಯಾಣಿಸಿ ಕೊಕೇನ್‌ನ್ನು ಬ್ರೆಡ್‌ ಮಧ್ಯೆ ಕತ್ತರಿಸಿ ಮಾದಕ ವಸ್ತುವನ್ನು ಇಟ್ಟುಕೊಂಡು ಯಾರಿಗೂ ಅನುಮಾನ ಬಾರದಂತೆ ಕವರ್‌ಪ್ಯಾಕ್‌ಮಾಡಿ ಸಾಗಣೆ ಮಾಡುತ್ತಿದ್ದಳು.ವರ್ತೂರು ಪೊಲೀಸ್‌‍ ಠಾಣಾ ವ್ಯಾಪ್ತಿಯ ಗ್ರೀಸ್‌‍ ಟ್ರಸ್ಟ್‌ನಲ್ಲಿ ವಾಸವಾಗಿದ್ದ ಈ ಮಹಿಳೆ ತನ್ನ ಸ್ನೇಹಿತೆ ಮನೆಗೆ ಆಗಾಗ್ಗೆ ಬ್ರೆಡ್‌ನಲ್ಲಿ ಕೊಕೇನ್‌ ಬಚ್ಚಿಟ್ಟುಕೊಂಡು ಬರುತ್ತಿದ್ದಳು.

ಇತ್ತೇಚೆಗೆ ಸ್ನೇಹಿತೆ ಮನೆಗೆ ಹೋದಾಗ ಬೀಗ ಹಾಕಿತ್ತು. ಬೀಗ ತೆಗೆದು ಒಳಗೆ ಹೋದಾಗ ಆಕೆಯ ಬಳಿ ಕೊಕೇನ್‌ ಇರುವುದು ಗೊತ್ತಾಗಿದೆ. ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಈ ವಿದೇಶಿ ಮಹಿಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, 121 ಗ್ರಾಂ ಕೊಕೇನ್‌ ಹಾಗೂ ಮೊಬೈಲ್‌ ವಶಪಡಿಸಿಕೊಂಡಿದ್ದು, ಇದರ ಮೌಲ್ಯ 1.20 ಕೋಟಿ ರೂಗಳೆಂದು ಅಂದಾಜಿಸಲಾಗಿದೆ.

ಈಕೆಯ ಸ್ನೇಹಿತೆಯೂ ಇದರಲ್ಲಿ ಭಾಗಿಯಾಗಿದ್ದಾರೆಯೇ, ಮಾದಕ ವಸ್ತುವನ್ನು ವಿದೇಶಿ ಮಹಿಳೆ ಯಾರಿಗೆ ತಂದು ಕೊಡುತ್ತಿದ್ದರು ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಈಕೆಯ ವಿರುದ್ದ ಕಾನೂನು ಕ್ರಮಕ್ಕಾಗಿ ವರ್ತೂರು ಪೊಲೀಸ್‌‍ ಠಾಣೆಯಲ್ಲಿ ಎನ್‌ಡಿಪಿಎಸ್‌‍ ಪ್ರಕರಣ ದಾಖಲಾಗಿದೆ.

ಈ ಕಾರ್ಯಾಚರಣೆಯನ್ನು ನಗರದ ಪೊಲೀಸ್‌‍ ಆಯುಕ್ತರಾದ ಸೀಮಾಂತ್‌ಕುಮಾರ್‌ ಸಿಂಗ್‌ ಅವರ ಮಾರ್ಗದರ್ಶನದಲ್ಲಿ, ಜಂಟಿ ಪೊಲೀಸ್‌‍ ಆಯುಕ್ತ ಅಜಯ್‌ ಹಿಲೋರಿ, ಉಪ ಪೊಲೀಸ್‌‍ ಅಪರಾಧ-2 ರಾಜಾ ಇಮಾಮ್‌ ಕಾಸಿಂ ಅವರ ಮೇಲ್ವಿಚಾರಣೆಯಲ್ಲಿ, ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಎಸಿಪಿ ಮಹಾನಂದ್‌ ರವರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್‌ ರಕ್ಷಿತ್‌ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.

RELATED ARTICLES

Latest News