ಬೆಂಗಳೂರು,ಮೇ5- ರಾಜ್ಯದಲ್ಲಿ ಮತ್ತು ದೇವೇಗೌಡರ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿರುವ ಪ್ರಜ್ವಲ್ ರೇವಣ್ಣ ಅಶ್ಲೀಲ ಸಿಡಿ ಪ್ರಕರಣ ಹಲವು ಆಯಾಮಗಳಿಗೆ ತಿರುಗುತ್ತಿದೆ. ಜೊತೆಗೆ ಒಂದಷ್ಟು ಸಂದೇಹ ಮತ್ತು ಪ್ರಶ್ನೆಗಳನ್ನೂ ಹುಟ್ಟು ಹಾಕಿದೆ. ಅದರಲ್ಲಿ ಒಂದು ಈ ಪ್ರಕರಣಕ್ಕೆ ದುಡ್ಡು ಹಾಕಿದವರು ಯಾರು? ಎಂಬ ಪ್ರಶ್ನೆ.
ಪ್ರಜ್ವಲ್ ವಿರುದ್ದ ಅಶ್ಲೀಲ ವಿಡಿಯೋ ಪ್ರಕರಣ, ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಮಾತ್ರ ದಾಖಲಾಗಿದ್ದವು. ಈಗ ಅತ್ಯಾಚಾರದ ಕೇಸ್ ಕೂಡ ದಾಖಲಾಗುವ ಮೂಲಕ ಕಾನೂನಿನ ಕುಣಿಕೆ ಬಿಗಿಯಾಗುತ್ತಿದೆ. ಪ್ರಜ್ವಲ್, ಭಾರತಕ್ಕೆ ಆಗಮಿಸುತ್ತಿದ್ದಂತೆಯೇ ಅವರನ್ನು ಬಂಧಿಸುವ ಸಾಧ್ಯತೆಯಿದೆ. ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರಿಗೆ ಜರ್ಮನಿಗೆ ಪ್ರವಾಸ ಮಾಡಲು ವೀಸಾದ ಅವಶ್ಯಕತೆಯಿಲ್ಲ ಎಂದು ವಿದೇಶಾಂಗ ಇಲಾಖೆಯ ಸಚಿವಾಲಯ ಹೇಳಿದೆ. ಆ ಮೂಲಕ, ಪ್ರಜ್ವಲ್ ಜರ್ಮನಿಗೆ ತೆರಳಲು ಅನುಕೂಲ ಮಾಡಿಕೊಟ್ಟಿಲ್ಲ ಎಂದು ಇಲಾಖೆ ಸ್ಪಷ್ಟ ಪಡಿಸಿದೆ.
ಇವೆಲ್ಲದರ ನಡುವೆ, ಭಾರೀ ಚರ್ಚೆಯ ವಿಷಯವಾಗಿರುವುದು ಇಷ್ಟೊಂದು ದೊಡ್ಡ ಮಟ್ಟಕ್ಕೆ ಅಶ್ಲೀಲ ಪೆನ್‌ಡ್ರೈವ್ ಬಿಡುಗಡೆ ಮಾಡಲು ಬಂಡವಾಳ ಹೂಡಿದ್ದು ಯಾರು ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಯಾಕೆಂದರೆ, ಇದಕ್ಕೆ ತಗಲುವ ಖರ್ಚು.ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಗೆ ಎರಡು ದಿನ ಇರುವಾಗ ವ್ಯವಸ್ಥಿತವಾಗಿ ಪೆನ್‌ಡ್ರೈವ್ ಮೂಲಕ ಪ್ರಚಾರ ನಡೆಸಿದ್ದು, ಕೋಟ್ಯಂತರ ರೂ. ಬಂಡವಾಳ ಹೂಡಿದ ಹಿಂದಿನ ಸೂತ್ರಧಾರ ಯಾರು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ಸಿಡಿ ಓಡಾಡುತ್ತಿದೆ ಎನ್ನುವುದು ಹಾಸನದಲ್ಲಿ ಸುಮಾರು ಒಂದು ವರ್ಷದಿಂದ ಚರ್ಚೆಯಲ್ಲಿದ್ದ ವಿಷಯ. ಈ ಪೆನ್‌ಡ್ರೈವ್ ಎಲ್ಲಾದರೂ ಮಾಧ್ಯಮದವರ ಕೈಗೆ ಸಿಕ್ಕಿದರೆ ಎಂದು ಪ್ರಜ್ವಲ್, ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದರು.
