ಬೆಂಗಳೂರು,ಏ.27- ಕಾರನ್ನು ಸುತ್ತುವರೆದ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿ 2 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ. ಕಲಬುರಗಿಯ ರೈಲು ನಿಲ್ದಾಣದ ಬಳಿ ಇಂದು ಬೆಳಿಗ್ಗೆ ಐಟಿ ಅಧಿಕಾರಿಗಳಿಗೆ ದೊರೆತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ರೈಲಿನಲ್ಲಿ ಬಂದು ಅಲ್ಲಿಯೇ ನಿಂತಿದ್ದ ಕಾರನ್ನು ಹತ್ತಿದ್ದಾರೆ.
ಇನ್ನೇನು ಕಾರು ಹೊರಡಬೇಕೆನ್ನುವಷ್ಟರಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಕಾರನ್ನು ಸುತ್ತುವರೆದು ಒಳಗೆ ಪರಿಶೀಲಿಸಿದಾಗ 2 ಕೋಟಿ ರೂ. ಪತ್ತೆಯಾಗಿದ್ದು, ಈ ಹಣಕ್ಕೆ ಸೂಕ್ತ ದಾಖಲೆ ಒದಗಿಸದ ಕಾರಣ ಕಾರಿನ ಸಮೇತ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಹಣ ಮತ್ತು ಕಾರು ಯಾರಿಗೆ ಸೇರಿದ್ದು ಎಂಬ ಬಗ್ಗೆ ಐಟಿ ಅದಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ನಿನ್ನೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನವಾಗಿದೆ. ಮೇ 7 ರಂದು ಕಲಬುರಗಿ ಸೇರಿದಂತೆ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ನಡೆದಿರುವ ಐಟಿ ದಾಳಿ ಮಹತ್ವದ್ದಾಗಿದೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೂ ಮುನ್ನ ಐಟಿ ಅಧಿ ಕಾರಿಗಳು ಹಲವೆಡೆ ದಾಳಿ ನಡೆಸಿ ಕೋಟ್ಯಂತರ ರೂ. ಹಣ ವಶ ಪಡಿಸಿಕೊಂಡಿದ್ದು, ದಾಳಿ ಮುಂದುವರೆಸಿದ್ದಾರೆ.