Friday, November 22, 2024
Homeರಾಷ್ಟ್ರೀಯ | Nationalರಾಹುಲ್ ಗಾಂಧಿ, ಮೋದಿಗೆ ಚುನಾವಣಾ ಆಯೋಗ ನೋಟಿಸ್

ರಾಹುಲ್ ಗಾಂಧಿ, ಮೋದಿಗೆ ಚುನಾವಣಾ ಆಯೋಗ ನೋಟಿಸ್

ಬೆಂಗಳೂರು,ಏ.25- ದೇಶ ಮತ್ತು ವಿಭಜನೆ ಆಧಾರದ ಮೇಲೆ ಮತ ಯಾಚನೆ ಮಾಡಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸ್ಪಷ್ಟನೆ ಕೇಳಿ ಚುನಾವಣಾ ಆಯೋಗ ಪ್ರಧಾನಿ ನರೇಂದ್ರಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದೆ.

ಇದೇ ತಿಂಗಳ 29ರ ಒಳಗೆ ನಮ್ಮ ನೋಟಿಸ್ಗೆ ಸ್ಪಷ್ಟನೆ ನೀಡಬೇಕೆಂದು ಚುನಾವಣಾ ಆಯೋಗ ನೀಡಿರುವ ನೋಟೀಸ್ನಲ್ಲಿ ಪ್ರಧಾನಿ ನರೇಂದ್ರಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸೂಚನೆ ನೀಡಿದೆ. ರಾಹುಲ್ ಗಾಂಧಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಬಿಜೆಪಿ ಆಯೋಗಕ್ಕೆ ದೂರು ನೀಡಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಕೂಡ ಪ್ರಧಾನಿ ಮೋದಿ ವಿರುದ್ಧವೂ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಹಿನ್ನಲೆಯಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ಪ್ರತಿ ದೂರು ದಾಖಲಿಸಿತ್ತು.

ಎರಡೂ ಕಡೆಯಿಂದ ಬಂದ ದೂರುಗಳನ್ನು ಪರಿಶೀಲಿಸಿದ ಆಯೋಗ ಉಭಯ ನಾಯಕರಿಗೆ ಸ್ಪಷ್ಟನೆ ಕೇಳಿ ನೋಟಿಸ್ ಜಾರಿ ಮಾಡಿದೆ. ಪ್ರಧಾನಿ ಮೋದಿಯವರು ಕಳೆದ ಒಂದು ವಾರದಿಂದ ಉತ್ತರ ಭಾರತದ ರಾಜ್ಯಗಳಾದ ರಾಜಸ್ಥಾನ, ಛತ್ತೀಸ್ಗಢ, ಉತ್ತರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಮತ್ತಿತರ ಕಡೆ ಪ್ರಚಾರ ನಡೆಸುವ ವೇಳೆ ಕಾಂಗ್ರೆಸ್ನಿಂದ ಒಂದು ಸಮುದಾಯವನ್ನು ಓಲೈಕೆ ಮಾಡುವ ತುಷ್ಟೀಕರಣ ನಡೆಯುತ್ತಿದೆ ಎಂದು ಆರೋಪಿಸಿದ್ದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಎಸ್ಸಿ-ಎಸ್ಟಿ , ಓಬಿಸಿ, ಆದಿವಾಸಿ, ಬುಡಕಟ್ಟು ಸೇರಿದಂತೆ ಮತ್ತಿತರ ಸಮುದಾಯಗಳಿಗೆ ನೀಡುತ್ತಿರುವ ಮೀಸಲಾತಿ ಕಿತ್ತುಕೊಂಡು ಅಲ್ಪಸಂಖ್ಯಾತರಿಗೆ ನೀಡುವ ಹುನ್ನಾರ ನಡೆದಿದೆ ಎಂದು ಮೋದಿಯವರು ವಾಗ್ದಾಳಿ ನಡೆಸಿದ್ದರು.

ಒಂದು ಹಂತದಲ್ಲಿ ಹೆಚ್ಚು ಮಕ್ಕಳನ್ನು ಹೆರುವವರು ಅಧಿಕಾರಕ್ಕೆ ಬಂದರೆ ನಮ್ಮ ಮಹಿಳೆಯರ ಮಾಂಗಲ್ಯವು ಕೂಡ ಇರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದರು. ಒಳನುಸುಳುವವರಿಗೆ ಮೀಸಲಾತಿಯನ್ನು ಕೊಡಲು ಕಾಂಗ್ರೆಸ್ ಹುನ್ನಾರ ನಡೆಸಿದೆ ಎಂಬುದು ಮೋದಿಯವರ ಆರೋಪವಾಗಿತ್ತು. ಚುನಾವಣಾ ಆಯೋಗಕ್ಕೆ ಮೋದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ದೂರು ಕೊಟ್ಟಿತ್ತು.

ಬಿಜೆಪಿ ಪ್ರತಿ ದೂರು:
ಕಾಂಗ್ರೆಸ್ನ ದೂರಿಗೆ ಬಿಜೆಪಿ ಪ್ರತಿದೂರು ನೀಡಿತ್ತು. ಹೈದರಾಬಾದ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾಷಣದ ತುಣುಕುಗಳನ್ನು ಸಾಕ್ಷಿಯನ್ನಾಗಿ ಪರಿಗಣಿಸಬೇಕೆಂದು ದೂರು ಕೊಟ್ಟಿತ್ತು. ಅಂದರೆ ರಾಹುಲ್ ಗಾಂಧಿ ಅವರು ದೇಶದ ಸಂಪತ್ತು ಕೆಲವೇ ವ್ಯಕ್ತಿಗಳ ಬಳಿ ಇದೆ. ನಾವು ಪ್ರತಿಯೊಂದನ್ನು ಎಕ್ಸ್ ರೇ ಹಾಕಿ ತನಿಖೆ ನಡೆಸಿ ಸಂಪತ್ತನ್ನು ಮರು ಹಂಚಿಕೆ ಮಾಡುತ್ತೇವೆ ಎಂದು ಹೇಳಿದ್ದರು.

ರಾಹುಲ್ ಗಾಂಧಿಯವರ ಹೇಳಿಕೆ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ದೂರು ನೀಡಿತ್ತು. ಎರಡೂ ಕಡೆ ದೂರುಗಳನ್ನು ಪರಿಶೀಲಿಸಿದ ಆಯೋಗ ಮೋದಿ ಮತ್ತು ರಾಹುಲ್ ಗಾಂಧಿ ಅವರಿಗೆ ಸ್ಪಷ್ಟನೆ ಕೇಳಿ 29ರೊಳಗೆ ಉತ್ತರ ನೀಡಬೇಕೆಂದು ನೋಟಿಸ್ ಜಾರಿ ಮಾಡಿದೆ.

RELATED ARTICLES

Latest News