Friday, November 22, 2024
Homeರಾಜ್ಯತಾಪಮಾನ ದಾಖಲೆಯ ಏರಿಕೆ, ಇಳಿಮುಖ ಪೂರೈಕೆ, ಗಗನಕ್ಕೇರಿದ ತರಕಾರಿ ಬೆಲೆ

ತಾಪಮಾನ ದಾಖಲೆಯ ಏರಿಕೆ, ಇಳಿಮುಖ ಪೂರೈಕೆ, ಗಗನಕ್ಕೇರಿದ ತರಕಾರಿ ಬೆಲೆ

ಬೆಂಗಳೂರು,ಮೇ.5- ದಾಖಲೆ ಮಟ್ಟದಲ್ಲಿ ಏರುತ್ತಿರುವ ಬಿಸಿಲಿನ ತಾಪ ಹಾಗೂ ಪೂರೈಕೆಯಲ್ಲಿ ತೀವ್ರ ಕುಸಿತವಾಗಿರುವ ಕಾರಣಕ್ಕೆ ಎಲ್ಲ ತರಕಾರಿಗಳ ಬೆಲೆ ಹೆಚ್ಚಾಗಿದ್ದು, ಗ್ರಾಹಕರನ್ನು ಹೌಹಾರುವಂತೆ ಮಾಡುತ್ತಿದೆ.

ಏರುತ್ತಲೇ ಇರುವ ತರಕಾರಿ ಬೆಲೆ ಜನರ ನಿತ್ಯದ ಜೀವನದಲ್ಲಿ ತಳಮಳಕ್ಕೆ ಕಾರಣವಾಗಿದೆ. ಮಳೆ ಪ್ರಾರಂಭವಾಗುವ ತನಕ ಈ ಬೆಲೆ ಇಳಿಕೆ ಕಾಣುವುದಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈಗಾಗಲೇ ಒಂದು ಕೆಜಿ ತರಕಾರಿ ಕೊಳ್ಳುವಲ್ಲಿ ಅರ್ಧ ಕೆಜಿ ಖರೀದಿ ಮಾಡುವ ಸ್ಥಿತಿಗೆ ಗ್ರಾಹಕರು ಬಂದಿದ್ದಾರೆ.

ರಾಜಧಾನಿ ಬೆಂಗಳೂರಿಗೆ ರಾಮನಗರ, ಮಾಗಡಿ, ತುಮಕೂರು, ಬೆಂಗಳೂರು ಗ್ರಾಮಾಂತರ, ಹೊಸಕೋಟೆ, ನಂದಗುಡಿ, ಕನಕಪುರ ಸೇರಿದಂತೆ ವಿವಿಧೆಡೆಯಿಂದ ಪೂರೈಕೆ ಆಗುವ ತರಕಾರಿ ಪ್ರಸ್ತುತ ಗಣನೀಯವಾಗಿ ಇಳಿಮುಖವಾಗಿದೆ. ಬಿರುಬಿಸಿಲು, ಅಂತರ್ಜಲ ಮಟ್ಟ ಕುಸಿತ, ಕೊಳವೆ ಬಾವಿ ಬತ್ತಿರುವುದು ತರಕಾರಿ ಬೆಳೆಗಳ ಇಳುವರಿ ತಗ್ಗಿಸಿದೆ. ಹೀಗಾಗಿ ಪೂರೈಕೆ ಕಡಿಮೆಯಾಗಿದೆ.

ದಾವಣಗೆರೆ, ಪರ ರಾಜ್ಯಗಳಿಂದ ತರಕಾರಿ ಬರುತ್ತಿದ್ದು, ಸಾಗಾಟದ ವೆಚ್ಚದಿಂದ ಗ್ರಾಹಕರಿಗೆ ಬೆಲೆಯನ್ನು ಇನ್ನಷ್ಟು ಹೊರೆಯಾಗಿಸುತ್ತಿವೆ. ಸಗಟು ಮಾರುಕಟ್ಟೆಯೂ ಬೆಲೆ ಏರಿಕೆಗೆ ನಲುಗಿದೆ.

ಬೀನ್‌್ಸ ಬೆಳೆಯಲು ಹೆಚ್ಚಿನ ನೀರು ಬೇಕು. ಸದ್ಯದ ಬರ ಪರಿಸ್ಥಿತಿಯಲ್ಲಿ ಹೆಚ್ಚಿನದಾಗಿ ಬೀನ್‌್ಸ ಬೆಳೆಯುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಬೆಲೆ 200 ರೂ.ಗಳವರೆಗೂ ಏರಿಕೆಯಾಗಿದೆ. ಸೊಪ್ಪು, ಮೂಲಂಗಿ, ನವಿಲುಕೋಸು, ಹೀರೆಕಾಯಿ ಬೆಲೆಗಳು ಹೆಚ್ಚುತ್ತಿವೆ. ಸದ್ಯ ಕೆಜಿಗೆ ಇವುಗಳ ಬೆಲೆ ಸುಮಾರು 60 ರೂಪಾಯಿ ಇದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಈ ನಡುವೆ ಚಿಲ್ಲರೆ ವ್ಯಾಪಾರಿಗಳು ಸಗಟು ಮಾರುಕಟ್ಟೆಯಿಂದ ತರಕಾರಿ ತಂದು ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಬೆಲೆ ಹೆಚ್ಚಳದಿಂದ ಗ್ರಾಹಕರು ಖರೀದಿಗೆ ಮುಂದಾಗುತ್ತಿಲ್ಲ. ತಂದ ತರಕಾರಿಗಳು ಒಣಗಿ ಹೋಗುತ್ತವೆ. ಹಾಗಾಗಿ ಕೆಲ ದಿನ ಮಾರಾಟ ಮಾಡದಿರುವುದೇ ಒಳಿತು ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಮಳೆ ಆರಂಭವಾಗಿ ಎರಡು ತಿಂಗಳ ಬಳಿಕವೇ ಬೆಲೆ ಇಳಿಯಬಹುದು. ಬೆಲೆ ಏರಿಕೆ ಗ್ರಾಹಕರನ್ನು ಎಷ್ಟು ಕಂಗೆಡಿಸಿದೆಯೋ ಅಷ್ಟೇ ಚಿಲ್ಲರೆ ವ್ಯಾಪಾರಿಗಳನ್ನೂ ಚಿಂತೆಗೆ ನೂಕಿದೆ.

ತರಕಾರಿ ದರ ಪಟ್ಟಿ (ಪ್ರತಿ ಕೆಜಿಗೆ)
ನಾಟಿ ಬೀನ್ಸ್ 180 ರೂ.
ರಿಂಗ್‌ ಬೀನ್ಸ್- 140 ರೂ.
ಈರುಳ್ಳಿ – 40 ರೂ.
ಬೀಟ್ರೂಟ್‌- 80 ರೂ.
ಬೆಂಡೆಕಾಯಿ – 80 ರೂ.
ನವಿಲುಕೋಸು – 80 ರೂ.
ಹೀರೆಕಾಯಿ – 80 ರೂ.
ಟೊಮೇಟೋ – 40 ರೂ.
ಆಲೂಗೆಡ್ಡೆ- 50 ರೂ.
ಮೆಣಸಿನಕಾಯಿ- 90 ರೂ.
ಕ್ಯಾಪ್ಸಿಕಂ- 80 ರೂ.

RELATED ARTICLES

Latest News