ಗೌವಾಹಟಿ,ಏ.30- ಕರ್ನಾಟಕದ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಪ್ರಕರಣವನ್ನು ಯಾವುದೇ ಕಾರಣಕ್ಕೂ ಬಿಜೆಪಿ ಸಮರ್ಥಿಸಿಕೊಳ್ಳುವುದಿಲ್ಲ. ಆದರೆ ರಾಜ್ಯ ಸರ್ಕಾರ ಈವರೆಗೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಷಾ ಪ್ರಶ್ನಿಸಿದ್ದಾರೆ.
ದೇಶದ ಕಾನೂನಿನ ಮುಂದೆ ನಾನೇ ಇರಲಿ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗನೇ ಇರಲಿ. ಎಲ್ಲರೂ ಒಂದೇ. ತಪ್ಪು ಮಾಡಿದ ಮೇಲೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ಪ್ರಕರಣವನ್ನು ಬಿಜೆಪಿ ಸಮರ್ಥಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನಾರಿ ಶಕ್ತಿ(ಮಹಿಳೆಯರು)ಗೆ ಅತ್ಯಂತ ಉನ್ನತ ಗೌರವಗಳನ್ನು ನೀಡುತ್ತದೆ. ಮಾತೃಶಕ್ತಿ(ತಾಯಂದಿರಿಗೆ)ಗೆ ಅವಮಾನ ಆಗುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ನೆಲದ ಕಾನೂನಿನ ಪ್ರಕಾರವೇ ಶಿಕ್ಷೆಯಾಗುತ್ತದೆ ಎಂದು ಅಮಿತ್ ಷಾ ಹೇಳಿದ್ದಾರೆ.
ಬಿಜೆಪಿಗೂ ಈ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರಗಳ ಕರ್ತವ್ಯ ಎಂದಿದ್ದಾರೆ.
ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋಗಳು ಹೊರಬಂದ ನಂತರ ವಿಶೇಷ ತನಿಖಾ ದಳ(ಎಸ್‌ಐಟಿ) ರಚನೆ ಮಾಡಿದೆ. ಪ್ರಕರಣ ದಾಖಲಾದ ನಂತರ ಅವರ ಮೇಲೆ ಏಕೆ ಕ್ರಮ ಜರುಗಿಸಲಿಲ್ಲ ಏಕೆ? ನಾನೇನು ಪ್ರಕರಣ ಮುಚ್ಚಿ ಹಾಕಲು ಹೇಳಿದ್ದೇವೆ. ಇಲ್ಲವೇ ಅವರ ಮೇಲೆ ಕ್ರಮ ತೆಗೆದುಕೊಳ್ಳದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಡ ಹಾಕಿದ್ದೇವೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ನಮ್ಮ ಮೇಲೆ ಮಾತನಾಡುವ ಮೊದಲು 2019ರಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು ಯಾವ ಪಕ್ಷ. ಅಂದು ಲೋಕಸಭೆ ಚುನಾವಣೆಯಲ್ಲಿ ಇದೇ ಪ್ರಜ್ವಲ್ ರೇವಣ್ಣಗೆ ನೀವು ಬೆಂಬಲ ನೀಡಿರಲಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರಿಗೆ ನಾನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ.
ನೀವು ಪ್ರಧಾನಿ ನರೇಂದ್ರಮೋದಿ ಅವರನ್ನು ಪ್ರಶ್ನಿಸುವ ಮೊದಲು ಕರ್ನಾಟಕದಲ್ಲಿ ನಿಮ್ಮದೇ ಪಕ್ಷದ ಮುಖ್ಯಮಂತ್ರಿ ಅವರನ್ನು ಕ್ರಮ ಜರುಗಿಸಲು ಏಕೆ ವಿಳಂಬ ಮಾಡಿದ್ದೀರಿ ಎಂದು ಪ್ರಶ್ನಿಸಿ. ಅವರು ವಿದೇಶಕ್ಕೆ ಹೋಗಲು ನಾವೇನು ಪಾಸ್‌ಪೋರ್ಟ್ ಕೊಟ್ಟಿದ್ದೇವಾ? ಕರ್ನಾಟಕದಲ್ಲಿ ಗುಪ್ತಚರ ವಿಭಾಗ ಯಾರ ಕೈಯಲ್ಲಿದೆ ಎಂದು ಪ್ರಶ್ನಿಸಿದರು.
ನಾವು ತನಿಖೆಯ ಪರವಾಗಿ ಇದ್ದೇವೆ. ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಅವಮಾನವನ್ನು ಪಕ್ಷ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸೋಲುವ ಭೀತಿಯಲ್ಲಿರುವ ಕಾಂಗ್ರೆಸ್ ನಾಯಕರು ಈ ಪ್ರಕರಣವನ್ನು ಬಿಜೆಪಿ ತಲೆಗೆ ಕಟ್ಟಲು ಷಡ್ಯಂತ್ರ ರೂಪಿಸುತ್ತಿದ್ದಾರೆ. ಇದರಲ್ಲಿ ನೀವು ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ.
