ಬೆಂಗಳೂರು,ಏ.30- ಕೇಂದ್ರದ ಮಾಜಿ ಸಚಿವ, ಸಂಸದ ಹಾಗೂ ದಲಿತರ ಆಶಾಕಿರಣ ವಿ.ಶ್ರೀನಿವಾಸ್ ಪ್ರಸಾದ್ ಅವರ ಅಂತ್ಯಕ್ರಿಯೆ ಇಂದು ಸರ್ಕಾರಿ ಸಕಲ ಗೌರವಾಧರಗಳೊಂದಿಗೆ ನಡೆಯಿತು. ಮೈಸೂರಿನ ಸಿಲ್ಕ್ ಫ್ಯಾಕ್ಟ್ರಿ ಬಳಿ ಇರುವ ಶ್ರೀನಿವಾಸ್ ಪ್ರಸಾದ್ ಅವರ ಡಾ.ಬಿ.ಆರ್.ಅಂಬೇಡ್ಕರ್ ಎಜುಕೇಷನ್ ಅಂಡ್ ಕಲ್ಚರಲ್ ಟ್ರಸ್ಟ್ ಆವರಣದಲ್ಲಿ ಬೌದ್ಧ ಧರ್ಮದ ವಿಧಿವಿಧಾನದೊಂದಿಗೆ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಂತೆಯೇ ಬೌದ್ಧ ಧರ್ಮದ ಅನುಯಾಯಿಯಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರ ಕೊನೆಯ ಆಸೆಯಂತೆ ಅಹಿಂಸೆ ಮತ್ತು ಸತ್ಯದ ಸಂದೇಶದ ಮೂಲಕ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಮಧ್ಯಾಹ್ನ 1 ಗಂಟೆಗೆ ಶ್ರೀನಿವಾಸ್ ಪ್ರಸಾದ್ ಅವರ ಅಂತ್ಯಕ್ರಿಯೆಯನ್ನು ಬೌದ್ಧ ಧರ್ಮದ ಭಿಕ್ಷುಗಳು ನೆರವೇರಿಸಿಕೊಟ್ಟರು. ಕಳೆದ ಐದು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ಮುತ್ಸದ್ದಿ ಇನ್ನು ನೆನಪು ಮಾತ್ರ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸ್ಥಳೀಯ ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಶ್ರೀನಿವಾಸ್ ಪ್ರಸಾದ್ ಅವರ ಸಾವಿರಾರು ಅಭಿಮಾನಿಗಳು ನೆಚ್ಚಿನ ನಾಯಕನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.
ಇದಕ್ಕೂ ಮುನ್ನ ಭೀಮ ಸದನದಿಂದ ವಿ.ಶ್ರೀನಿವಾಸ ಪ್ರಸಾದ್ ಅವರ ಪಾರ್ಥಿವ ಶರೀರ ಹೊರಟಾಗ ರಸ್ತೆಯುದ್ದಕ್ಕೂ ಪುಷ್ಪವೃಷ್ಠಿ ಸುರಿಸಿ ಸಾರ್ವ ಜನಿಕರು ನಮನ ಸಲ್ಲಿಸಿದರು.ಮತ್ತೆ ಪ್ರಸಾದ್ ಅಣ್ಣ ಬರಲಿ ಎಂಬ ಘೋಷಣೆ ಗಳನ್ನು ಕೂಗಿರು. ಅಭಿಮಾನಿಗಳು ಭಾರವಾದ ಹೆಜ್ಜೆಗಳನ್ನಿಡುತ್ತಾ ಅಂತಿಮ ಯಾತ್ರೆಗೆ ಸಾಕ್ಷಿಯಾದರು. ಅಂತಿಮ ಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಮಳಿಗೆದಾರರು ಸ್ವಯಂಪ್ರೀರಿತವಾಗಿ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಗೌರವ ಸಲ್ಲಿಸಿದರು.
ಜೀರೋ ಟ್ರಾಫಿಕ್‌ನಲ್ಲೇ ಭೀಮಸದನದಿಂದ ಅಶೋಕಪುರಂ ವರೆಗೆ ಪಾರ್ಥಿವ ಶರೀರವನ್ನು ತರಲಾಯಿತು. ಪಾರ್ಥಿವ ಶರೀರವಿದ್ದ ವಾಹನವು ಅಶೋಕಪುರಂ ಪ್ರವೇಶಿಸುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಪುಷ್ಪವೃಷ್ಠಿ ಸುರಿಸಿ ಕಂಬನಿ ಮೀಡಿದರು.
ಎಂಟಿಎಂ ಶಾಲೆಯ ಸುತ್ತ ಸಾವಿರಾರು ಮಂದಿ ಜಮಾಯಿಸಿ ದ್ದರಿಂದ ಶಾಲೆಯ ಆವರಣ ಜನರಿಂದಲೇ ಭರ್ತಿಯಾಗಿತ್ತು. ಪಾರ್ಥಿವ ಶರೀರ ಹೊತ್ತು ಸಾಗಿದ ವಾಹನವನ್ನು ವಿಶೇಷ ಹೂ ಹಾಗೂ ತುಳಸಿ ಮಾಲೆಗಳಿಂದ ಅಲಂಕರಿಸಲಾಗಿತ್ತು.ಸಂಸದ ವಿ. ಶ್ರೀನಿವಾಸಪ್ರಸಾದ್ ಅವರ ನಿಧನದ ಹಿನ್ನೆಲೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲ ಸರಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.