ಚಿತ್ರದುರ್ಗ,ಡಿ.25- ಇಂದು ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿ -48 ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಖಾಸಗಿ ಬಸ್ ಬೆಂಕಿಯಿಂದ ಹೊತ್ತಿಉರಿದಿದ್ದು, ಒಂಬತ್ತಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ.ಅಪಘಾತವೆಸಗಿದ ಕಂಟೈನರ್ ಲಾರಿ ಚಾಲಕ ಸೇರಿದಂತೆ ಬಸ್‌ನಲ್ಲಿದ್ದ ಎಂಟು ಮಂದಿ ಮೃತಪಟ್ಟಿದ್ದು ಸದ್ಯಕ್ಕೆ ಅವರ ಹೆಸರು, ವಿಳಾಸ ತಿಳಿದು ಬಂದಿಲ್ಲ.
ಇಂದು ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ಹರಿಯಾಣ ಮೂಲದ ಕಂಟೇನರ್ ಲಾರಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಬಳಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ನಂತರ ಪಕ್ಕದ ರಸ್ತೆಗೆ ಹಾರಿ ಬೆಂಗಳೂರಿನಿಂದ ಗೋಕರ್ಣಕ್ಕೆ ಚಲಿಸುತ್ತಿದ್ದ ಸೀಬರ್ಡ್ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ನೋಡ ನೋಡುತ್ತಿದ್ದಂತೆ ಖಾಸಗಿ ಬಸ್ ಹೊತ್ತಿ ಉರಿದು ಬಸ್‌ನಲ್ಲಿ ನಿದ್ದೆ ಮಂಪರಿನಲ್ಲಿದ್ದವರು ಎಚ್ಚರಗೊಂಡು ಹೊರಗೆ ಹಾರಿ ಕೆಲವರು ಪ್ರಾಣ ಉಳಿಸಿಕೊಂಡರೇ ಹೊರಗೆ ಬರಲಾಗದೆ ಐದು ಮಂದಿ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ. ಗಾಯಾಳುಗಳನ್ನು ಶಿರಾ, ಹಿರಿಯೂರು, ಬೆಂಗಳೂರು ಹಾಗೂ ಚಿತ್ರದುರ್ಗ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಬೆಂಗಳೂರಿನ ಆನಂದರಾವ್ ಸರ್ಕಲ್‌ನಿಂದ ರಾತ್ರಿ 8.45ಕ್ಕೆ ಗೋಕರ್ಣಕ್ಕೆ ಹೊರಟಿದ್ದ ಸೀಬರ್ಡ್ ಟ್ರಾವಲ್ಸ್ ಗೆ ಸೇರಿದ ಸ್ಲೀಪರ್ ಕೋಚ್ ಖಾಸಗಿ ಬಸ್‌ನಲ್ಲಿ 30 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.ಕೆಲವು ಪ್ರಯಾಣಿಕರು ಕ್ರಿಸ್‌ಮಸ್ ರಜೆಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಗೋಕರ್ಣಕ್ಕೆ ದೇವರ ದರ್ಶನಕ್ಕೆ ಹೊರಟಿದ್ದರೆ ಇನ್ನೂ ಕೆಲವು ಪ್ರಯಾಣಿಕರು ಮಾರ್ಗಮಧ್ಯೆ ತಮ ತಮ ಊರುಗಳಿಗೆ ಹೋಗಲು ಈ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.
ಇಂದು ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 48ರ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ಈ ಬಸ್ ಹೋಗುತ್ತಿದ್ದಾಗ ಹರಿಯಾಣ ಮೂಲದ ಕಂಟೈನರ್ ಲಾರಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಪಕ್ಕದ ರಸ್ತೆಗೆ ಹಾರಿ ಬಸ್‌ಗೆ ಅಪ್ಪಳಿಸಿದ್ದರಿಂದ ಕ್ಷಣಾರ್ಧದಲ್ಲಿ ಬಸ್ ಪೂರ್ತಿ ಬೆಂಕಿ ಆವರಿಸಿಕೊಂಡು ಹೊತ್ತಿ ಉರಿದಿದೆ.ಈ ಮಾರ್ಗದಲ್ಲಿ ಹೋಗುತ್ತಿದ್ದವರು ತಕ್ಷಣ ಸಹಾಯಕ್ಕೆ ಆಗಮಿಸಿ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.


ಬಸ್ ಚಾಲಕ ಹೇಳಿದ್ದೇನು..?
