ಹಾಸನ,ಮೇ.2- ಹಾಸನದ ಪೆನ್‍ಡ್ರೈವ್ ಪ್ರಕರಣದಲ್ಲಿ ರಾಜಕೀಯ ಲಾಭಕ್ಕಾಗಿ ಷಡ್ಯಂತ್ರ ನಡೆಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಆರೋಪಿಸಿದರು. ಹೊಳೆನರಸೀಪುರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ದುರ್ಬಲಗೊಳಿಸಬೇಕು. ಸಂಕಷ್ಟಕ್ಕೆ ಸಿಲುಕಿಸಬೇಕೆಂದು ಷಡ್ಯಂತ್ರ ನಡೆಸಲಾಗಿದೆ. ರಾಜಕೀಯಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದರು.
ರೇವಣ್ಣ ಅವರ ವಿರುದ್ಧ ಸಾವಿರ ಎಫ್‍ಐಆರ್ ಬೇಕಾದರೂ ಹಾಕಲಿ, ಅವರೇನು ಎಂಬುದು ಜನರಿಗೆ ಗೊತ್ತಿದೆ, ರೇವಣ್ಣ ಅವರು ಏನೆಂಬುದು ಹಾಸನ ಜಿಲ್ಲೆ ಹಾಗೂ ಹೊಳೆನರಸೀಪುರ ತಾಲೂಕಿನ ಜನರಿಗೆ ಗೊತ್ತಿದೆ. ರೇವಣ್ಣ ಅವರು ಈ ರೀತಿಯ ರಾಜಕಾರಣ ಮಾಡಿದವರಲ್ಲ. ರಾಜಕೀಯ ದುರುದ್ದೇಶದಿಂದ ಈ ರೀತಿಯ ಮಾಡಲಾಗುತ್ತಿದೆ. ತಮ್ಮ ಕುಟುಂಬದ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪೆನ್‍ಡ್ರೈವ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ವಿಚಾರವಾಗಿ ಸರ್ಕಾರ ಎಸ್‍ಐಟಿ ತನಿಖೆಗೆ ವಹಿಸಿದೆ. ಅದರ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ . ಸಂಸದ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಯಾವ ಮಾಹಿತಿಯೂ ಇಲ್ಲ ಎಂದು ಹೇಳಿದರು. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಹಾಸನದಲ್ಲಿ ಯಾವುದೇ ಪ್ರತಿರೋಧವಿಲ್ಲ ಎಂದರು. ಯಾರು ಏನು ಬೇಕಾದರೂ ಹೇಳಲಿ, ತನಿಖೆಯ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದರು.
ಜೆಡಿಎಸ್ ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ, ನಿನ್ನೆ ಕೂಡ ಪಕ್ಷದ ಕಾರ್ಯಕರ್ತರ ಸಭೆಯನ್ನು ನಡೆಸಿದ್ದೇವೆ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಗ್ಗೆ ಸೂರಜ್, ಯಾರು ಏನು ಬೇಕಾದರೂ ಮಾಡಿಕೊಳ್ಳಲಿ, ಎಸ್‍ಐಟಿ ರಚನೆಯಾಗಿದೆ, ಅದು ಯಾವ ಉದ್ದೇಶಕ್ಕೋಸ್ಕರ ರಚನೆಯಾಗಿದೆ, ಅದರಲ್ಲಿ ಏನು ಸಾಬೀತಾಗುತ್ತದೋ ಕಾದು ನೋಡೋಣ ಎಂದರು.
ಡಿ.ಕೆ.ಶಿವಕುಮಾರ್‍ರವರನ್ನು ಜನವರಿಯಲ್ಲಿ ಅನುದಾನ ಹಾಗೂ ಎಲ್‍ಓಸಿ ವಿಷಯವಾಗಿ ನಮ್ಮ ಜಿಲ್ಲೆಯ ಪ್ರತಿನಿಧಿಯಾಗಿ ಭೇಟಿ ಮಾಡಿದ್ದೆ. ಈಗ ಹೇಗೆ ಭೇಟಿ ಮಾಡಲು ಸಾಧ್ಯ? ಕಳೆದ ಒಂದೂವರೆ ತಿಂಗಳಿನಿಂದ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದೆವು, ಬೆಂಗಳೂರಿನ ಕಡೆ ಹೋಗಿಲ್ಲ, ಡಿ.ಕೆ.ಶಿವಕುಮಾರ್‍ರನ್ನಷ್ಟೇ ಅಲ್ಲ ಬೇರೆ ಯಾವ ರಾಜಕಾರಣಿಯನ್ನೂ ಭೇಟಿಯಾಗುವ ಸಂದರ್ಭ ಬಂದಿಲ್ಲ. ಈ ಹಿಂದೆ ನಮ್ಮ ಜಿಲ್ಲೆ ಅಭಿವೃದ್ಧಿಯ ವಿಚಾರವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ನಿಜ ಎಂದು ಹೇಳಿದರು.