Tuesday, May 21, 2024
Homeರಾಷ್ಟ್ರೀಯದೇಶದ 30 ವಿಮಾನ ನಿಲ್ದಾಣಗಳಲ್ಲಿ ಬಾಂಬ್‌ ದಾಳಿ ನಡೆಸುವುದಾಗಿ ಬೆದರಿಕೆ ಸಂದೇಶ

ದೇಶದ 30 ವಿಮಾನ ನಿಲ್ದಾಣಗಳಲ್ಲಿ ಬಾಂಬ್‌ ದಾಳಿ ನಡೆಸುವುದಾಗಿ ಬೆದರಿಕೆ ಸಂದೇಶ

ವಾರಾಣಸಿ (ಉತ್ತರ ಪ್ರದೇಶ),ಏ.30- ಬನಾರಸ್‌ ಸೇರಿದಂತೆ ದೇಶದ 30 ವಿಮಾನ ನಿಲ್ದಾಣಗಳಲ್ಲಿ ಬಾಂಬ್‌ ದಾಳಿ ನಡೆಸುವುದಾಗಿ ವಿಮಾನ ನಿಲ್ದಾಣದ ಅಧಿಕೃತ ಇ-ಮೇಲ್‌ಗೆ ಬೆದರಿಕೆ ಸಂದೇಶ ಬಂದಿದೆ. ವಿಮಾನ ನಿಲ್ದಾಣದಲ್ಲಿ ಬಾಂಬ್‌ ಅಳವಡಿಸಿ ರಿಮೋಟ್‌ನಲ್ಲಿ ಬಟನ್‌ ಒತ್ತಿದ ತಕ್ಷಣವೇ ಸ್ಫೋಟ ಆಗಲಿದೆ ಎಂದು ಇ- ಮೇಲ್‌ನಲ್ಲಿ ತಿಳಿಸಲಾಗಿದೆ.

ಬೆದರಿಕೆ ಹಿನ್ನೆಲೆ ವಿಮಾನ ನಿಲ್ದಾಣದ ಎಲ್ಲ ಗೇಟ್‌ಗಳ ಮೇಲೆ ನಿಗಾ ಹೆಚ್ಚಿಸಿ ತಡರಾತ್ರಿವರೆಗೂ ತಪಾಸಣೆ ನಡೆಸಲಾಯಿತು. ಆದರೆ ತಡರಾತ್ರಿಯವರೆಗೂ ಬೆದರಿಕೆ ಹಾಕಿರುವ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಸೋಮವಾರ ಸಂಜೆ ವಾರಾಣಸಿ ವಿಮಾನ ನಿಲ್ದಾಣದ ಅಧಿಕೃತ ಇ-ಮೇಲ್‌ ಐಡಿಗೆ ಮೇಲ್‌ ಬಂದಿದೆ. ಎಲ್ಲ 30 ವಿಮಾನ ನಿಲ್ದಾಣಗಳಲ್ಲಿ ಬಾಂಬ್‌ಗಳನ್ನು ಅಳವಡಿಸಿದ್ದೇವೆ. ಮತ್ತು ರಿಮೋಟ್‌ ಬಟನ್‌ ಒತ್ತಿದರೆ, ಒಂದರ ನಂತರ ಒಂದರಂತೆ ಸ್ಫೋಟಗೊಳ್ಳಲು ಪ್ರಾರಂಭವಾಗುತ್ತವೆ ಎಂದು ಕಳುಹಿಸಿದ ಮೇಲ್ನಲ್ಲಿ ಬರೆಯಲಾಗಿದೆ.

ಇ- ಮೇಲ್‌ ಬಂದ ನಂತರ, ವಿಮಾನ ನಿಲ್ದಾಣದಲ್ಲಿ ಹೈ ಸೆಕ್ಯುರಿಟಿ ತಂಡವು ತಕ್ಷಣವೇ ಸಭೆ ನಡೆಸಿ ಹೈ ಅಲರ್ಟ್‌ ಘೋಷಣೆ ಮಾಡಿದೆ. ವಿಮಾನ ನಿಲ್ದಾಣದ ಎಲ್ಲಾ ಗೇಟ್‌ಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಜೊತೆಗೆ ತೀವ್ರ ತಪಾಸಣೆಯನ್ನು ಸಹ ಮುಂದುವರಿಸಲಾಗಿದೆ.
ತಡರಾತ್ರಿಯವರೆಗೂ, ಬೆದರಿಕೆ ಹಾಕುವ ವ್ಯಕ್ತಿಯ ಬಗ್ಗೆ ದೆಹಲಿ ಅಥವಾ ಇತರ ಯಾವುದೇ ಕೇಂದ್ರ ಕಚೇರಿಗೆ ಯಾವುದೇ ಮಾಹಿತಿ ಲಭಿಸಿಲ್ಲ. ಹಿಂದಿಯಲ್ಲಿ ಒಂದು ಸಾಲು ಬರೆಯುವುದರೊಂದಿಗೆ, ಬಾಂಬ್ನ ಎಮೋಜಿಯನ್ನು ಸಹ ಇ-ಮೇಲ್‌ ಮಾಡಲಾಗಿದೆ.

ಮೇಲ್‌ ಬಂದ ನಂತರ ವಿಮಾನ ನಿಲ್ದಾಣದ ಕಾನ್ಫರೆನ್‌್ಸ ಹಾಲ್‌ನಲ್ಲಿ ತುರ್ತು ಸಭೆ ಕರೆಯಲಾಯಿತು. ಈ ಸಂದರ್ಭದಲ್ಲಿ, ಸಿಐಎಸ್‌ಎಫ್‌ ಮತ್ತು ಉತ್ತರ ಪ್ರದೇಶ ಪೊಲೀಸರ ಭದ್ರತಾ ಅಧಿಕಾರಿಗಳ ಸಮ್ಮುಖದಲ್ಲಿ ವಿಮಾನ ನಿಲ್ದಾಣದಲ್ಲಿ ಅಲರ್ಟ್‌ ಘೋಷಿಸಲಾಯಿತು. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಂಟಿ ತಪಾಸಣೆ ಅಭಿಯಾನವನ್ನು ಸಹ ಪ್ರಾರಂಭಿಸಲಾಯಿತು. ಸೋಮವಾರ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಅಪರಿಚಿತ ಇ-ಮೇಲ್‌ ಬಂದಿದೆ ಎಂದು ವಿಮಾನ ನಿಲ್ದಾಣದ ಹಿರಿಯ ಸಿಐಎಸ್‌ಎಫ್‌ ಕಮಾಂಡೆಂಟ್‌ ಅಜಯ್‌ ಕುಮಾರ್‌ ಹೇಳಿದ್ದಾರೆ.

RELATED ARTICLES

Latest News