ಆದರೆ ಎಲ್ಲಾ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿ ದೇಶದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿ ಹೋಗಿದೆ. ಸುಮಾರು ನಲವತ್ತು ಸಾವಿರದಷ್ಟು ಪೆನ್‌ಡ್ರೈವ್ ಹಾಸನ ತಲುಪಲಿದೆ ಎನ್ನುವ ಸುದ್ದಿ ಮೊದಲ ಹಂತದ ಚುನಾವಣೆಗೆ ಒಂದು ವಾರದ ಮುಂಚೆಯಿಂದಲೇ ಓಡಾಡುತ್ತಿತ್ತು. ಏಪ್ರಿಲ್ 21ರ ಸುಮಾರಿಗೆ ಒಂದಷ್ಟು ಪೆನ್‌ಡ್ರೈವ್ ಹಾಸನಕ್ಕೆ ಬಂದಿದ್ದವು ಕೂಡಾ.
ಇದಾದ ಎರಡು ದಿನಗಳಲ್ಲಿ ಸುಮಾರು ನಲವತ್ತು ಸಾವಿರ ಪೆನ್‌ಡ್ರೈವ್‌ಗಳನ್ನು ಹಾಸನದ ವಿವಿಧ ಭಾಗಗಳಲ್ಲಿ ವ್ಯವಸ್ಥಿತವಾಗಿ ಹಂಚಲಾಗಿತ್ತು. ಬಹಿರಂಗ ಪ್ರಚಾರಕ್ಕೆ ಏಪ್ರಿಲ್ 24 ಕೊನೆಯ ದಿನವಾಗಿತ್ತು. ಆದರೆ ಪೆನ್‌ಡ್ರೈವ್ ಬಹಿರಂಗವಾಗುವುದು ಖಚಿತವಾಗುತ್ತಿದ್ದಂತೆಯೇ ಏಪ್ರಿಲ್ 20ರ ನಂತರ ಪ್ರಜ್ವಲ್ ರೇವಣ್ಣ ಬಹಿರಂಗ ಪ್ರಚಾರಕ್ಕೆ ಹೋಗಲೇ ಇಲ್ಲ.
ಏಪ್ರಿಲ್ 19ಕ್ಕೆ ಪ್ರತಾಪ್ ಸಿಂಹ, ಡಾ.ಅಶ್ವತ್ಥ ನಾರಾಯಣ್ ಜೊತೆಗೆ ಸಕಲೇಶಪುರದಲ್ಲಿ ಬಹಿರಂಗ ಪ್ರಚಾರಕ್ಕೆ ಹೋದ ನಂತರ, ಪ್ರಜ್ವಲ್ ಎಲ್ಲೂ ಕಾಣಿಸಿಕೊಂಡಿಲ್ಲ. ಈ ನಾಲ್ಕೈದು ದಿನಗಳಲ್ಲಿ ಕಾಂಗ್ರೆಸ್ ತನ್ನ ಪ್ರಚಾರದ ವೇಗವನ್ನು ಹೆಚ್ಚಿಸಿಕೊಂಡಿತು. ಏಪ್ರಿಲ್ 26ಕ್ಕೆ ಮತದಾನ ನಡೆಸಿದ ನಂತರ ಪ್ರಜ್ವಲ್ ವಿದೇಶಕ್ಕೆ ಹಾರಿದ್ದಾರೆ.