ಬೆಂಗಳೂರು, ಮೇ 5- ಮಹಿಳೆಯ ಅಪಹರಣ ಆರೋಪ ಪ್ರಕರಣದಲ್ಲಿ ನಿನ್ನೆ ಸಂಜೆ ಬಂಧನವಾಗಿರುವ ಶಾಸಕ ಎಚ್.ಡಿ. ರೇವಣ್ಣ ಅವರನ್ನು ಇಂದು ಎಸ್‌ಐಟಿ ತೀವ್ರ ವಿಚಾರಣೆಗೆ ಒಳಪಡಿಸಿದೆ.ಸಿಐಡಿಯ ಎಸ್‌ಐಟಿ ಕಚೇರಿಯಲ್ಲಿ ರೇವಣ್ಣ ಅವರನ್ನು ತೀವ್ರ ವಿಚಾರಣೆ ಗೊಳಪಡಿಸಿದ್ದು, ಪ್ರಕರಣದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮಾಹಿತಿ ಕಲೆ ಹಾಕಲಾಗುತ್ತಿದೆ.
ಮೈಸೂರು ಜಿಲ್ಲೆಯ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಮಹಿಳೆಯನ್ನು ಯಾಕೆ ಅಪಹರಿಸಲಾಯಿತು? ಅಪಹರಿಸಿ ಅವರನ್ನು ಎಲ್ಲಿ ಇಡಲಾಗಿತ್ತು? ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿದೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ರೇವಣ್ಣ ಅವರಿಗೆ ಕೇಳಿದ್ದಾರೆ.
ಇದೇ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಸತೀಶ್ ಬಾಬು ಅವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧವೂ ಕೂಡ ವಿಚಾರಣೆ ನಡೆಸಿ ರೇವಣ್ಣ ಅವರಿಂದ ಹಲವು ಮಾಹಿತಿಗಳನ್ನುಪಡೆಯಲಾಗುತ್ತಿದೆ.
ಈ ಮಹಿಳೆ ಎಷ್ಟು ವರ್ಷದಿಂದ ನಿಮಗೆ ಪರಿಚಿತರು? ಭವಾನಿ ರೇವಣ್ಣ ಅವರು ಮನೆಯಲ್ಲಿಲ್ಲದ ಸಮಯದಲ್ಲಿ ಸ್ಟೋರ್ ರೂಂ ಹಾಗೂ ಅಡುಗೆ ಮನೆಯಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತೆ…? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಎಸ್‌ಐಟಿ ತೀವ್ರ ವಿಚಾರಣೆ ನಡೆಸಿದೆ.
ನಿಮ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ಎಲ್ಲಿ ವಾಸ ಮಾಡುತ್ತಿದ್ದರು. ಅವರ ಕೃತ್ಯ ನಿಮಗೆ ಗೊತ್ತಿರಲಿಲ್ಲವೇ. ಚುನಾವಣಾ ಸಂದರ್ಭದಲ್ಲಿ ಪೆನ್‌ಡ್ರೈವ್‌ಗಳ ಹಂಚಿಕೆ ನಿಮಗೆ ಗೊತ್ತಾಗಲಿಲ್ಲವೇ ಎಂದು ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರಿಗೆ ಪ್ರಶ್ನಿಸಿದ್ದಾರೆ. ಸಂಸದರ ಕಾರು ಚಾಲಕ ಕಾರ್ತಿಕ್ ಅವರು ಕೆಲಸ ಬಿಡಲು ಕಾರಣವೇನು, ಅವರು ಹಾಗೂ ಅವರ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿತ್ತೇ? ಎಂಬುದರ ಬಗ್ಗೆ ಕೂಡ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ರೇವಣ್ಣ ಅವರು ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದರೆ, ಇನ್ನು ಹಲವು ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎನ್ನಲಾಗಿದೆ. ಎಸ್‌ಐಟಿ ವಶದಲ್ಲಿರುವ ರೇವಣ್ಣ ಅವರನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.