Friday, November 22, 2024
Homeರಾಜ್ಯರಾಮನಗರ ಶಾಸಕ ವಿಡಿಯೋ ವೈರಲ್, ಸಂತ್ರಸ್ತೆ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ : ಡಿ.ಕೆ.ಸುರೇಶ್‌

ರಾಮನಗರ ಶಾಸಕ ವಿಡಿಯೋ ವೈರಲ್, ಸಂತ್ರಸ್ತೆ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ : ಡಿ.ಕೆ.ಸುರೇಶ್‌

ಬೆಂಗಳೂರು,ಮೇ.1- ರಾಮನಗರದ ಶಾಸಕರಿಗೆ ಸೇರಿದ್ದು ಎಂದು ಹೇಳಲಾದ ವಿಡಿಯೋ ಪ್ರಕರಣದಲ್ಲಿ ಸಂತ್ರಸ್ತೆ ದೂರು ನೀಡಿದರೆ ಕ್ರಮ ಕೈಗೊಳ್ಳಲು ಸೂಚನೆ ನೀಡುವುದಾಗಿ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ 108 ವಿಡಿಯೋಗಳಿರುತ್ತವೆ, ಎಲ್ಲರದೂ ಇರುತ್ತವೆ, ಸಿಡಿ ಬಾಯ್ಸ್ ಗೆ ಸೇರಿದ ವಿಡಿಯೋಗಳಿಲ್ಲವೇ? ಸಿ.ಪಿ.ಯೋಗೀಶ್ವರ್‌ ಅವರು ಮಠಗಳಿಗೆ ಭೇಟಿ ನೀಡಿದ್ದೇಕೆ ಎಂದು ಗೊತ್ತಿಲ್ಲವೇ? ಮಠದವರು ಖಾಸಗಿಯಾಗಿ ಬಹುಶಃ ವಿಷಯಗಳನ್ನು ಚರ್ಚೆ ಮಾಡಿರಬಹುದು, ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದು ಯಾವ ಕಾರಣಕ್ಕೆ? ಎಂದು ಪ್ರಶ್ನಿಸಿದರು.

ಇಂತಹ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ವಿಶೇಷ ಕಾನೂನಿನ ಅಗತ್ಯವಿದೆ. ಬ್ಲಾಕ್‌ಮೇಲ್‌ ಮಾಡುವುದು, ಖಾಸಗಿ ಬದುಕಿಗೆ ಧಕ್ಕೆ ತರುವುದು, ಅಧಿಕಾರ ದುರುಪಯೋಗ ಸೇರಿದಂತೆ ಹಲವು ವಿಚಾರಗಳನ್ನೊಳಗೊಂಡಂತೆ ಕ್ರಮ ಕೈಗೊಳ್ಳಲು ಕಾನೂನಿನ ಅಗತ್ಯವಿದೆ ಎಂದು ಒತ್ತಾಯಿಸಿದರು.

ಹಾಸನದ ಪೆನ್‌ಡ್ರೈವ್‌ ಬಹಿರಂಗ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‌ರವರ ಪಾತ್ರ ಇಲ್ಲ. ಎಚ್‌.ಡಿ.ಕುಮಾರಸ್ವಾಮಿಯವರಿಗೆ ಡಿ.ಕೆ.ಶಿವಕುಮಾರ್‌ರವರ ಹೆಸರು ಹೇಳದಿದ್ದರೆ ಊಟ ಸೇರುವುದಿಲ್ಲ, ತಿಂದಿದ್ದು ಜೀರ್ಣವಾಗುವುದಿಲ್ಲ, ನಿದ್ರೆ ಬರುವುದಿಲ್ಲ. ಪೆನ್‌ಡ್ರೈವ್‌ ಡಿ.ಕೆ.ಶಿವಕುಮಾರ್‌ರವರ ಬಳಿ ಇದ್ದರೆ ಚುನಾವಣೆಗೂ ಮೊದಲೇ ಬಿಡುಗಡೆಯಾಗುತ್ತಿತ್ತು.

ಚುನಾವಣಾ ಸಂದರ್ಭದಲ್ಲಿ ಹಾದಿಬೀದಿಯಲ್ಲಿ ಪೆನ್‌ಡ್ರೈವ್‌ ಸಿಗಲು ಹಾಸನ ಜಿಲ್ಲೆಯ ಸ್ಥಳೀಯ ರಾಜಕಾರಣದ ಕೈವಾಡವಿದೆ. ಜೆಡಿಎಸ್‌ನ ಮೈತ್ರಿ ಪಕ್ಷದ ನಾಯಕರು ಮತ್ತು ಎಚ್‌.ಡಿ.ಕುಮಾರಸ್ವಾಮಿಯವರು ಸೇರಿ ಪೆನ್‌ಡ್ರೈವ್‌ ಅನ್ನು ಬಹಿರಂಗ ಮಾಡಿದ್ದಾರೆ ಎಂದು ಡಿ.ಕೆ.ಸುರೇಶ್‌ ತಿರುಗೇಟು ನೀಡಿದರು.

ಕುಮಾರಸ್ವಾಮಿಯವರು ದಿನಕ್ಕೊಂದು ಹೇಳಿಕೆ ನೀಡಿ ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ. ಇಲ್ಲಿ ಮೂಲ ಪ್ರಶ್ನೆ ಇರುವುದು ಅನ್ಯಾಯಕ್ಕೊಳಗಾದ 500 ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸುವ ಬಗ್ಗೆ. ಆದರೆ ಕುಮಾರಸ್ವಾಮಿ ಅನಗತ್ಯ ವಿಚಾರಗಳನ್ನು ಚರ್ಚೆ ಮಾಡಿ ಜನರ ಗಮನವನ್ನು ಬೇರೆಡೆ ಸೆಳೆಯುವ ಯತ್ನ ನಡೆಸುತ್ತಿದ್ದಾರೆ. ಇಂತಹ ಯಾವುದೇ ಪ್ರಕರಣಗಳಾದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.

ಅಧಿ ಕಾರ ದುರುಪಯೋಗ ಮಾಡಿಕೊಂಡು ವಿಡಿಯೋ ಮಾಡಿಕೊಂಡವರು ಮತ್ತು ಅದನ್ನು ಪೆನ್‌ಡ್ರೈವ್‌ ಮೂಲಕ ಬಹಿರಂಗಗೊಳಿಸಿದವರು ಶಿಕ್ಷಾರ್ಹರಾಗಿದ್ದಾರೆ. ಇದು ಒಬ್ಬರಿಗೆ ಸಂಬಂಧಪಟ್ಟ ವಿಚಾರವಲ್ಲ. ನೂಲಿನಂತೆ ಸೀರೆ ಎಂಬ ಮಾತಿದೆ. ಮಹಿಳೆಯರಿಗೆ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದ ಡಿ.ಕೆ.ಸುರೇಶ್‌, ಪ್ರಜ್ವಲ್‌ ರೇವಣ್ಣ ಅವರನ್ನು ಅಮಾನತುಗೊಳಿಸುವುದು ದೊಡ್ಡ ವಿಷಯವಲ್ಲ. ಜನತಾದಳ ಕುಟುಂಬದ ಪಕ್ಷ. ಬೇಡವಾದಾಗ ಅಮಾನತುಗೊಳಿಸುತ್ತಾರೆ, ಬೇಕಾದಾಗ ಸೇರಿಸಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು.

RELATED ARTICLES

Latest News