ಚಿತ್ರದುರ್ಗ, ಡಿ.25-ಅತಿ ವೇಗದ ಟ್ರಕ್ ಬರುತ್ತಿರುವುದನ್ನು ನೋಡಿದೆ, ತನ್ನ ವಾಹನವನ್ನು ನಿಯಂತ್ರಿಸಲು ಪ್ರಯತ್ನಿಸಿದೆ, ಆದರೆ ಸಾಧ್ಯವಾಗಲಿಲ್ಲ ಎಂದು ಬದುಕುಳಿದಿರುವ ಬಸ್ ಚಾಲಕ ತಿಳಿಸಿದ್ದಾನೆ.ಬೆಳಗಿನ ಜಾವ 2 ಗಂಟೆ ಸಂದರ್ಭದಲ್ಲಿ ಟ್ರಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ.
ಟ್ರಕ್ ಅತಿ ವೇಗದಲ್ಲಿ ಚಲಿಸುತ್ತಿತ್ತು. ಆ ಸಮಯದಲ್ಲಿ ನಾನು 60-70 ಕಿಮೀ ವೇಗವನ್ನು ಕಾಯ್ದುಕೊಂಡಿದ್ದೆ. ವಾಹನವು ಮುಂಭಾಗದಿಂದ ಬರುತ್ತಿರುವುದನ್ನು ನಾನು ನೋಡಿದೆ ಎಂದಿದ್ದಾರೆ. ನಾನು ಅಪಾಯ ಅರಿತು ಬಸ್ ನಿಯಂತ್ರಿಸಲು ಪ್ರಯತ್ನಿಸಿದೆ ಆದರೆ ಟ್ರಕ್‌ಡಿಕ್ಕಿ ಹೊಡೆಯಿತು,ನಂತರ ಏನಾಯಿತು ಮತ್ತು ನನ್ನನ್ನು ಹೇಗೆ ಹೊರಗೆ ತರಲಾಯಿತು ಎಂದು ನನಗೆ ತಿಳಿದಿಲ್ಲ ಎಂದು ಚಿಕಿತ್ಸೆ ಪಡೆಯುತ್ತಿರುವ ಬಸ್ ಚಾಲಕ ರಫೀಕ್ ಸುದ್ದಿಗಾರರಿಗೆ ತಿಳಿಸಿದರು.
ನನ್ನ ಬಸ್ ಪಕ್ಕದಲ್ಲಿ ಚಲಿಸುತ್ತಿದ್ದ ಇನ್ನೊಂದು ವಾಹನಕ್ಕೂ ತಾಗಿದೆ ಅದು ಯಾವ ವಾಹನ ಎಂದು ನನಗೆ ತಿಳಿದಿಲ್ಲ. ಆದರೆ,ಸಾಧ್ಯವಾಗಲಿಲ್ಲ ಎಂದು ವಿವರಿಸಿದ್ದಾನೆ.
ಸಣ್ಣಪುಟ್ಟ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿರುವ ಬಸ್‌ನ ಕ್ಲೀನರ್ ಮೊಹಮ್ಮದ್ ಸಾದಿಕ್, ಡಿಕ್ಕಿಯ ರಭಸಕ್ಕೆ ಬಸ್‌ನಿಂದ ಹೊರಗೆ ಬಿದ್ದೆ ಎಂದು ಹೇಳಿದರು.ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್ ನೇರವಾಗಿ ಡೀಸೆಲ್ ಟ್ಯಾಂಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದಾಗ ನಾನು ಬಸ್‌ನ ಮುಂಭಾಗದಲ್ಲಿದ್ದೆ ಮತ್ತು ನಿದ್ರಿಸುತ್ತಿದ್ದೆ. ಅಪಘಾತದಿಮದ , ನಾನು ಹೊರಗೆ ಬಿದ್ದೆ ಬಸ್‌ನ ಗಾಜು ಒಡೆದಿದ್ದೇನೆ ಎಂದು ಅವರು ಹೇಳಿದರು.

ಅಪಘಾತದ ಸೂಕ್ತ ತನಿಖೆಗೆ ಸಿಎಂ ಸೂಚನೆ :
ಚಿತ್ರದುರ್ಗದಲ್ಲಿ ಸಂಭವಿಸಿದ ಲಾರಿ ಮತ್ತು ಬಸ್ ನಡುವಿನ ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾದ ಘೋರ ದುರಂತದ ಸುದ್ದಿ ಕೇಳಿ ಎದೆ ನಡುಗಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಘಾತ ವ್ಯಕ್ತಪಡಿಸಿದ್ದಾರೆ. ಕ್ರಿಸ್ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ದುರಂತದಲ್ಲಿ ಕೊನೆಗೊಂಡಿರುವುದು ಅತ್ಯಂತ ವಿಷಾದನೀಯ ಎಂದು ಅವರು ತಮ ಎಕ್‌್ಸ ಖಾತೆಯಲ್ಲಿ ತಿಳಿಸಿದ್ದಾರೆ.ಅಪಘಾತದ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾರಣವನ್ನು ಪತ್ತೆ ಹಚ್ಚಲಾಗುವುದು. ಮೃತರ ಆತಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿರುವ ಅವರು, ಅಪಘಾತದಲ್ಲಿ ಮಡಿದ ಕುಟುಂಬಸ್ಥರ ದುಃಖದಲ್ಲಿ ನಾನು ಕೂಡಾ ಭಾಗಿ ಎಂದು ಹೇಳಿದ್ದಾರೆ.
