Saturday, November 23, 2024
Homeರಾಜ್ಯಬಿಸಿಲಿನ ಝಳ ಮತ್ತು ಉಚಿತ ಗ್ಯಾರಂಟಿ ಎಫೆಕ್ಟ್, ರಾಜ್ಯದಲ್ಲಿ ವಿಪರೀತ ವಿದ್ಯುತ್‌ ಬಳಕೆ

ಬಿಸಿಲಿನ ಝಳ ಮತ್ತು ಉಚಿತ ಗ್ಯಾರಂಟಿ ಎಫೆಕ್ಟ್, ರಾಜ್ಯದಲ್ಲಿ ವಿಪರೀತ ವಿದ್ಯುತ್‌ ಬಳಕೆ

ಬೆಂಗಳೂರು,ಮೇ6- ಉಚಿತ ಗ್ಯಾರಂಟಿ, ತಾಪಮಾನ ಏರಿಕೆಯಿಂದಾಗಿ ರಾಜ್ಯದಲ್ಲಿ ವಿದ್ಯುತ್‌ ಬಳಕೆಯ ಪ್ರಮಾಣದ ವಿಪರೀತ ಹೆಚ್ಚಾಗುತ್ತಿದೆ. ಜನರ ಬೇಡಿಕೆ ನೀಗಿಸಲು ಇಂಧನ ಇಲಾಖೆ ಪಡಿಪಾಟಲು ಪಡುವಂತಾಗಿದೆ. ಮಳೆ, ಸಂಪನ್ಮೂಲಗಳ ಕೊರತೆಯಿಂದ ಉತ್ಪಾದನೆಯೂ ಕುಗ್ಗಿದೆ. ಇದರಿಂದ ರಾಜ್ಯ ಸರ್ಕಾರ ಮತ್ತೆ ಭಾರೀ ಪ್ರಮಾಣದಲ್ಲಿ ವಿದ್ಯುತ್‌ ಖರೀದಿಗೆ ಮುಂದಾಗಿದೆ.

ರಾಜ್ಯ ತೀವ್ರ ಬರಗಾಲ ಎದುರಿಸುತ್ತಿದೆ. ಮುಂಗಾರು ಪೂರ್ವ ಮಳೆಯೂ ಕೈ ಕೊಟ್ಟಿದೆ. ತಾಪಮಾನ ವಿಪರೀತ ಹೆಚ್ಚುತ್ತಿದೆ. ಮಳೆ ಬೀಳದ ಕಾರಣ ರಾಜ್ಯದ ಬಹುತೇಕ ಪ್ರಮುಖ ಜಲಾಶಯಗಳ ಒಡಲು ಬರಿದಾಗುತ್ತಿದೆ. ಇದರಿಂದ ರಾಜ್ಯದ ಪ್ರಮುಖ ಮೂರು ಜಲ ವಿದ್ಯುತ್‌ ಘಟಕಗಳಲ್ಲೂ ವಿದ್ಯುತ್‌ ಉತ್ಪಾದನೆ ಭಾಗಶಃ ಸ್ಥಗಿತವಾಗಿದೆ.

ಉಷ್ಣ ವಿದ್ಯುತ್‌ ಸ್ಥಾವರಗಳ ಮೂಲಕ ಹೆಚ್ಚಿನ ಉತ್ಪಾದನೆ ಮಾಡುತ್ತಿದೆಯಾದರೂ, ಈಗಿನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಎಸ್ಕಾಂಗಳು ವಿದ್ಯುತ್‌ ಬೇಡಿಕೆ ಈಡೇರಿಸಲು ಅಪಾರ ಪ್ರಮಾಣದಲ್ಲಿ ವಿದ್ಯುತ್‌ ಖರೀದಿ ಮಾಡುತ್ತಿವೆ.

ಗರಿಷ್ಠ ಮಟ್ಟ ತಲುಪಿದ ವಿದ್ಯುತ್‌ ಬಳಕೆ:
ರಾಜ್ಯದಲ್ಲಿ ಸರಾಸರಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕವಿದೆ. ಇದರ ಪರಿಣಾಮವಾಗಿ ವಿದ್ಯುತ್‌ ಬಳಕೆ ತೀವ್ರವಾಗಿದೆ. ಇಂಧನ ಇಲಾಖೆ ನೀಡಿರುವ ಮಾಹಿತಿಯಂತೆ, ಏಪ್ರಿಲ್‌ ಅಂತ್ಯಕ್ಕೆ ರಾಜ್ಯದ ವಿದ್ಯುತ್‌ ಬಳಕೆ 330.50 ಮೆಗಾ ವ್ಯಾಟ್‌ಗೆ ತಲುಪಿದೆ.

ಕಳೆದ ವರ್ಷ ಏಪ್ರಿಲ್‌ 30ಕ್ಕೆ ರಾಜ್ಯದ ವಿದ್ಯುತ್‌ ಬಳಕೆ 230 ಮೆಗಾ ವ್ಯಾಟ್‌ ಇತ್ತು. ಅಂದರೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಏಪ್ರಿಲ್‌ ಅಂತ್ಯಕ್ಕೆ ರಾಜ್ಯದ ಒಟ್ಟು ವಿದ್ಯುತ್‌ ಬಳಕೆ 100 ಮೆಗಾವ್ಯಾಟ್‌ನಷ್ಟು ಹೆಚ್ಚಳವಾಗಿದ್ದು, ರಾಜ್ಯದ ಗರಿಷ್ಠ ವಿದ್ಯುತ್‌ ಬೇಡಿಕೆ 16,693 ಮೆಗಾ ವ್ಯಾಟ್‌ಗೆ ತಲುಪಿದೆ.

