ಬೆಂಗಳೂರು, ಏ.30- ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಅವರ ಅಂತಿಮ ದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಪಡೆಯದಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿರುವ ಕಾಂಗ್ರೆಸ್, ಪ್ರಧಾನಿ ಮೋದಿಯವರು ನಿನ್ನೆ ಕರ್ನಾಟಕದಲ್ಲೇ ಇದ್ದರು, ಕರ್ನಾಟಕ ಕಂಡ ಮುತ್ಸದ್ದಿ ರಾಜಕಾರಿಣಿ, ಶೋಷಿತ ಸಮುದಾಯಗಳ ಗಟ್ಟಿ ಧ್ವನಿಯಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರು ತೀರಿಕೊಂಡಿದ್ದು ಪ್ರಧಾನಿಯಯವರಿಗೂ ತಿಳಿದಿತ್ತು.
ಶ್ರೀನಿವಾಸ್ ಪ್ರಸಾದ್ ಅವರು ಮೋದಿಯವರ ಸಂಸತ್ ಸಹೋದ್ಯೋಗಿ ಹಾಗೂ ಅವರದ್ದೇ ಪಕ್ಷದ ಹಾಲಿ ಸಂಸದ ಕೂಡ. ಹೀಗಿದ್ದೂ ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥಿವ ಶರೀರ ನೋಡಿ ಗೌರವ ಸೂಚಿಸುವ ಕನಿಷ್ಠ ಸೌಜನ್ಯವನ್ನು ಪ್ರಧಾನಿಯವರು ತೋರಿಸಲಿಲ್ಲ ಎಂದು ಆರೋಪಿಸಿದೆ.
ಇದು ಮೋದಿಯವರಿಗೆ ಶೋಷಿತ ಸಮುದಾಯಗಳ ಬಗ್ಗೆ ಇರುವ ತಾತ್ಸಾರವೋ ಅಥವಾ ನಾಯಕರನ್ನು ಬಳಸಿ ಬಿಸಾಡುವ ಕುಯುಕ್ತಿಯ ಬುದ್ಧಿಯೊ? ಶ್ರೀನಿವಾಸ್ ಪ್ರಸಾದ್ ಅವರ ಸೈದ್ದಂತಿಕ ಭಿನ್ನತೆಯ ಕಾರಣಕ್ಕೆ ತೋರಿದ ದ್ವೇಷವೋ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿ ಶ್ರೀನಿವಾಸ್ ಪ್ರಸಾದ್‌ರನ್ನು ಪಕ್ಷಕ್ಕೆ ಸೇರಿಸಿಕೊಂಡ ನಂತರ ಮೂಲೆಗುಂಪು ಮಾಡಿತ್ತು, ಈಗ ಮೋದಿಯವರು ನಿರ್ಲಕ್ಷ್ಯ ಮಾಡಿದ್ದಾರೆ. ಒಬ್ಬ ಹಿರಿಯ ಮುತ್ಸದ್ದಿ ನಾಯಕನಿಗೆ ಬಿಜೆಪಿ ಮತ್ತು ಮೋದಿ ಕೊಡುವ ಗೌರವ ಇದೇನಾ ಎಂದು ಖಾರವಾಗಿ ಪ್ರತಿಕ್ರಿಯಿಸಲಾಗಿದೆ.