Homeರಾಷ್ಟ್ರೀಯಮೇಕೆದಾಟು ಯೋಜನೆ ವಿಚಾರಣೆ: ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಮೇಕೆದಾಟು ಯೋಜನೆ ವಿಚಾರಣೆ: ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ,ನ. 27- ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ವಿರೋಧಿಸಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ, ತಮಿಳುನಾಡು ವಕೀಲರ ನಡೆಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪದೇ ಪದೇ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡುತ್ತಿರುವುದಕ್ಕೆ ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಪೀಠ ತಮಿಳುನಾಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಅರ್ಜಿ ವಿಚಾರಣೆಗೆ ಬಂದಾಗ ತಮಿಳುನಾಡು ಸರ್ಕಾರದ ಪರ ಹಿರಿಯ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅವರ ಅನುಪಸ್ಥಿತಿಯ ಕಾರಣ ನೀಡಿ ವಿಚಾರಣೆಯನ್ನು ಬೇರೊಂದು ದಿನಕ್ಕೆ ಮುಂದೂಡುವಂತೆ ತಮಿಳುನಾಡು ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಗರಂ ಆದ ನ್ಯಾ. ವಿಕ್ರಮ್ ನಾಥ್ ಅವರ ಪೀಠವು, “ಹಿಂದಿನ ವಿಚಾರಣೆಯಲ್ಲೂ ಇದೇ ನೆಪ ಹೇಳಿದ್ದೀರಿ. ಈ ಪ್ರಕರಣ ಬಹುತೇಕ ಮುಗಿದುಹೋಗಿದೆ. ಇಂತಹ ಮನವಿಗಳಿಂದ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಹೊರೆ ಮತ್ತಷ್ಟು ಹೆಚ್ಚುತ್ತಿದೆ” ಎಂದು ಕಟುವಾಗಿ ಟೀಕಿಸಿತು. ಇತ್ತೀಚೆಗಷ್ಟೇ ಇದೇ ಪೀಠವು, ಕಾವೇರಿ ನೀರಿನ ಕೊರತೆಯನ್ನು ತುಂಬಿಕೊಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತ್ತು. ಆ ಸಂದರ್ಭದಲ್ಲೂ ಪದೇ ಪದೇ ಅರ್ಜಿಗಳನ್ನು ಸಲ್ಲಿಸುವ ಮೂಲಕ ರಾಜ್ಯವು ಸಾರ್ವಜನಿಕರ ಹಣವನ್ನು ವ್ಯರ್ಥ ಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿತ್ತು.

ಏನಿದು ಮೇಕೆದಾಟು ವಿವಾದ? :ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಸಮತೋಲನ ಜಲಾಶಯ ನಿರ್ಮಿಸಲು ಕರ್ನಾಟಕ ಸರ್ಕಾರ ಯೋಜಿಸಿದೆ. ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿದು ಸಮುದ್ರ ಸೇರುವ ನೀರನ್ನು ಸಂಗ್ರಹಿಸುವುದು, ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವುದು ಹಾಗೂ ಸುಮಾರು 400 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಜಲಾಶಯ ನಿರ್ಮಾಣವಾದರೆ ಕಾವೇರಿ ನೀರಿನ ಹರಿವಿನ ಮೇಲೆ ಕರ್ನಾಟಕಕ್ಕೆ ಸಂಪೂರ್ಣ ನಿಯಂತ್ರಣ ಸಿಗಲಿದೆ. ಇದರಿಂದ ಕಾವೇರಿ ಡೆಲ್ಟಾ ಭಾಗದ ಕೃಷಿ ಹಾಗೂ ರೈತರಿಗೆ ನೀರಿನ ಕೊರತೆ ಉಂಟಾಗಲಿದೆ ಎಂಬುದು ತಮಿಳುನಾಡು ಸರ್ಕಾರದ ಪ್ರಮುಖ ವಾದವಾಗಿದೆ.

ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರಿನ ಹಂಚಿಕೆ ವಿವಾದದ ಮತ್ತೊಂದು ಪ್ರಮುಖ ಅಧ್ಯಾಯವೇ ಮೇಕೆದಾಟು ಅಣೆಕಟ್ಟು ಯೋಜನೆ. ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮೇಕೆದಾಟು ಪ್ರದೇಶದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸಮತೋಲನ ಜಲಾಶಯ ನಿರ್ಮಿಸಲು ಕರ್ನಾಟಕ ಸರ್ಕಾರ ಉದ್ದೇಶಿಸಿದೆ.