ಈ ಪ್ರಕರಣ ತುಂಬ ಗಂಭೀರವಾಗಿದೆ. ನಾನು ಈವರೆಗೂ ಅಲ್ಲಿರುವ ಅಶ್ಲೀಲ ವಿಡಿಯೋಗಳನ್ನು ನೋಡಿಲ್ಲ. ನನಗಿರುವ ಮಾಹಿತಿಯಂತೆ ಇದು ಯಾರು ಕೂಡ ಸಹಿಸಲು ಸಾಧ್ಯವಾಗದ ಪ್ರಕರಣ. ನಿಷ್ಪಕ್ಷಪಾತ ತನಿಖೆ ನಡೆದು ಆರೋಪಿಗೆ ಶಿಕ್ಷೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಇದರಲ್ಲಿ ರಾಜಕೀಯ ಮಾಡಲು ಕಾಂಗ್ರೆಸ್ ಹೊರಟರೆ ನಾವು ಕೂಡ ಸುಮ್ಮನಿರುವುದಿಲ್ಲ . ಪ್ರಧಾನಿಯವರನ್ನು ಪ್ರಶ್ನಿಸುವ ಬದಲು ಪ್ರಿಯಾಂಕ ಗಾಂಧಿ ಕರ್ನಾಟಕದ ಸಿಎಂ ಮತ್ತು ಡಿಸಿಎಂ ಅವರನ್ನು ಪ್ರಶ್ನಿಸಲಿ ಎಂದು ಒತ್ತಾಯಿಸಿದ್ದಾರೆ.
ಜೆಡಿಎಸ್‌ನವರು ಈಗಾಗಲೇ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತಪ್ಪಿತಸ್ಥ ಸ್ಥಾನದಲ್ಲಿರುವವರ ಮೇಲೆ ಕ್ರಮ ಜರುಗಿಸಲು ಮುಂದಾಗಿದೆ. ನಮ್ಮ ಮೈತ್ರಿ ಪಕ್ಷ ಎಂಬ ಕಾರಣಕ್ಕೆ ತಪ್ಪು ಮಾಡಿದವರನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಅಮಿತ್ ಷಾ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
ಇನ್ನು ಅಮಿತ್ ಷಾ ಕಾಂಗ್ರೆಸ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ಬಿಜೆಪಿ 3ನೇ ಬಾರಿಗೆ ಅಧಿ ಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸಿ ಮೀಸಲಾತಿಯನ್ನು ರದ್ದುಪಡಿಸುತ್ತದೆ ಎಂಬ ಹುಸಿ ಸುಳ್ಳುಗಳನ್ನು ಸೃಷ್ಟಿಸುತ್ತಿದೆ. ದೇಶದ ಮತದಾರರು ಇದನ್ನು ನಂಬುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಈ ಬಾರಿ ಬಿಜೆಪಿ ದೇಶದ ಮತದಾರರ ಆಶೀರ್ವಾದ ಪಡೆದು 400 ಕ್ಷೇತ್ರಗಳನ್ನು ಗೆಲ್ಲುವುದರಲ್ಲಿ ಯಾವ ಅನುಮಾನವೂ ಇಲ್ಲ. ನಾವು ಕೇಂದ್ರದಲ್ಲಿ ಸ್ಪಷ್ಟ ಬಹುಮತ ಪಡೆದು ಎರಡು ಬಾರಿ ಅಧಿ ಕಾರಕ್ಕೆ ಬಂದರೂ ಸಂವಿಧಾನದ ಬಗ್ಗೆ ಅತ್ಯಂತ ಗೌರವ ಇಟ್ಟುಕೊಂಡಿದ್ದೇವೆ. ಕಾಂಗ್ರೆಸ್‌ನ ರಾಹುಲ್ ಗಾಂಧಿ , ಪ್ರಿಯಾಂಕ ಗಾಂಧಿ , ಕರ್ನಾಟಕದ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕೆಲವರು ಪ್ರತಿನಿತ್ಯ ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತದೆ ಎಂಬ ಸುಳ್ಳು ಹಬ್ಬಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅಂತಹ ದುಸ್ಸಾಹಸವನ್ನು ಬಿಜೆಪಿ ಮಾಡುವುದಿಲ್ಲ ಎಂದು ವದಂತಿಗಳಿಗೆ ತೆರೆ ಎಳೆದರು.
ನಾನು ತೆಲಂಗಾಣದಲ್ಲಿ ಮಾಡಿದ ಭಾಷಣವನ್ನು ತಮಗೆ ಇಷ್ಟಕ್ಕೆ ಬಂದಂತೆ ತಿರುಚಿ ಅಲ್ಲಿನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ಕಾಂಗ್ರೆಸ್‌ನ ಅನೇಕ ನಾಯಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕಾಗಿಯೇ ನಾವು ದೆಹಲಿ ಪೊಲೀಸರಿಗೆ ದೂರು ನೀಡಿದ್ದೇವೆ. ಸುಳ್ಳು ವದ್ದಂತಿಗಳನ್ನು ಹಬ್ಬಿಸುವವರಿಗೆ ಕಾನೂನಿನ ಮೂಲಕವೇ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.
ಬಿಜೆಪಿ ಎಂದಿಗೂ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದನ್ನು ಒಪ್ಪುವುದಿಲ್ಲ. ಈಗಿರುವ ವ್ಯವಸ್ಥೆ ಯಥಾ ಪ್ರಕಾರ ಮುಂದುವರೆಯಲಿದೆ. ನಾವು ಅಧಿ ಕಾರಕ್ಕೆ ಬಂದ ತಕ್ಷಣ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುತ್ತೇವೆ. ಈ ಬಾರಿ ದಕ್ಷಿಣ ಭಾರತದಲ್ಲಿ ನಮಗೆ ನಿರೀಕ್ಷೆಗೂ ಮೀರಿದ ಫಲಿತಾಂಶ ಬರಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.