ಚೆನ್ನೈ, ನ.27- ಕಟ್ಟಾ ವಿರೋಧಿಗಳಾಗಿದ್ದ ಡಿಎಂಕೆ ಬಿಜೆಪಿ ನಡುವೆ ಮೈತ್ರಿ ಸಿದ್ಧತೆ ನಡೆದಿದೆ ಎಂದು ಆಡಳಿತಾರೂಢ ಟಿವಿಕೆ ಪಕ್ಷ ಆರೋಪಿಸಿದೆ. ಡಿಎಂಕೆ ತನ್ನ ಸೈದ್ಧಾಂತಿಕ ನಿಲುವನ್ನು ಕೈಬಿಡುತ್ತಿದೆ ಎಂದು ಆರೋಪಿಸಿರುವ ಟಿವಿಕೆ ಪಕ್ಷ ಮಾಜಿ ಮುಖ್ಯಮಂತ್ರಿ ಹಾಗೂ ದ್ರಾವಿಡ ಚಳವಳಿಯ ಪ್ರಮುಖ ನಾಯಕ ಅಣ್ಣಾದೊರೈ ಅವರ ಪ್ರಸಿದ್ಧ ಹೇಳಿಕೆಯನ್ನು ಉಲ್ಲೇಖಿಸಿ ಟೀಕಿಸಿದೆ. ಆಡಿಗೆ ಗಡ್ಡವಿದ್ದರೆ ಏನು ಪ್ರಯೋಜನ? ದೇಶಕ್ಕೆ ರಾಜ್ಯಪಾಲರಿದ್ದರೆ ಏನು ಪ್ರಯೋಜನ? ಎಂಬ ಅಣ್ಣಾದೊರೈ ಅವರ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಟಿವಿಕೆ ಡಿಎಂಕೆ ಪಕ್ಷದ ವಿರುದ್ಧ ಹರಿಹಾಯ್ದಿದೆ.
ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನ ಭೇಟಿಯಾದ ಬೆನ್ನಲ್ಲೇ ಟಿವಿಕೆ ಈ ವಾಗ್ದಾಳಿ ನಡೆಸಿದೆ. ಈ ಭೇಟಿಯು ಡಿಎಂಕೆ ಬಿಜೆಪಿಯತ್ತ ಒಲವು ತೋರುತ್ತಿರುವುದರ ಸೂಚನೆ ಎಂದು ಟಿವಿಕೆ ವ್ಯಾಖ್ಯಾನಿಸಿದೆ. ಮಹಾನ್ ವಿದ್ವಾಂಸ ಅಣ್ಣಾ ಅವರ ಡಿಎಂಕೆಯನ್ನು ನುಂಗಿಹಾಕಿ, ಅದನ್ನು ಕುಟುಂಬದ ಪಕ್ಷವನ್ನಾಗಿ ಪರಿವರ್ತಿಸಿರುವ ಮಣ್ಣಿನ ಗೊಂಬೆಗಳ ವಂಶಸ್ಥರು, ರಾಜ್ಯಪಾಲರೊಂದಿಗಿನ ಇಂದಿನ ಭೇಟಿಯ ಮೂಲಕ ತಮ್ಮ ಸೈದ್ಧಾಂತಿಕ ಬದ್ಧತೆಯ ಬಗ್ಗೆ ವೇದಿಕೆ ವೇದಿಕೆಗಳಲ್ಲಿ ಮಾಡುತ್ತಿರುವ ದೊಡ್ಡ ದೊಡ್ಡ ಹೇಳಿಕೆಗಳೆಲ್ಲವೂ ಕೇವಲ ಬೂಟಾಟಿಕೆ ಎಂಬುದನ್ನ ಸಾಬೀತುಪಡಿಸಿದ್ದಾರೆ ಎಂದು ಎಕ್್ಸ ಮಾಡಲಾಗಿದೆ.
ತಾವು ಅಧಿಕಾರದಲ್ಲಿದ್ದಾಗ ರಾಜ್ಯಪಾಲರು ಮಾತನಾಡದಂತೆ ತಡೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವರು, ಈಗ ಅದೇ ರಾಜ್ಯಪಾಲರ ಕಾಲಿಗೆ ಬಿದ್ದು, ಕಷ್ಟದ ಸಮಯದಲ್ಲಿ ನಮ್ಮನ್ನು ಕಾಪಾಡುವ ರಕ್ಷಕ ಎಂದು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದೆ. ಇದಲ್ಲದೆ, ಡಿಎಂಕೆ ಮುಖವಾಣಿ ಮುರಸೋಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರ ಸಂದರ್ಶನ ಪ್ರಕಟವಾಗಿದೆ ಎಂದು ಟೀಕಿಸಿದೆ.
ತಮಿಳುನಾಡಿನಲ್ಲಿ ಬಿಜೆಪಿಯನ್ನು ಬೆಳೆಸುವ ಹೊಣೆಗಾರಿಕೆಯನ್ನ ಡಿಎಂಕೆ ವಹಿಸಿಕೊಳ್ಳಲು ಮುಂದಾಗಿದೆ. ಫ್ಯಾಸಿಸ್ಟ್ಗಳ ಸಿದ್ಧಾಂತವನ್ನು ಸ್ವೀಕರಿಸಲು ಸಿದ್ಧರಾಗಿರುವವರ ನಡುವೆ, ಮಣ್ಣಿನ ಗೊಂಬೆಗಳ ವಂಶಸ್ಥರು ಕನಿಷ್ಠ ಪಕ್ಷ ಯಾವುದಾದರೂ ಒಂದು ಸಿದ್ಧಾಂತವಿರಲಿ, ಇಲ್ಲವೇ ಎಲೆಮರೆ ಕಾಯಿಯಂತಾದರೂ ಇರಲಿ ಎಂಬ ಮನಸ್ಥಿತಿಯಲ್ಲಿದ್ದಾರೆ. ಹಿಂದಿನಂತೆ ಈಗಲೂ ತಮಿಳುನಾಡಿನಲ್ಲಿ ಬಿಜೆಪಿಯನ್ನ ಬೆಳೆಸುವ ಕೆಲಸಕ್ಕೆ ಡಿಎಂಕೆಯೇ ಮುಂದಾಗುವಂತಿದೆ. ಡಿಎಂಕೆ ಒಂದು ದುಷ್ಟ ಶಕ್ತಿ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿರುವ ಆ ಪಕ್ಷದ ಕುಟುಂಬ ರಾಜಕಾರಣಕ್ಕೆ ಅಭಿನಂದನೆಗಳು ಎಂದು ಟಿವಿಕೆ ತನ್ನ ಹೇಳಿಕೆಯಲ್ಲಿ ಆಕ್ರೋಶ ಹೊರಹಾಕಿದೆ.
