ಬೆಂಗಳೂರು, ಏ.30- ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದು ಬಹಳ ಜಟಿಲವಾಗಿದ್ದು, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಅವಶ್ಯಕವೆಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರತಾಪ್ ರೆಡ್ಡಿ ಸಿಬ್ಬಂದಿಗಳಿಗೆ ಕಿವಿ ಮಾತು ಹೇಳಿದರು.
ಸ್ವಯಂ ನಿವೃತ್ತಿ ಪಡೆದಿರುವ ಡಿಜಿಪಿ ಪ್ರತಾಪ್ ರೆಡ್ಡಿ ಅವರಿಗೆ ಕೋರಮಂಗಲದ ಕೆಎಸ್‌ಆರ್‌ಪಿ ಪೆರೆಡ್ ಮೈದಾನದಲ್ಲಿ ಇಂದು ಬೀಳ್ಕೊಡುಗೆ ಕವಾಯತು ಹಮ್ಮಿಕೊಳ್ಳಲಾಗಿತ್ತು.
ಕವಾಯತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಇಲಾಖೆಯಲ್ಲಿ ಬಹಳ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ, ನಾನು ಇಲಾಖೆಗೆ ಸೇರಿದಾಗ ಇಷ್ಟೊಂದು ಕ್ಲಿಷ್ಟಕರವಾಗಿರಲಿಲ್ಲ. ಆದರೆ ಇತ್ತಿಚೀನ ದಿನಗಳಲ್ಲಿ ಕರ್ತವ್ಯ ಜಟಿಲವಾಗುತ್ತಿದೆ, ಮುಂದೆಯೂ ಕಷ್ಟ ವಾಗಬಹುದು. ಹಾಗಾಗಿ ಸಿಬ್ಬಂದಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.
ಚುನಾವಣಾ ಸಂದರ್ಭದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಬೀಳ್ಕೊಡುಗೆ ಕವಾಯತು ಹಮ್ಮಿಕೊಳ್ಳುವುದು ಬಹಳ ಕಷ್ಟ. ಆದರೂ ಅದನ್ನೆಲ್ಲವನ್ನೂ ನಿಭಾಯಿಸಿ ಇಷ್ಟೊಂದು ಅಚ್ಚುಕಟ್ಟಾಗಿ ಸುಸೂತ್ರವಾಗಿ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ಕೆಎಸ್‌ಆರ್‌ಪಿ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕರ್ನಾಟಕದ ಪೊಲೀಸ್ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದರು.
ಕೆಎಸ್‌ಆರ್‌ಪಿ ತುಕಡಿಗಳ ಜೊತೆ ಕೆಲಸ ಮಾಡಿರುವುದು ಬಹಳ ತೃಪ್ತಿ ತಂದಿದೆ. ಕೆಎಸ್‌ಆರ್‌ಪಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. ಕೆಎಸ್‌ಆರ್‌ಪಿ ತುಕಡಿ ಪೊಲೀಸ್ ಇಲಾಖೆಗೆ ಹೆಮ್ಮೆ ಎಂದು ಕೆಎಸ್‌ಆರ್‌ಪಿ ತುಕಡಿಯ ಕಾರ್ಯವೈಖರಿಯನ್ನು ಶ್ಲಾಸಿದರು.
ಸತತ 33 ವರ್ಷ ಪೊಲೀಸ್ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ವಿವಿಧ ವಿಭಾಗಗಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇನೆ. ನನ್ನ ಸುಧಿರ್ಘ ಸೇವೆಯಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿ ಬಹಳ ಪ್ರೀತಿ ತೋರಿಸಿದ್ದಾರೆ. ವೈಯಕ್ತಿಕವಾಗಿ ಗೌರವ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ನನಗೆ ಪೋಷಕರು ಉತ್ತಮ ಶಿಕ್ಷಣ ಕೊಡಿಸಿದರು, ನಾನು ಐಪಿಎಸ್ ಪರೀಕ್ಷೆ ತೇರ್ಗಡೆಗೊಂಡು ಪೊಲೀಸ್ ಇಲಾಖೆಗೆ ಪಾದಾರ್ಪಣೆ ಮಾಡಿ ಇಂದು ನಿವೃತ್ತಿಯಾಗುತ್ತಿದ್ದು, ತನ್ನ ಸೇವಾ ಅವಽಯಲ್ಲಿ ಹಿರಿಯ ಅಽಕಾರಿಗಳ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕರ್ತವ್ಯ ನಿಭಾಯಿಸಿರುವ ತೃಪ್ತಿ ನನಗಿದೆ ಎಂದರು.
ಕವಾಯತು ಕಾರ್ಯಕ್ರಮದಲ್ಲಿ ಡಿಜಿ ಅಲೋಕ್ ಮೋಹನ್, ಎಡಿಜಿಪಿ ಉಮೇಶ್ ಕುಮಾರ್, ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಸೇರಿದಂತೆ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರತಾಪ್ ರೆಡ್ಡಿ ಅವರ ಬೀಳ್ಕೊಡುಗೆ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಅವರ ತಂದೆ ಗುಂಟೂರಿನಿಂದ ಆಗಮಿಸಿದ್ದರು.
ಪ್ರತಾಪ್ ರೆಡ್ಡಿ ಅವರ ಪತ್ನಿ ಸುಜಾತಾ ರೆಡ್ಡಿ, ಮಗಳು ಹರ್ಷಲಾ ರೆಡ್ಡಿ ಹಾಗೂ ವಿದೇಶದಲ್ಲಿ ನೆಲೆಸಿರುವ ಮಗ ಡಾ. ಗೌತಮ್ ರೆಡ್ಡಿ, ಸೊಸೆ ಮತ್ತು ಮೊಮ್ಮಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.