ಚಿಕ್ಕಮಗಳೂರು, ಏ.30- ಪ್ರೀತಿಸಿ ಮದುವೆಯಾದ ಕೆಲವೇ ತಿಂಗಳಲ್ಲಿ ದೂರವಾಗಿದ್ದ ಪತ್ನಿ ಜಾತ್ರೆಗೆಂದು ತವರು ಮನೆಗೆ ಬಂದಿದ್ದಾಗ ಮಚ್ಚಿನಿಂದ ಕೊಚ್ಚಿ ಪತಿಯೇ ಕೊಲೆ ಮಾಡಿರುವ ಘಟನೆ ತರೀಕೆರೆ ತಾಲ್ಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ. ಮೇಘನಾ (18) ಕೊಲೆಯಾದ ಪತ್ನಿ. ಚರಣ್ (25) ಕೊಲೆ ಮಾಡಿದ ಆರೋಪಿ ಪತಿ. ಕರಕುಚ್ಚಿ ಗ್ರಾಮದ ನಿವಾಸಿ ಚರಣ್ ಅದೇ ಗ್ರಾಮದ ಮೇಘನಾಳನ್ನು ಪ್ರೀತಿಸಿ ವಿವಾಹವಾಗಿದ್ದನು.
ಪ್ರೀತಿಸುವಾಗಲೇ ಅತ್ಯಾಚಾರ ಎಸಗಿದ್ದ ಕಾರಣ ಈತನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಆದರೂ ಬಾಲಕಿಯಾದ ಮೇಘನಾಳನ್ನು ವಿವಾಹವಾಗಿದ್ದನು. ನಂತರದ ದಿನಗಳಲ್ಲಿ ಕಿರುಕುಳ ಕೊಡಲಾರಂಭಿಸಿದ್ದನು. ಇದರಿಂದ ಬೇಸತ್ತ ಮೇಘನಾ ಆತನಿಂದ ದೂರವಾಗಿ ಶಂಕರಘಟ್ಟದಲ್ಲಿರುವ ಅಜ್ಜಿಯ ಮನೆಯಲ್ಲಿ ವಾಸವಿದ್ದಳು.
ಮೇಘನಾ ಮುಳಕಟ್ಟಮ ಜಾತ್ರೆ ಹಿನ್ನೆಲೆಯಲ್ಲಿ ತವರು ಮನೆಗೆ ಬಂದಿದ್ದಳು. ಇವರ ಮನೆಯ ಸಮೀಪವಿರುವ ಭದ್ರಾ ಉಪ ಕಾಲುವೆ ಬಳಿ ಬಟ್ಟೆ ತೊಳೆದುಕೊಂಡು ಬರಲು ಸ್ಥಳೀಯ ಕೆಲವು ಮಹಿಳೆಯರೊಂದಿಗೆ ತೆರಳಿದ್ದಳು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಪತಿ ಚರಣ್ ಮೊನ್ನೆ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಮಚ್ಚಿನಿಂದ ಹಲ್ಲೆ ಮಾಡಿ ಆಕೆಯ ಕತ್ತು ಸೀಳಿ ಭದ್ರಾ ಹೊಳೆಯಲ್ಲಿ ರಕ್ತದೊಕುಳಿ ಹರಿಸಿದ್ದಾನೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಠಾಣಾ ಪೊಲೀಸರು ಮೃತ ಮೇಘನಾಳ ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲು ಮುಂದಾದಾಗ ಆಕೆಯ ಕುಟುಂಬಸ್ಥರು ಮತ್ತು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಮುಕ್ತಿವಾಹನದಿಂದ ಶವವನ್ನು ಕೆಳಗಿಳಿಸಿ ಆರೋಪಿ ಚರಣ್‌ನ ಮನೆಯ ಒಳಗೆ ತೆದುಕೊಂಡು ಹೋಗಿ ಈಕೆ ನಿಮ ಕುಟುಂಬ ಸದಸ್ಯರಾಗಿರುವುದರಿಂದ ಜಮೀನಿನಲ್ಲಿಯೇ ಶವಸಂಸ್ಕಾರ ಮಾಡಲಿ ಎಂದು ಒತ್ತಾಯಿಸಿ ಪ್ರತಿಭಟಸಿದರು.
ಘಟನೆಯ ಗಂಭೀರತೆಯನ್ನು ಅರಿತ ಡಿವೈಎಸ್‌ಪಿ ಹಾಲಮೂರ್ತಿ ತಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಕಾನೂನಿನ ಪ್ರಕಾರ ಶವಪರೀಕ್ಷೆ ನಡೆಸಿದ ನಂತರ ಶವವನ್ನು ಹಸ್ತಾಂತರಿಸುವುದಾಗಿ ಹೇಳಿದರೂ ಪ್ರಯೋಜನವಾಗಿಲ್ಲ. ಪ್ರತಿಭಟನೆ ತೀವ್ರ ಸ್ವರೂಪ ಪಡೆಕೊಳ್ಳುತ್ತಿದ್ದಂತೆ ಆರೋಪಿ ಚರಣ್ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.