ರಾಜ್ಯದ ಪ್ರಮುಖ ಮೂರು ಜಲ ವಿದ್ಯುತ್‌ ಘಟಕಗಳಿಂದ ಪ್ರಸಕ್ತ ವರ್ಷ 1,638 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಕಳೆದ ವರ್ಷ ಇದು 2,212 ಮೆಗಾವ್ಯಾಟ್‌ ಇತ್ತು. ಅಂದರೆ ಈ ವರ್ಷ ಸುಮಾರು 574 ಮೆಗಾವ್ಯಾಟ್‌ ಕೊರತೆ ಉಂಟಾಗಿದೆ.

ಮೂರು ಜಲ ವಿದ್ಯುತ್‌ ಘಟಕಗಳಿಂದ ಈ ವರ್ಷದ ನಾಲ್ಕು ತಿಂಗಳಲ್ಲಿ (ಏಪ್ರಿಲ್‌ 30ಕ್ಕೆ) 18.97 ಮೆಗಾವ್ಯಾಟ್‌ ವಿದ್ಯುತ್‌ ಮಾತ್ರ ಉತ್ಪಾದನೆಯಾಗಿದೆ ಎಂದು ಇಂಧನ ಇಲಾಖೆ ತಿಳಿಸಿದೆ.

ಇನ್ನು ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳಿಂದ ಹೆಚ್ಚಿನ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ರಾಯಚೂರು ಉಷ್ಣ ವಿದ್ಯುತ್‌ ಸ್ಥಾವರ ಏಪ್ರಿಲ್‌ ತಿಂಗಳಲ್ಲಿ 783 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಿದೆ. ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರದಿಂದ 756 ಮೆಗಾವ್ಯಾಟ್‌, ಯರಮರಸ್‌ ಉಷ್ಣ ವಿದ್ಯುತ್‌ ಸ್ಥಾವರದಿಂದ (ವೈಟಿಪಿಎಸ್‌) 659 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗಿದೆ.

ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳು, ಜಲ ವಿದ್ಯುತ್‌ ಘಟಕಗಳು, ಸೋಲಾರ್ನಿಂದ ಏ.30ರಂದು ಒಟ್ಟು 96 ಮಿಲಿಯನ್‌ ಯೂನಿಟ್‌ ವಿದ್ಯುತ್‌ ಉತ್ಪಾದನೆ ಮಾಡಿದೆ ಎಂದು ಕೆಪಿಟಿಸಿಎಲ್‌ ಮಾಹಿತಿ ನೀಡಿದೆ.

ವಿದ್ಯುತ್‌ ಖರೀದಿ ಗಣನೀಯ ಹೆಚ್ಚಳ:
ಏರುತ್ತಿರುವ ತಾಪಮಾನ, ಬರಿದಾದ ಜಲಾಶಯ, ಹೆಚ್ಚುತ್ತಿರುವ ವಿದ್ಯುತ್‌ ಬೇಡಿಕೆಯನ್ನು ಪೂರೈಸಲು ಎಸ್ಕಾಂಗಳಿಗೆ ವಿದ್ಯುತ್‌ ಖರೀದಿ ಅನಿವಾರ್ಯವಾಗಿದೆ. 2024 ಜನವರಿಯಿಂದ ಏಪ್ರಿಲ್‌ವರೆಗೆ ಒಟ್ಟು 4,811 ಮಿಲಿಯನ್‌ ಯೂನಿಟ್‌ ವಿದ್ಯುತ್‌ ಖರೀದಿ ಮಾಡಲಾಗಿದೆ.

ದಾಮೋದರ್‌ ವ್ಯಾಲಿ ಕಾರ್ಪೊರೇಷನ್‌ನಿಂದ 4 ತಿಂಗಳಲ್ಲಿ ಸುಮಾರು 1,163 ಮಿಲಿಯನ್‌ ಯುನಿಟ್‌, ಉಡುಪಿ ಪವರ್‌ ಕಾರ್ಪೊರೇಷನ್‌ ಲಿಮಿಟೆಡ್‌ನಿಂದ ಸುಮಾರು 2,196 ಮಿಲಿಯನ್‌ ಯುನಿಟ್‌ ವಿದ್ಯುತ್‌ ಖರೀದಿ ಮಾಡಲಾಗಿದೆ. ಅನ್ಯ ರಾಜ್ಯಗಳಿಂದ ಸುಮಾರು 1,452 ಮಿಲಿಯನ್‌ ಯುನಿಟ್‌ ವಿದ್ಯುತ್‌ ಖರೀದಿ ಮಾಡಲಾಗಿದೆ ಎಂದು ಇಂಧನ ಇಲಾಖೆ ಅಂಕಿಅಂಶ ನೀಡಿದೆ.

ಜನವರಿ ತಿಂಗಳಲ್ಲಿ ಒಟ್ಟು ಖರೀದಿಸಲ್ಪಟ್ಟ ವಿದ್ಯುತ್‌ 1,143 ಮಿಲಿಯನ್‌ ಯೂನಿಟ್‌ ಫೆಬ್ರವರಿಯಲ್ಲಿ 1,198 ಮಿಲಿಯನ್‌ ಯುನಿಟ್‌, ಮಾರ್ಚ್‌ನಲ್ಲಿ 1,244 ಮಿಲಿಯನ್‌ ಯೂನಿಟ್‌, ಏಪ್ರಿಲ್‌ ತಿಂಗಳಲ್ಲಿ 1,226 ಮಿಲಿಯನ್‌ ಯುನಿಟ್‌ ವಿದ್ಯುತ್‌ ಖರೀದಿ ಮಾಡಲಾಗಿದೆ.

RELATED ARTICLES

Latest News