Homeರಾಜ್ಯಮೈತ್ರಿಗೆ ದೀರ್ಘಾಯುಷ್ಯದ ಮುದ್ರೆ ಒತ್ತಲು ಬಿಜೆಪಿ-ಜೆಡಿಎಸ್ ಮಾಸ್ಟರ್ ಪ್ಲಾನ್!

ಮೈತ್ರಿಗೆ ದೀರ್ಘಾಯುಷ್ಯದ ಮುದ್ರೆ ಒತ್ತಲು ಬಿಜೆಪಿ-ಜೆಡಿಎಸ್ ಮಾಸ್ಟರ್ ಪ್ಲಾನ್!

ಬೆಂಗಳೂರು,ನ.27-ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಕೇವಲ ಚುನಾವಣಾ ಹೊಂದಾಣಿಕೆಗೆ ಸೀಮಿತಗೊಳಿಸದೆ ದೀರ್ಘಕಾಲದ ರಾಜಕೀಯ ಶಕ್ತಿಯಾಗಿ ರೂಪಿಸುವ ನಿಟ್ಟಿನಲ್ಲಿ ಎನ್ಡಿಎ ನಾಯಕರು ಮಹತ್ವದ ಕಾರ್ಯತಂತ್ರ ರೂಪಿಸಿದ್ದಾರೆ. ಮೈತ್ರಿಯೊಳಗಿನ ಗೊಂದಲ, ನಾಯಕರು ಮತ್ತು ಕಾರ್ಯಕರ್ತರ ನಡುವಿನ ಸಮನ್ವಯದ ಕೊರತೆ ಹಾಗೂ ಸ್ಥಳೀಯ ಮಟ್ಟದಲ್ಲಿ ಎದುರಾಗುತ್ತಿರುವ ಭಿನ್ನಾಭಿಪ್ರಾಯಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಎರಡೂ ಪಕ್ಷಗಳು ಸಂಘಟನಾತಕವಾಗಿ ಒಂದಾಗಲು ಮುಂದಾಗಿವೆ.

ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಮೈತ್ರಿಯನ್ನು ಮತ್ತಷ್ಟು ಬಲಪಡಿಸುವ ಸಂಬಂಧ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಮುಂಬರುವ ಉಪಚುನಾವಣೆಗಳು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮೈತ್ರಿ ಪಕ್ಷಗಳ ನಡುವೆ ಸಮನ್ವಯ ಸಾಧಿಸುವುದಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಇದರೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ಜಂಟಿ ಹೋರಾಟ ರೂಪಿಸುವ ಮೂಲಕ ಚುನಾವಣಾ ಸಿದ್ಧತೆಗೆ ಅಧಿಕೃತ ಚಾಲನೆ ನೀಡುವ ಉದ್ದೇಶವೂ ಮೈತ್ರಿ ನಾಯಕರಲ್ಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಮೇಲಟ್ಟದ ನಾಯಕರು ಒಟ್ಟಾಗಿರುವುದಷ್ಟೇ ಸಾಕಾಗುವುದಿಲ್ಲ. ತಳಮಟ್ಟದ ಕಾರ್ಯಕರ್ತರು, ಸ್ಥಳೀಯ ಮುಖಂಡರ ನಡುವೆ ಪರಸ್ಪರ ವಿಶ್ವಾಸ -ಸಹಕಾರ ಇರಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ರಾಜ್ಯಮಟ್ಟದ ಸಮನ್ವಯ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಎರಡೂ ಪಕ್ಷಗಳ ಪ್ರಮುಖ ನಾಯಕರು ಈ ಸಮಿತಿಯಲ್ಲಿ ಸ್ಥಾನ ಪಡೆಯಲಿದ್ದು, ಮೈತ್ರಿಗೆ ಸಂಬಂಧಿಸಿದ ಪ್ರಮುಖ ರಾಜಕೀಯ ಹಾಗೂ ಸಂಘಟನಾತಕ ನಿರ್ಧಾರಗಳನ್ನು ಸಮನ್ವಯದ ಮೂಲಕ ಕೈಗೊಳ್ಳುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಮುಂದುವರಿದ ಭಾಗವಾಗಿ ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿಯೂ ಸಮನ್ವಯ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಗಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಎದುರಾಗುವ ಭಿನ್ನಾಭಿಪ್ರಾಯಗಳನ್ನು ತಕ್ಷಣವೇ ಬಗೆಹರಿಸುವುದರ ಜತೆಗೆ, ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳ ಪರವಾಗಿ ಎರಡೂ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವ ವಾತಾವರಣ ನಿರ್ಮಿಸಲು ಸಾಧ್ಯವಾಗಲಿದೆ ಎಂಬ ಲೆಕ್ಕಾಚಾರವಿದೆ.

