ಬೆಂಗಳೂರು,ನ. 27- ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ವಿವಿಧ ವಿಷಯಗಳ ಒಟ್ಟು 814 ಉಪನ್ಯಾಸಕರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಡಿಸೆಂಬರ್ 25 ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಡಿಸೆಂಬರ್ 26 ಕೊನೆ ದಿನ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಟ್ಟು ಉಪನ್ಯಾಸಕರ ಹುದ್ದೆಗಳಲ್ಲಿ ಉಳಿಕೆ ಮೂಲ ವೃಂದದ 778 ಹಾಗೂ ಕಲ್ಯಾಣ ಕರ್ನಾಟಕ ವೃಂದದ 36 ಹುದ್ದೆಗಳು ಸೇರಿವೆ ಎಂದು ಅವರು ವಿವರಿಸಿದ್ದಾರೆ. ಸ್ನಾತಕೋತ್ತರ ಪದವಿ ಜತೆಗೆ ಬಿ.ಇಡಿ ಮಾಡಿರುವವರು ಅರ್ಜಿ ಸಲ್ಲಿಸಲು ಅರ್ಹರು. ಮಾರ್ಚ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಕನ್ನಡ ವಿಷಯದಲ್ಲಿ 89 ಹುದ್ದೆ ಭರ್ತಿಗೆ ಅರ್ಜಿ ಕರೆಯಲಾಗಿದೆ. ಹಾಗೆಯೇ ಇಂಗ್ಲಿಷ್- 145, ಇತಿಹಾಸ- 50, ಅರ್ಥಶಾಸ್ತ್ರ- 90, ರಾಜ್ಯಶಾಸ್ತ್ರ- 25, ಸಮಾಜಶಾಸ್ತ್ರ- 25, ಭೂಗೋಳ ಶಾಸ್ತ್ರ- 10, ವಾಣಿಜ್ಯ ಶಾಸ್ತ್ರ- 150, ಭೌತಶಾಸ್ತ್ರ- 30, ರಸಾಯನಶಾಸ್ತ್ರ- 30, ಗಣಿತ- 30, ಜೀವಶಾಸ್ತ್ರ- 30, ಕಂಪ್ಯೂಟರ್ ಸೈನ್ಸ್- 110 ಹುದ್ದೆಗಳಿಗೆ ಅರ್ಜಿ ಕರೆದಿದ್ದು, ಅರ್ಹರು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ. ಶೈಕ್ಷಣಿಕ ಅರ್ಹತೆ ಸೇರಿದಂತೆ ಇತರ ಹೆಚ್ಚಿನ ವಿವರಗಳಿಗೆ ಕೆಇಎ ವೆಬ್ ಸೈಟ್ ನೋಡಲು ಪ್ರಸನ್ನ ಅವರು ಸಲಹೆ ನೀಡಿದ್ದಾರೆ.
KEA for Recruitment PU Lecturers