ಡಿಸಿಎಂ ಸಂತಾಪ :
ಬಸ್ ಮತ್ತು ಲಾರಿ ನಡುವೆ ಹಿರಿಯೂರು ಬಳಿ ಅಪಘಾತ ಸಂಭವಿಸಿ ಹಲವರು ಸಜೀವ ದಹನಗೊಂಡಿರುವ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.ಮೃತರಿಗೆ ಸಂತಾಪ ವ್ಯಕ್ತಪಡಿಸಿರುವ ಅವರು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.ಇಂತಹ ದುರಂತಗಳು ಮರುಕಳಿಸದಿರಲಿ ಎಂದು ಅವರು ತಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಮೃತರ ಕುಟುಂಬಕ್ಕೆ ಪ್ರಧಾನಿ ಸಂತಾಪ : 2 ಲಕ್ಷ ರೂ. ಪರಿಹಾರ ಘೋಷಣೆ
ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಬಸ್‌ಗೆ ಬೆಂಕಿ ಹೊತ್ತಿಕೊಂಡು ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ,ಘಟನೆಯ ಬಗ್ಗೆ ದಿಘ್ರಮೆ ವ್ಯಕ್ತಪಡಿಸಿದ್ದಾರೆ.ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.
ಅಪಘಾತದಿಂದ ಸಂಭವಿಸಿದ ಜೀವಹಾನಿಯಿಂದ ತೀವ್ರ ದುಃಖಿತನಾಗಿದ್ದೇನೆ. ತಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತ್ವಾನ ಹೇಳಿ ಅಗಲಿದ ಜೀವಗಳಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ.
ಬಸ್ಸಿನ ಡೀಸೆಲ್ ಟ್ಯಾಂಕ್‌ಗೆ ನೇರವಾಗಿ ಡಿಕ್ಕಿ :
ಪೂರ್ವ ವಲಯದ ಐಜಿಪಿ ರವಿಕಾಂತೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ್ದು, ‘ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಬಸ್ (KA 01 AE 5217) ಸುಗಮವಾಗಿ ಸಂಚರಿಸುತ್ತಿತ್ತು. ಆದರೆ ಎದುರಿನಿಂದ ಬರುತ್ತಿದ್ದ ಕಂಟೇನರ್ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಡಿವೈಡರ್ ದಾಟಿ ಬಂದು ಬಸ್ಸಿನ ಡೀಸೆಲ್ ಟ್ಯಾಂಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೆಂಕಿ ಕಿಡಿ ಉಂಟಾಗಿ ಕ್ಷಣಾರ್ಧದಲ್ಲಿ ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ’ ಎಂದು ವಿವರಿಸಿದ್ದಾರೆ.
ಸಾವಿನ ಸಂಖ್ಯೆ ಮತ್ತು ಗುರುತು ಪತ್ತೆ ಸವಾಲು:
ಸದ್ಯದ ಮಾಹಿತಿ ಪ್ರಕಾರ ಲಾರಿ ಚಾಲಕ ಸೇರಿದಂತೆ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ಮೃತ ದೇಹಗಳು ಗುರುತು ಹಿಡಿಯಲಾರದಷ್ಟು ಸುಟ್ಟು ಕರಕಲಾಗಿವೆ. ಬಸ್ಸಿನಿಂದ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತರ ಗುರುತು ಪತ್ತೆ ಹಚ್ಚುವುದು ಕಷ್ಟವಾಗಿರುವುದರಿಂದ ಬೆಂಗಳೂರಿನಿಂದ ವಿಧಿವಿಜ್ಞಾನ ಮತ್ತು ಡಿಎನ್‌ಎ (DNA) ತಂಡಗಳನ್ನು ಕರೆಸಲಾಗಿದೆ’ ಎಂದು ಐಜಿಪಿ ತಿಳಿಸಿದ್ದಾರೆ.