ಈ ಯೋಜನೆಯಿಂದ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ನಗರ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿದುಹೋಗುವ ನೀರನ್ನು ಸಂಗ್ರಹಿಸುವುದು ಮತ್ತು ಸುಮಾರು 400 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸುವುದು ಕರ್ನಾಟಕದ ಉದ್ದೇಶವಾಗಿದೆ. ಆದರೆ, ಈ ಯೋಜನೆಗೆ ತಮಿಳುನಾಡು ಸರ್ಕಾರ ಆರಂಭದಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣವಾದರೆ ಕಾವೇರಿ ನದಿಯ ಕೆಳಹರಿವಿನ ನೀರಿನ ಪ್ರಮಾಣದ ಮೇಲೆ ಕರ್ನಾಟಕಕ್ಕೆ ಹೆಚ್ಚಿನ ನಿಯಂತ್ರಣ ಸಿಗಲಿದೆ. ಇದರಿಂದ ಕಾವೇರಿ ಡೆಲ್ಟಾ ಪ್ರದೇಶದ ಕೃಷಿ ಚಟುವಟಿಕೆಗಳಿಗೆ ಹಾಗೂ ರೈತರಿಗೆ ತೊಂದರೆಯಾಗಲಿದೆ ಎಂಬುದು ತಮಿಳುನಾಡಿನ ಪ್ರಮುಖ ವಾದವಾಗಿದೆ.

ಈ ಸಂಬಂಧ ತಮಿಳುನಾಡು ಸರ್ಕಾರ ವಿವಿಧ ಕಾನೂನು ವೇದಿಕೆಗಳಲ್ಲಿ ತನ್ನ ವಿರೋಧ ದಾಖಲಿಸಿದೆ. 2026ರ ಆಗಸ್ಟ್ 3ರಂದು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಜಲಶಕ್ತಿ ಸಚಿವಾಲಯದ ಮಾರ್ಗಸೂಚಿಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮತ್ತೊಂದು ಅರ್ಜಿಯನ್ನೂ ಸಲ್ಲಿಸಿದೆ. ತಮಿಳುನಾಡಿನ ವಿರೋಧದಿಂದಾಗಿ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ನಿರಂತರ ಕಾನೂನು ಮತ್ತು ಆಡಳಿತಾತ್ಮಕ ಸವಾಲುಗಳನ್ನು ಎದುರಿಸುತ್ತಿವೆ.ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಭವಿಷ್ಯದ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸುವ ದೃಷ್ಟಿಯಿಂದ ಈ ಯೋಜನೆಯನ್ನು ಕರ್ನಾಟಕ ಮಹತ್ವದ್ದಾಗಿ ಪರಿಗಣಿಸಿದೆ.

ಯೋಜನೆಯಿಂದ ಕೆಳಹರಿವಿನ ರಾಜ್ಯಕ್ಕೆ ನಿಗದಿಪಡಿಸಿರುವ ನೀರಿನ ಹಂಚಿಕೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂಬುದು ಕರ್ನಾಟಕದ ನಿಲುವು.ಮೇಕೆದಾಟು ವಿವಾದವು ಕೇವಲ ಅಣೆಕಟ್ಟು ನಿರ್ಮಾಣಕ್ಕೆ ಸೀಮಿತವಾಗಿಲ್ಲ. ಇದು ಕಾವೇರಿ ನೀರಿನ ಹಕ್ಕು, ಕುಡಿಯುವ ನೀರಿನ ಅಗತ್ಯ ಮತ್ತು ಕೃಷಿ ಹಿತಾಸಕ್ತಿಗಳ ನಡುವಿನ ಸಂಘರ್ಷವೂ ಆಗಿದೆ. ಯೋಜನೆಗೆ ತಡೆಯೊಡ್ಡಲು ಕಾನೂನು ಹೋರಾಟ ನಡೆಸುತ್ತಿರುವ ತಮಿಳುನಾಡು ಸರ್ಕಾರಕ್ಕೆ, ವಿಚಾರಣೆಯನ್ನು ವಿಳಂಬ ಮಾಡುತ್ತಿರುವ ಧೋರಣೆಯಿಂದಾಗಿ ಸುಪ್ರೀಂ ಕೋರ್ಟ್‌ನಿಂದ ತೀವ್ರ ಮುಖಭಂಗವಾಗಿದೆ.

RELATED ARTICLES

Latest News