ಭೂಪಾಲ್,ಮೇ.5- ಅಕ್ರಮ ಮರಳು ಸಾಗಾಣಿಕೆ ಮಾಫಿಯಾಗೆ ಪೊಲೀಸ್ ಪೇದೆಯೊಬ್ಬರು ಬಲಿಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.ಮಧ್ಯಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅನ್ನು ತಡೆಯಲು ಬಂದ ಪೊಲೀಸ್ ಪೇದೆ ಮೇಲೆ ಹರಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಳು ಮಾಫಿಯಾಗೆ ಬಲಿಯಾಗಿರುವ ವ್ಯಕ್ತಿಯನ್ನು ಶೆಹ್ಡೋಲ್‌ನ ಸಹಾಯಕ ಸಬ್ ಇನ್ಸ್ ಪೆಕ್ಟರ್ ಮಹೇಂದ್ರ ಬಗ್ರಿ ಎಂದು ಗುರುತಿಸಲಾಗಿದೆ.ಬಗ್ರಿ ಅವರು ಇಬ್ಬರು ಕಾನ್‌ಸ್ಟೆಬಲ್‌ಗಳಾದ ಪ್ರಸಾದ್ ಕಾನೋಜಿ ಮತ್ತು ಸಂಜಯ್ ದುಬೆ ಅವರೊಂದಿಗೆ ಅಕ್ರಮ ಗಣಿಗಾರಿಕೆಯನ್ನು ಪರಿಶೀಲಿಸಲು ಸ್ಥಳಕ್ಕೆ ಹೋಗಿದ್ದರು.
ಈ ಸಂದರ್ಭದಲ್ಲಿ ವೇಗವಾಗಿ ಬಂದ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅನ್ನು ಬಗ್ರಿ ಮೇಲೆ ಹರಿಸಲಾಯಿತು ಹೀಗಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಅವರ ಜತೆಯಲ್ಲಿದ್ದ ಕಾನೋಜಿ ಮತ್ತು ದುಬೆ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಾಲಕ ಮತ್ತು ಟ್ರಕ್ ಮಾಲೀಕನ ಮಗನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಟ್ರ್ಯಾಕ್ಟರ್ ಮಾಲೀಕರು ಪರಾರಿಯಾಗಿದ್ದಾರೆ. ಟ್ರಾಕ್ಟರ್ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆಯಲ್ಲಿ ಟ್ರ್ಯಾಕ್ಟರ್ ಮಾಲೀಕನ ಮಗನೂ ಇದರಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಆತನನ್ನೂ ಬಂಧಿಸಲಾಗಿದೆ ಎಂದು ಹೆಚ್ಚುವರಿ ಮಹಾನಿರ್ದೇಶಕ ಡಿಸಿ ಸಾಗರ್ ತಿಳಿಸಿದ್ದಾರೆ. ಟ್ರಕ್‌ನ ಮಾಲೀಕ ಸುರೇಂದ್ರ ಸಿಂಗ್‌ಗೆ ಮಾಹಿತಿ ನೀಡುವವರಿಗೆ 30,000 ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.