ವಿಶೇಷವಾಗಿ ಬಿಜೆಪಿ ಮತ್ತು ಜೆಡಿಎಸ್ ಪ್ರತ್ಯೇಕ ರಾಜಕೀಯ ನೆಲೆ ಹೊಂದಿರುವ ಪ್ರದೇಶಗಳಲ್ಲಿ ಕಾರ್ಯಕರ್ತರ ನಡುವಿನ ಹೊಂದಾಣಿಕೆ ಮೈತ್ರಿಯ ಯಶಸ್ಸಿಗೆ ನಿರ್ಣಾಯಕವಾಗಲಿದೆ. ಹೀಗಾಗಿ ಸಮನ್ವಯ ಸಮಿತಿಗಳ ರಚನೆಯು ಕೇವಲ ಆಡಳಿತಾತಕ ನಿರ್ಧಾರವಲ್ಲ; ಮೈತ್ರಿಯನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸುವ ರಾಜಕೀಯ ಪ್ರಯತ್ನವೂ ಆಗಿದೆ.

ಜಿಬಿಜೆ ಚುನಾವಣೆಗೆ ಪ್ರತ್ಯೇಕ ಕಾರ್ಯತಂತ್ರ : ರಾಜಧಾನಿ ಬೆಂಗಳೂರಿನ ರಾಜಕೀಯ ಮಹತ್ವವನ್ನು ಅರಿತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬಿಬಿಜೆ ಚುನಾವಣೆಯನ್ನೂ ಗಂಭೀರವಾಗಿ ಪರಿಗಣಿಸಿದ್ದಾರೆ. ಇದಕ್ಕಾಗಿ ವಲಯವಾರು ಸಮನ್ವಯ ಸಮಿತಿಗಳನ್ನು ರಚಿಸಲು ನಿರ್ಧರಿಸಿರುವುದು ಗಮನಾರ್ಹ. ಬೆಂಗಳೂರು ನಗರದಲ್ಲಿ ಬಿಜೆಪಿ ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಮತ್ತು ಸಂಘಟನಾತಕ ಶಕ್ತಿಯನ್ನು ಹೊಂದಿದ್ದರೆ, ಜೆಡಿಎಸ್ ಕೂಡ ಕೆಲವು ಪ್ರದೇಶಗಳಲ್ಲಿ ತನ್ನದೇ ಆದ ರಾಜಕೀಯ ಪ್ರಭಾವ ಹೊಂದಿದೆ. ಈ ಎರಡೂ ಶಕ್ತಿಗಳನ್ನು ಪರಸ್ಪರ ಪೂರಕವಾಗಿ ಬಳಸಿಕೊಳ್ಳುವ ಮೂಲಕ ಆಡಳಿತಾರೂಢ ಕಾಂಗ್ರೆಸ್ಗೆ ಸವಾಲೊಡ್ಡುವುದು ಮೈತ್ರಿಯ ಲೆಕ್ಕಾಚಾರವಾಗಿದೆ.

ವಲಯವಾರು ಸಮಿತಿಗಳು ರಚನೆಯಾದರೆ ಅಭ್ಯರ್ಥಿಗಳ ಆಯ್ಕೆ, ಸ್ಥಳೀಯ ಸಮಸ್ಯೆಗಳ ಗುರುತಿಸುವಿಕೆ, ಪ್ರಚಾರದ ರೂಪುರೇಷೆ ಮತ್ತು ಕಾರ್ಯಕರ್ತರ ಜವಾಬ್ದಾರಿ ಹಂಚಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಸಮನ್ವಯ ಸಾಧಿಸಲು ಅನುಕೂಲವಾಗಲಿದೆ.

ಅಮಿತ್ ಶಾ, ದೇವೇಗೌಡರಿಗೆ ಆಹ್ವಾನ!
ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ರಾಜ್ಯದಲ್ಲಿ ಬೃಹತ್ ಎನ್ಡಿಎ ಸಮಾವೇಶ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಈ ಸಮಾವೇಶವನ್ನು ಹಿರಿಯೂರಿನಲ್ಲೇ ನಡೆಸುವ ಮೂಲಕ ರಾಜ್ಯದ ಜನತೆಗೆ ಮತ್ತು ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶ ರವಾನಿಸಲು ಯೋಜಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಸಮಾವೇಶಕ್ಕೆ ಆಹ್ವಾನಿಸಲು ತೀರ್ಮಾನಿಸಲಾಗಿದೆ.

RELATED ARTICLES

Latest News